ಪೈಪ್ಲೈನ್ ದುರಸ್ತಿಗೆ ಆಗ್ರಹ
ಬಂಗಾರಪೇಟೆ: ಬೇಸಿಗೆಯಲ್ಲಿ ಕುಡಿಯುವ ನೀರು ತೊಂದರೆ ಹೇಳತೀರದಲ್ಲಿ. ಅಂಥದ್ದರಲ್ಲಿ ಕೊಳವೆ ಬಾನಿ ನೀರು ನಿತ್ಯ ಪೋಲಾಗುತ್ತಿದ್ದರೂ ಗ್ರಾಪಂ ಸಿಬ್ಬಂದಿ ನಿರ್ಲಕ್ಷ್ಯ ವಹಿಸುತ್ತಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ ಪ್ರತಿದಿನ ಗ್ರಾಮಸ್ಥರು ನೀರು ಸಂಗ್ರಹಿಸುವುದೇ ದೊಡ್ಡ ಕೆಲಸವಾಗಿದೆ.ಪರಿಸ್ಥಿತಿ ಹೀಗಿರುವಾಗ ಗ್ರಾಮಕ್ಕೆ ಪೂರೈಕೆ ಮಾಡುವ ಪಂಚಾಯ್ತಿ ವ್ಯಾಪ್ತಿಯ ಮೈರಾಡ ಕಚೇರಿ ಬಳಿಯಿರುವ ಕೊಳವೆ ಬಾವಿಯ ಪೈಪ್ ಲೈನ್ ಒಡೆದು ಹೋಗಿ ತಿಂಗಳಾದರೂ ಇನ್ನು ದುರಸ್ತಿಗೊಳಿಸಿಲ್ಲ. ಪಂಚಾಯ್ತಿಯ ಜಲಗಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ಪೈಪ್ ಒಡೆದಿದ್ದರಿಂದ ನೀರು ರಸ್ತೆ ಮಧ್ಯೆ ಹರಿಯುತ್ತಿದೆ. ಇದು ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಚುನಾವಣೆ ಕೆಲಸದ ನೆಪ ಹೇಳಿ ಸಿಬ್ಬಂದಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಸಿಬ್ಬಂದಿ ಇತ್ತ ಕಡೆ ಗಮನವಹಿಸಿ, ನೀರು ಪೋಲಾಗದಂತೆ ತಡೆಯಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ತಾಯಿ, ಮಗು ಸಾವಿಗೆ ಪೌಷ್ಟಿಕತೆ ಕಾರಣ
ಗೌರಿಬಿದನೂರು: ಆಧುನಿಕ ಯುಗದಲ್ಲೂ ಹೆಚ್ಚಿನ ತಾಂತ್ರಿಕ ಸೌಲಭ್ಯಗಳಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಪ್ರಸೂತಿ ವೇಳೆ ತಾಯಿ ಮತ್ತು ಮಗು ಅಪೌಷ್ಟಿಕತೆಯಿಂದ ಮೃತರಾಗುತ್ತಿರುವುದು ವಿಷಾದನೀಯ ಎಂದು ಡಾ.ಶಶಿಧರ್ ಅಭಿಪ್ರಾಯಪಟ್ಟರು. ಪಟ್ಟಣದ ಸಮುದಾಯ ಭವನ ಮಾನಸ ಆಸ್ಪತ್ರೆಯ ಹತ್ತಿರ ಹಮ್ಮಿಕೊಳ್ಳಲಾಗಿದ್ದ ಮೆಡಿಕಲ್ ಮತ್ತು ಟ್ರಸ್ಟ್ ಮತ್ತು ತಾಲೂಕು ವೈದ್ಯಾಧಿಕಾರಿಗಳ ವತಿಯಿಂದ ರಾಷ್ಟ್ರೀಯ 'ತಾಯ್ತನ ಸುರಕ್ಷಾ ದಿನ' ಮತ್ತು ಆಶಾ ಕಾರ್ಯಕರ್ತರಿಗೆ ಒಂದು ದಿನ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ತಾಲೂಕು ವೈದ್ಯಾಧಿಕಾರಿ ಡಾ.ಅನಂತಕುಮಾರ್ ಮಾತನಾಡಿದರು. ಶಿಬಿರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವೈದ್ಯಕೀಯ ಕಾಲೇಜು ವೈದ್ಯರಾದ ದಿವಾಕರ್ ಮತ್ತು ವೈದ್ಯಕೀಯ ತಂಡ ಭಾಗವಹಿಸಿತ್ತು.
ಜೆಡಿಎಸ್ಗೆ ಬೆಂಬಲ
ಮಾಲೂರು: ಆರ್ಪಿಐ ಮತ್ತು ಸಮತಾ ಸೈನಿಕ ದಳ ಜೆಡಿಎಸ್ಗೆ ಬೆಂಬಲ ನೀಡುತ್ತಿವೆ ಎಂದು ಕೆಲವು ದಲಿತ ಸಂಘಟನೆಗಳ ಮುಖಂಡರು ಹೇಳಿರುವುದು ತಪ್ಪು ಎಂದು ಸಮತಾ ಸೈನಿಕ ದಳದ ತಾಲೂಕು ಅಧ್ಯಕ್ಷ ಗೋವಿಂದಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಹೇಳಿಕೆ ನೀಡಿ, ಆರ್ಪಿಐ ಪಕ್ಷ ಚುನಾವಣಾ ಕಣದಲ್ಲಿದ್ದು, ಜಿಲ್ಲೆಯ ಎಲ್ಲ ದಲಿತ ಬಂದುಗಳು ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
ಬೈಕ್ ರ್ಯಾಲಿ
ಕೋಲಾರ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲೆಯ ಮತದಾರರಲ್ಲಿ ಅರಿವು ಮೂಡಿಸಲು ಬೈಕ್ ರ್ಯಾಲಿಯನ್ನು ಏ.12 ರಂದು ಬೆಳಿಗ್ಗೆ 10ಗಂಟೆಗೆ ಕೋಲಾರ ನಗರದ ಪ್ರವಾಸಿ ಮಂದಿರದಿಂದ ಹಮ್ಮಿಕೊಳ್ಳಲಾಗಿದೆ. ಬೈಕ್ ರ್ಯಾಲಿಯನ್ನು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಿ.ಕೆ. ರವಿ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಚುನಾವಣಾ ಸ್ವೀಪ್ ಸಮಿತಿ ಅಧ್ಯಕ್ಷ ಆರ್. ವಿನೋತ್ ಪ್ರಿಯ ಮುಖಂಡತ್ವದಲ್ಲಿ ಏರ್ಪಡಿಸಲಾಗಿದೆ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ದ್ವಿಚಕ್ರ ವಾಹನ ಹೊಂದಿರುವ ಎಲ್ಲಾ ಕಾಲೇಜು ವಿದ್ಯಾರ್ಥಿಗಳು ಬೈಕ್ ರ್ಯಾಲಿಯಲ್ಲಿ ಭಾಗವಹಿಸಲು ಕೋರಿದೆ.
ಜಾತ್ರೆ ನಿಷೇಧ
ಕೋಲಾರ: ಲೋಕಸಭಾ ಚುನಾವಣೆಯನ್ನು ಮುಕ್ತವಾಗಿ ಹಾಗೂ ಶಾಂತಿಯುತವಾಗಿ ನಡೆಸಲು ಕೋಲಾರ ಜಿಲ್ಲೆಯ ಎಲ್ಲಾ 6 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುವ ಏ.17 ಹಾಗೂ ಮತ ಎಣಿಕೆ ದಿನವಾದ ಮೇ 16 ರಂದು ಯಾವುದೇ ಜಾತ್ರೆ ಸಂತೆ ಇತ್ಯಾದಿಗಳನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ಕೆ. ರವಿ ಆದೇಶ ಹೊರಡಿಸಿದ್ದಾರೆ.
ಮುಚ್ಚಲು ಆದೇಶ
ಕೋಲಾರ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಏ.15ರ ಸಂಜೆ 6 ಗಂಟೆಯಿಂದ ಏ.17 ಮಧ್ಯರಾತ್ರಿವರೆಗೂ ಕೋಲಾರ ಜಿಲ್ಲೆಯ ಎಲ್ಲಾ ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರೀತಿಯ ಮದ್ಯದಂಗಡಿಗಳನ್ನು ಮುಚ್ಚಲು ಮತ್ತು ಒಣ ದಿನಗಳನ್ನು ಆಚರಿಸಲು ಜಿಲ್ಲಾಧಿಕಾರಿ ಡಿ.ಕೆ. ರವಿ ಆದೇಶ ಹೊರಡಿಸಿದ್ದಾರೆ.
ಮೆರವಣಿಗೆ
ಕೋಲಾರ: ಮತದಾರರಲ್ಲಿ ಜಾಗೃತಿ ಮೂಡಿಸಲು ಏ.14ರಂದು ತಾಲೂಕಿನ ವೇಮಗಲ್ನಲ್ಲಿ ಪಂಜಿನ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಪಂಜಿನ ಮೆರವಣಿಗೆ ಸ್ವೀಪ್ ಸಮಿತಿ ಅಧ್ಯಕ್ಷರೂ ಆಗಿರುವ ಜಿಪಂ ಸಿಇಒ ವಿನೋತ್ ಪ್ರಿಯಾ ಮುಖಂಡತ್ವದಲ್ಲಿ ಏರ್ಪಡಿಸಲಾಗಿದೆ.
ಮಗು ಸಾವು
ಶಿಡ್ಲಘಟ್ಟ: ಮನೆಯ ಹೊರಗೆ ಮಲಗಿದ್ದ ಬಾಲಕಿಯ ಮೇಲೆ ಟೆಂಪೋ ಹರಿದು ಬಾಲಕಿ ಮೃತಪಟ್ಟ ಘಟನೆ ದಿಬ್ಬೂರ ಹಳ್ಳಿಯ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶ್ರೇಯಾಂಕ (4) ಮೃತ ಪಟ್ಟ ಬಾಲಕಿ. ಪೂಸಗಾನದೊಡ್ಡಿಯ ಗಂಗಾದರ ಎಂಬವರ ಮಗಳು ಶ್ರೇಯಾಂಕ ಬೇಸಿಗೆ ದಗೆಯಿಂದಾಗಿ ಮನೆಯ ಹೊರಗೆ ಮಲಗಿದ್ದಾಗ ಘಟನೆ ಸಂಭವಿಸಿದೆ. ತೀವ್ರ ಗಾಯಗೊಂಡ ಮಗುವನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದೆ. ಟೆಂಪೋ ಚಾಲಕ ವೆಂಕಟೇಶ್ ಪರಾರಿಯಾಗಿದ್ದಾನೆ. ದಿಬ್ಬೂರ ಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಟೆಂಪೋ ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
10 ಮಂದಿ ಸೆರೆ
ಶಿಡ್ಲಘಟ್ಟ: ತಾಲೂಕಿನ ಅಜ್ಜಕದೀರೇನಹಳ್ಳಿ ವ್ಯಾಪ್ತಿಯಲ್ಲಿ ಕೋಳಿ ಪಂದ್ಯ ಆಡುತ್ತಿದ್ದವರನ್ನು ಬಂಧಿಸಲಾಗಿದೆ. ತಾಲೂಕಿನ ದಿಬ್ಬೂರಹಳ್ಳಿ ಠಾಣೆ ವ್ಯಾಪ್ತಿಯ ಅಜ್ಜ ಕದೀರೇನಹಳ್ಳಿ ಸಮೀಪದ ತೋಪಿನಲ್ಲಿ ಕೋಳಿ ಪಂದ್ಯ ಆಡುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿ, 10 ಮಂದಿಯನ್ನು ಬಂಧಿಸಿ 5,170 ರು, 3 ಕೋಳಿ ವಶಕ್ಕೆ ಪಡೆದಿದ್ದಾರೆ. ದಿಬ್ಬೂರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
19 ಕುರಿಗಳ ಸಾವು
ಗೌರಿಬಿದನೂರು: ಶಾರ್ಟ್ ಸರ್ಕೀಟ್ನಿಂದ ತೊಗರಿ ಹೊಟ್ಟಿನ ರಾಶಿಗೆ ಬೆಂಕಿ ತಗುಲಿದ ಪರಿಣಾಮ ಕೊಟ್ಟಿಗೆ ತುಂಬ ಹೊಗೆ ಆವರಿಸಿ 19 ಕುರಿಗಳು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಗೌರಿಬಿದನೂರು ತಾಲೂಕು ಮಂಚೇನಹಳ್ಳಿ ಬಳಿ ನಡೆದಿದೆ. ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಬೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶಿಸಿಲಿಸಿದರು.