ಕಾರ್ಮಿಕರ ಪರ ಹೋರಾಟಕ್ಕೆ ಸಿದ್ಧ
ಕೆಜಿಎಫ್: ಸುಪ್ರೀಂರ್ಕೋಟ್ ಆದೇಶದಂತೆ ಕೆಜಿಎಫ್ ಚಿನ್ನದ ಗಣಿಗಳ ಪುನಶ್ಚೇತನದಿಂದ ಕಾರ್ಮಿಕ ಕುಟುಂಬಗಳಿಗೆ ಪುರ್ನವಸತಿ ಒದಗಿಸಬೇಕು, ಪರಿಸರ ಹಾನಿಯಾಗದಂತೆ ಎಚ್ಚರ ವಹಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಬೇಕು. ಕಾರ್ಮಿಕರಿಗೆ ವಂಚನೆ ಮಾಡಲು ವಿದೇಶಿ ಕಂಪನಿಗಳು ಮುಂದಾದರೆ ಹೋರಾಟಕ್ಕೆ ಸಿದ್ಧ ಎಂದು ಸಮಾಜ ಪರಿವರ್ತನಾ ಸಂಘದ ಮುಖ್ಯಸ್ಥ ಎಸ್.ಆರ್. ಹಿರೇಮಠ್ ಹೇಳಿದರು.
ಆಪ್ ಚುನಾವಣಾ ಅಭ್ಯರ್ಥಿ ರಾಮಯ್ಯ ಪರ ಪ್ರಚಾರ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಬಳ್ಳಾರಿ ಭಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿ ಜೈಲು ಸೇರಿರುವ ಜನಾರ್ಧನರೆಡ್ಡಿ ಅವರ ಹಾದಿಯಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಸೋದರರು ಜೈಲು ಸೇರುವುದು ಖಚಿತ. ಈ ಹಿಂದೆ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದ ಮಾಜಿ ಸಚಿವ ಸಂತೋಶ್‌ಲಾಡ್ ಅವರನ್ನು ಸಂಪುಟದಿಂದ ಕೈಬಿಡಲು ಹಲವು ಹೋರಾಟ ನಡೆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತೋಷ್‌ಲಾಡ್ ಅವರನ್ನು ಕೈಬಿಡದೆ ಸಂತೋಷ್‌ಲಾಡ್ ಅಕ್ರಮ ಗಣಿಗಾರಿಕೆ ಹಣದಿಂದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಪ್ರಮುಖ ಕಾರಣ ಎಂದು ಆರೋಪಿಸಿದರು.
ರಾಮಯ್ಯ ಮಾತನಾಡಿ, ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಜಿಲ್ಲೆಯ ಜನರು ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಬೇಕು ಎಂದರು. ಗಾಂಧಿ ವೃತ್ತದಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಮಾಲಾರ್ಪನೆ ಮಾಡಿ ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಕಾಂಗ್ರೆಸ್ ಪರ ಶಾಸಕ ವರ್ತೂರ್
ಕೋಲಾರ: ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್. ಮುನಿಯಪ್ಪರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಶಾಸಕ ವರ್ತೂರು ಪ್ರಕಾಶ್ ಮತದಾರರಲ್ಲಿ ಮನವಿ ಮಾಡಿದರು.
ನಗರದ ವಿವಿಧ ಬಡಾವಣೆಗಳಲ್ಲಿ ಪಾದಯಾತ್ರೆ ಮೂಲಕ ಬಿರುಸಿನ ಪ್ರಚಾರ ನಡೆಸಿದ ಶಾಸಕರು, ಪ್ರತಿ ಮನೆಗೂ ತೆರಳಿ ಮತಯಾಚಿಸಿ, ಜಾತ್ಯತೀತ ಶಕ್ತಿಗಳ ಬಲವರ್ಧನೆಗಾಗಿ, ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಕೈ ಬಲಪಡಿಸಲು ಅಹಿಂದ ವರ್ಗದವರು ಒಗ್ಗಟ್ಟಾಗಿ ಬೆಂಬಲ ನೀಡಬೇಕಾಗಿ ತಿಳಿಸಿದರು.
ಬೆಗ್ಲಿ ಪ್ರಕಾಶ್, ರಾಜಣ್ಣ ಮಾತನಾಡಿದರು, ಶಾಸಕರು ಕುರುಬರಪೇಟೆ, ಟಮಕ ಮತ್ತಿತರ ಕಡೆ ಪಾದಯಾತ್ರೆ ನಡೆಸುವ ಮೂಲಕ ಕೆ.ಎಚ್. ಮುನಿಯಪ್ಪ ಪರ ಮತ ಯಾಚಿಸಿದರು. ರಘುರಾಂ, ನಜೀರ್ ಅಹಮದ್, ರಾಜೇಶ್, ಹಾಲಿ ಸದಸ್ಯ ಸೋಮಶೇಖರ್, ಅಶ್ವಿನ್, ರಘು, ಸೋಮಣ್ಣ, ರಾಕೇಶ್, ಸಿಟಿಒ ರಾಜೇಶ್, ನುಸ್ರುತ್ ಇದ್ದರು.