ಕಾಂಗ್ರೆಸ್‌ನಿಂದ ಜನ ವಿರೋಧಿ ನೀತಿ
ಜೆಡಿಎಸ್ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಆರೋಪ, ಕೇಶವ್ ಆಯ್ಕೆ ಖಚಿತ
ಚಿಂತಾಮಣಿ: ಜನ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಕಾಂಗ್ರೆಸ್ ಅನ್ನು ಜನ ತಿರಸ್ಕರಿಸಿ, ಜೆಡಿಎಸ್ ಅಭ್ಯರ್ಥಿ ಕೆ.ಕೇಶವ್ ಅವರನ್ನು ಆಯ್ಕೆ ಮಾಡುವುದ ಖಚಿತ ಎಂದ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಹೇಳಿದರು. ತಾಲೂಕಿನ ಕೈವಾರ ಗ್ರಾಮದಲ್ಲಿ ಶುಕ್ರವಾರ ಜೆಡಿಎಸ್‌ನ ನೂರಾರು ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿ, ಮತಯಾಚಿಸಿದರು. ಕೈವಾರ ಗ್ರಾಮದ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದಲ್ಲಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಪ್ರಚಾರ ಭಾಷಣ ಮಾಡಿ, ಜೆಡಿಎಸ್ ಅಭ್ಯರ್ಥಿ ಕೇಶವ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿಕೊಂಡರು.
ನಂತರ ಜೆಡಿಎಸ್ ತಾಲೂಕು ಅಧ್ಯಕ್ಷ ಟಿ.ಎನ್.ರಾಜಗೋಪಾಲ್ ಮಾತನಾಡಿ, ಮುನಿಯಪ್ಪ ಅವರನ್ನು ಸೋಲಿಸಿ, ಕೋಲಾರ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿ ಎಂದರು. ಜೆಡಿಎಸ್ ಮುಂಖಂಡರಾದ ಎಪಿಎಂಸಿ ಸುಬ್ಬಾರೆಡ್ಡಿ, ಎಚ್.ನಾರಾಯಣಸ್ವಾಮಿ, ಅರುಣ್‌ಬಾಬು, ಬನಹಳ್ಳಿ ರವಿ, ಕೆ.ಎಚ್.ಮಂಜುನಾಥ್, ರಾಮಚಂದ್ರಪ್ಪ, ಲಕ್ಷ್ಮಿನಾರಾಯಣ,ಚಂದ್ರಪ್ಪ, ದೇವರಾಜ್, ಜಯರಾಂ, ಕೃಷ್ಣಪ್ಪ, ನಾರಾಯಣಪ್ಪ, ನಾಗರಾಜ್, ರಾಚಾಪುರ ಶ್ರೀನಿವಾಸ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
ಜೆಡಿಎಸ್ ಗೆಲವು ನಿಶ್ಚಿತ
ಮಾಲೂರು: ಬಿಜೆಪಿಯ ಬೈಲು ಭರೋ, ಕಾಂಗ್ರೆಸ್‌ನ ಜೇಬ್ ಭರೋ ನಡುವೆ ಕೆರೆಗಳಿಗೆ ನೀರು ಭರೋ ಎನ್ನುತ್ತಿರುವ ಜೆಡಿಎಸ್‌ಗೆ ಕ್ಷೇತ್ರದ ಜನತೆ ಬೆಂಬಲಿಸಲಿದ್ದಾರೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಗೌಡ ಹೇಳಿದರು. ಪಟ್ಟಣದ ಜೆಡಿಎಸ್ ಕಚೇರಿ ಬಳಿ ಪತ್ರಕರ್ತರೊಡನೆ ಮಾತನಾಡಿ, ಕಳೆದೆರಡು ದಶಕಗಳಿಂದ ಸತತ ಬರಗಾಲಕ್ಕೆ ತುತ್ತಾಗುತ್ತಿದ್ದರೂ, ಇದುವೆರಗೂ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳಿಸದ ಕೇಂದ್ರ ಸರ್ಕಾರದ ಪ್ರತಿನಿಧಿ ಕೆ.ಎಚ್. ಮುನಿಯಪ್ಪ ಹಾಗೂ ರಾಜ್ಯ ಪ್ರತಿನಿಧಿಸುತ್ತಿದ್ದ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ರವರು ಚುನಾವಣೆ ಹತ್ತಿರ ಬರುತ್ತಿದ್ದ ಹಾಗೆ ಶಾಶ್ವತ ನೀರಾವರಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು. ಮುಖಂಡ ನಂಜೇಗೌಡ ಮಾತನಾಡಿದರು.
ಮುನಿಯಪ್ಪ ಸೋಲು ನಿಕ್ಕಿ
ಚಿಂತಾಮಣಿ: ಕುತಂತ್ರ ರಾಜಕಾರಣಿ ಕೆ.ಎಚ್.ಮುನಿಯಪ್ಪ ಅವರನ್ನು ಸೋಲಿಸಿ. ಜೆಡಿಎಸ್ ಅಭ್ಯರ್ಥಿ ಕೆ.ಕೇಶವ್ ಅವರನ್ನು ಬೆಂಬಲಿಸಿ, ಗೆಲ್ಲಿಸಿ ಎಂದು ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ರೆಡ್ಡಿ ಹೇಳಿದರು. ತಾಲೂಕಿನ ಅಂಬಾಜಿದುರ್ಗ ಹೋಬಳಿ ಶೆಟ್ಟಹಳ್ಳಿ ಮತ್ತು ಕೋಟಗಲ್ ಗ್ರಾಮಗಳಲ್ಲಿ ಜೆಡಿಎಸ್ ಪರ ಪ್ರಚಾರ ನಡೆಸಿದ ಅವರು, ವಿರೋಧ ಪಕ್ಷಗಳ ಜತೆ ಒಪ್ಪಂದ ಮಾಡಿಕೊಂಡು 6 ಬಾರಿ ಗೆದ್ದಿರುವ ಮುನಿಯಪ್ಪ ಅವರಿಗೆ ಈ ಬಾರಿ ಸೋಲು ಖಚಿತ ಎಂದರು. ಈ ವೇಳೆ, ನಾಗರಾಜ್, ಬಾಬು, ಅಮರ್, ನಾರಯಣಸ್ವಾಮಿ, ಕೋನಪ್ಪಲ್ಲಿ ವೆಂಕಟಶಿವಾರೆಡ್ಡಿ, ಎ.ಎನ್.ಆರ್.ನಾಗರಾಜ್, ಚಿನ್ನಸಂದ್ರ ಚಂದ್ರಶೇಖರ್ ಸೇರಿ ಅನೇಕರಿದ್ದರು.