'ಮಸ್ತಿ'ಗೆ ಪೊಲೀಸರಿಂದ ಶಾಸ್ತಿ
ಕೋಲಾರ: ಅಂತರ್ಜಾಲದಲ್ಲಿನ ಫೇಸ್ಬುಕ್, ವಾಟ್ಸಾಪ್ ಅನ್ನು ಒಳ್ಳೆಯ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳುವ ಬದಲು ಮೋಜು ಮಾಡುವ ದುಸ್ಸಾಹಕ್ಕೆ ಕೈಹಾಕಿದ ವಿದ್ಯಾರ್ಥಿಗಳು ಪೊಲೀಸರ ವಶವಾದ ವಿಲಕ್ಷಣ ಘಟನೆ ಶುಕ್ರವಾರ ನಡೆದಿದೆ.
ಕೋಲಾರ ತಾಲೂಕಿನ ಅರಾಭಿಕೊತ್ತನೂರು ಹೋಬಳಿಗೆ ಸೇರಿದ ಕೆಂದಟ್ಟಿ ಬಳಿಯ ಅಪಾಯಕಾರಿ ಕ್ವಾರೆಯು ಕೊಳವಾಗಿ ಮಾರ್ಪಟ್ಟಿದ್ದು ಈಗಾಗಲೇ ಎಂಟು ಮಂದಿ ಈಜಲು ಹೋಗಿ ಮೃತಪಟ್ಟಿದ್ದಾರೆ.
ಈ ಅಪಾಯಕಾರಿ ಕೊಳದಲ್ಲಿ ಮತ್ಯಾರು ಸಾಯಬಾರದು ಎಂದು ಜಿಲ್ಲಾಧಿಕಾರಿಗಳು ಕ್ವಾರೆಯ ಪ್ರದೇಶಕ್ಕೆ ಜನರು ಪ್ರವೇಶ ಮಾಡುವುದನ್ನು ತಪ್ಪಿಸಲು ಐಪಿಸಿ 186 ಮತ್ತು 188 ನಿಮಯದಡಿ ನಿಷೇಧಿತ ಪ್ರದೇಶವೆಂದು ಘೋಷಣೆ ಮಾಡಿದ್ದಾರೆ.
ಫೇಸ್ಬುಕ್ನಲ್ಲಿ ಕಂಡ ನೀಲ ಬಣ್ಣದ ತಿಳಿ ನೀರಿನ ಕೊಳ, ಅದರಲ್ಲಿ ಈಜಾಡುವ ಜನ ಹಾಗೂ ಸುಂದರವಾದ ಪರಿಸರದ ಮೇಲಿನ ವ್ಯಾಮೋಹದಿಂದ ಶುಕ್ರವಾರ ಕಾಲೇಜಿಗೆ ಚೆಕ್ಕರ್ ಹೊಡೆದು ಬೆಂಗಳೂರು ಮತ್ತು ಕೋಲಾರದಿಂದ ಬಂದಿದ್ದ ವಿದ್ಯಾರ್ಥಿಗಳು ಕೆಂದಟ್ಟಿ ಗ್ರಾಮಸ್ಥರ ಕಣ್ಣಿಗೆ ಬಿದ್ದು ಗ್ರಾಮಾಂತರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಸೇರಿ 27 ಮಂದಿಯನ್ನು ಪೋಲಿಸರು ಬಂಧಿಸಿದ್ದು, ಇವರಿಂದ 12 ದ್ವಿಚಕ್ರ ವಾಹನಗಳು, 1 ಕಾರು ಹಾಗೂ 26 ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾಲೇಜಿಗೆ ಚೆಕ್ಕರ್ ಹೊಡೆದು ಬಂದ ವಿದ್ಯಾರ್ಥಿಗಳನ್ನು ಬೆಂಗಳೂರಿನ ಉತ್ತರಹಳ್ಳಿಯ ಆರ್.ಎನ್.ಎಸ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳೆಂದು ಗುರುತಿಸಲಾಗಿದೆ. 6 ಹುಡುಗಿಯರು, 16 ಹುಡುಗರು ಸೇರಿದಂತೆ ಕೋಲಾರದ 5 ಮಂದಿ ಸಿಕ್ಕಿಬಿದ್ದಿದ್ದಾರೆ. ನಿಷೇಧಿತ ಪ್ರದೇಶದಲ್ಲಿ ಅತಿಕ್ರಮ ಪ್ರವೇಶ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.