ಬಿಜೆಪಿ ಪರ ನಟಿ ರಕ್ಷಿತಾ ಪ್ರಚಾರ
ಬಿರು ಬಿಸಿಲಿನಲ್ಲೂ ಗ್ರಾಮಗಳ ಸಂಚಾರ, ನಟಿ ದರ್ಶನಕ್ಕೆ ಮುಗಿಬಿದ್ದ ಮಹಿಳೆಯರು
ಕನ್ನಡಪ್ರಭ ವಾರ್ತೆ, ಕೋಲಾರ, ಏ.11
ಲೋಕಸಭಾ ಚುನಾವಣೆಗೆ ಇನ್ನು ಏಳು ದಿನ ಮಾತ್ರ ಬಾಕಿ ಉಳಿದಿದ್ದು, ಬಿಜೆಪಿ ಮತದಾರರನ್ನು ಸೆಳೆಯಲು ನಾನಾ ರೀತಿಯಲ್ಲಿ ಕಸರತ್ತು ನಡೆಸುತ್ತಿದೆ.
ಶುಕ್ರವಾರ ಕೋಲಾರ ತಾಲೂಕಿನ ನರಸಾಪುರ, ವೇಮಗಲ್ ಹೋಬಳಿಗೆ ಸೇರಿದ ವಿವಿಧ ಗ್ರಾಮಗಳಲ್ಲಿ ಚಿತ್ರ ನಟಿ ರಕ್ಷಿತಾ ಅವರು ಬಿರು ಬಿಸಿಲು ಲೆಕ್ಕಿಸದೆ ಬಿಜೆಪಿಯ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಪರವಾಗಿ ಮತಯಾಚನೆ ಮಾಡಿದರು.
ದೇಶದ ಅಭಿವೃದ್ಧಿಗಾಗಿ, ಸದೃಢ ಭಾರತ ನಿರ್ಮಾಣಕ್ಕೆ ಈ ಬಾರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕಾಗಿದೆ. ಇದಕ್ಕೆ ಕೋಲಾರ ಲೋಕಸಭಾ ಕ್ಷೇತ್ರದ ಪ್ರತಿ ಮತದಾರರು ನಾರಾಯಣಸ್ವಾಮಿ ಅವರನ್ನು ಗೆಲ್ಲಿಸುವ ಮೂಲಕ ಮೋದಿ ಆಶಯಗಳನ್ನು ಈಡೇರಿಸಬೇಕೆಂದರು.
6 ಬಾರಿ ಹಿರಿಯ ಕಾಂಗ್ರೆಸ್ ಮುಖಂಡರಾದ ಮುನಿಯಪ್ಪ ಅವರಿಗೆ ಆಶೀರ್ವಾದ ಮಾಡಿದ್ದೀರಾ. ಈ ಬಾರಿ ಮೋದಿಯನ್ನು ಪ್ರಧಾನಿಯಾಗಿ ನೋಡಬೇಕಾದ ಅನಿವಾರ್ಯತೆ ಇರುವುದರಿಂದ ನಾರಾಯಣಸ್ವಾಮಿಯವರನ್ನು ಗೆಲ್ಲಿಸುವ ಮೂಲಕ ಕೋಲಾರದ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಪರಿಹಾರ ಪಡೆಯಬೇಕೆಂದು ಮನವಿ ಮಾಡಿದರು. ನಾರಾಯಣಸ್ವಾಮಿ ಮೂರು ಬಾರಿ ಶಾಸಕರಾಗಿ ಬಂಗಾರಪೇಟೆ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಸರಳ, ಸಜ್ಜನ ಹಾಗೂ ಯೋಗ್ಯವಾದ ಅಭ್ಯರ್ಥಿಯಾಗಿರುವ ಇವರನ್ನು ಲೋಕಸಭೆಗೆ ಆಯ್ಕೆ ಮಾಡಿದಲ್ಲಿ ಕ್ಷೇತ್ರದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ. ನಿರುದ್ಯೋಗ ನಿವಾರಣೆಯಾಗುತ್ತದೆ ಎಂದರು.
ಮುಗಿಬಿದ್ದ ಜನರು: ನಟಿ ರಕ್ಷಿತಾ ಗ್ರಾಮಗಳಿಗೆ ಭೇಟಿ ನೀಡುವ ವಿಷಯ ತಿಳಿಯುತ್ತಿದ್ದಂತೆ ಮಹಿಳೆಯರು, ಯುವಕರು,ಪರೀಕ್ಷೆಗಳು ಮುಗಿದು ಮನೆಗಳಲ್ಲಿ ಕಾಲ ಕಳೆಯುತ್ತಿರುವ ಮಕ್ಕಳು ರಕ್ಷಿತಾ ನೋಡಲು ಮುಗಿಬಿದ್ದರು. ನರಸಾಪುರ ಹೋಬಳಿಯ ಬೇಳೂರಿನಿಂದ ಪ್ರಚಾರ ಆರಂಭಿಸಿದ ರಕ್ಷಿತಾ ಸುಮಾರು 15ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸುತ್ತಾಡಿ ಬಿಜೆಪಿಗೆ ಮತ ಹಾಕಿದಲ್ಲಿ ದೇಶದ ಪ್ರಗತಿ ಹೆಚ್ಚುತ್ತದೆ ಎಂದು ಸಂದೇಶ ಸಾರಿದರು. ರಕ್ಷಿತಾ ಜೊತೆ ಅಭ್ಯರ್ಥಿ ನಾರಾಯಣಸ್ವಾಮಿ, ಜಿಲ್ಲಾ ಉಸ್ತುವಾರಿ ಮೋಹನ್‌ರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಕೃಷ್ಣೆಗೌಡ, ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಓಂಶಕ್ತಿ ಚಲಪತಿ, ಕೂಡಾ ಮಾಜಿ ಅಧ್ಯಕ್ಷ ಎಸ್.ಎನ್.ಶ್ರೀರಾಮ್, ಜಿಪಂ ಸದಸ್ಯ ಎಂ.ಎಸ್.ಆನಂದ್, ಮುಖಂಡರಾದ ಪ್ರಮೀಳಾ ಮಲ್ಲಿಕಾರ್ಜುನ್, ತಿಮ್ಮರಾಯಪ್ಪ, ತಲಗುಂದ ನರಸಿಂಹರಾಜು, ಚಿನ್ನಾಪುರ ನಾರಾಯಣಸ್ವಾಮಿ, ಮಾಗೇರಿ ನಾರಾಯಣಸ್ವಾಮಿ ಮುಂತಾದವರಿದ್ದರು.
ನಾಳೆ ಮೋದಿ ಪ್ರಚಾರ
ಶಿಡ್ಲಘಟ್ಟ: 13ರಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಚಿಕ್ಕಬಳ್ಳಾಪುರಕ್ಕೆ ಆಗಮಿಸಲಿದ್ದು ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.
ಭಾನುವಾರ ಬೆಳಗ್ಗೆ 10 ಗಂಟೆಗೆ ಚಿಕ್ಕಬಳ್ಳಾಪುರ ಬಿಜಿಎಸ್ ಕಾಲೇಜಿನ ಪಕ್ಕದ ಮೈದಾನದಲ್ಲಿ ಪ್ರಚಾರಕ್ಕೆ ಬರಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುರೇಂದ್ರ ಗೌಡ ಮನವಿ ಮಾಡಿದ್ದಾರೆ.
ಇಂದು ನಗರಕ್ಕೆ ಚಕ್ರವರ್ತಿ
ನಮೋ ಬ್ರಿಗೇಡ್ ಸಂಸ್ಥಾಪಕರಲ್ಲಿ ಒಬ್ಬರಾದ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಶನಿವಾರ ಕೋಲಾರಕ್ಕೆ ಭೇಟಿ ನೀಡಿ, ಯುವಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಬೆಳಿಗ್ಗೆ 10 ಗಂಟೆಗೆ ಚಕ್ರವರ್ತಿ ಆಗಮಿಸಲಿದ್ದು ಮೋದಿ ವಿಚಾರ ಧಾರೆಗಳನ್ನು ಮತ್ತೊಮ್ಮೆ ನೆನಪು ಮಾಡಿಕೊಡಲಿದ್ದಾರೆಂದು ನಮೋ ಬ್ರಿಗೇಡ್‌ನ ಜಿಲ್ಲಾ ಸಂಚಾಲಕ ಮುಕುಂದ ಅವರು ತಿಳಿಸಿದ್ದಾರೆ.