ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ
ಚಿಂತಾಮಣಿ: ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಹಾಗೂ ಹಾಲಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಹಾವು ಮುಂಗಸಿಯಂತೆ ಕಚ್ಚಾಡಿದವರು ಇಂದು ಇಬ್ಬರು ನಾಯಕರು ಜೆಡಿಎಸ್ ಪರ ಮತಯಾಚನೆ ಮಾಡುತ್ತಿರುವುದು ಸರಿಯೇ ಎಂದು ಡಾ.ಮಧುಸೀತಪ್ಪ ಅವರು ಪ್ರಶ್ನಿಸಿದರು. ತಾಲೂಕಿನ ಕೈವಾರ ಗ್ರಾಮದದಲ್ಲಿ ಕೋಲಾರ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಪರವಾಗಿ ಚುನಾವಣೆ ಪ್ರಚಾರ ಮಾತನಾಡಿದರು. ರಾಯಲ್ರಾಮ ಕೃಷ್ಣಾರೆಡ್ಡಿ ಮಾತನಾಡಿ, ತಾಕತ್ತಿದ್ದರೆ ಮಾಜಿ ಶಾಸಕ ಎಂ.ಸಿ.ಸುಧಾಕರ್ ಹಾಗೂ ಹಾಲಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಒಂದೇ ವೇದಿಕೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರವಾಗಿ ಮತ ಯಾಚಿಸಲಿ ಎಂದು ಸವಾಲು ಹಾಕಿದರು. ಕಾಂಗ್ರೆಸ್ ಮುಖಂಡರಾದ ವಾಣಿಕೃಷ್ಣಾರೆಡ್ಡಿ ಮತ್ತಿತರರು ಮಾತನಾಡಿದರು. ಗ್ರಾಪಂ ಸದಸ್ಯ ಮಂಜುನಾಥರೆಡ್ಡಿ, ಸ್ಥಳೀಯ ಮುಖಂಡರಾದ ವೆಂಕಟೇಗೌಡ, ಅತಾವುಲ್ಲಾ, ವೆಂಕಟರೆಡ್ಡಿ, ನಾರಾಯಣಸ್ವಾಮಿ, ಶಾಮರಾಜ್ ಮತ್ತಿತರರು ಉಪಸ್ಥಿತರಿದ್ದರು.
ಕೈವಾರ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರ ಮತಯಾಚನೆ
ಚಿಂತಾಮಣಿ: ತಾಲೂಕಿನ ಕೈವಾರ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಅಟಲ್ ವಾಜಪೇಯಿ ನೇತೃತ್ವದ ಹಿಂದಿನ ಎನ್ಡಿಎ ಸರ್ಕಾರದ ಸಾಧನೆಗಳು ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ತಿಳಿಸಿ ಈ ಬಾರಿಗೆ ಬಿಜೆಪಿಗೆ ಮತ ನೀಡಬೇಕು ಎಂದು ಮತದಾರರನ್ನು ಮನವೊಲಿಸಿದರು. ಸ್ಥಳೀಯ ಬಿಜೆಪಿ ಮುಖಂಡರಾದ ಬಿ.ಸಿ.ಜಯರಾಮ್, ಎಚ್.ಎಂ.ಮುನಿಯಪ್ಪ, ಎಚ್.ಎಂ.ಗೋವಿಂದರೆಡ್ಡಿ, ಎಂ.ಶ್ರೀನಿವಾಸಪ್ಪ, ಅಮರನಾಥಗುಪ್ತ, ಸಿ.ಕೆ.ನಾರಾಯಣಸ್ವಾಮಿ, ಬನಹಳ್ಳಿ ವಿಜಯ್ಕುಮಾರ್, ವೆಂಕಟರೆಡ್ಡಿ, ಷೇರ್ ಅಲಿ ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.
ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ
ಪಾವಗಡ: ಕಾಂಗ್ರೆಸ್ ಹಿರಿಯ ಮುಖಂಡ ಕೋರ್ಟ್ ನರಸಪ್ಪ ಹಾಗೂ ಇತರೆ ದಲಿತ ಮುಖಂಡರು ಶನಿವಾರ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಪರ ಮತಯಾಚಿಸಿದರು. ಅರಸೀಕೆರೆ, ಮಂಗಳವಾಡ, ಕೊತ್ತೂರು, ಕನ್ನಮೇಡಿ ಸೇರಿದಂತೆ ತಾಲೂಕಿನ ಕಸಬಾ ಮತ್ತು ನಿಡಗಲ್ ಹೋಬಳಿ ವ್ಯಾಪ್ತಿಗಳಲ್ಲಿ ಪ್ರವಾಸ ಹಮ್ಮಿಕೊಂಡು ಪಕ್ಷದ ಚಿತ್ರದುರ್ಗ ಲೋಕಸಭಾ ಅಭ್ಯರ್ಥಿ ಬಿ.ಎನ್ ಚಂದ್ರಪ್ಪ ಪರ ಮತಯಾಚಿಸಿದರು. ಕೊತ್ತೂರು ಗ್ರಾಮದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಮುಖಂಡ ಕೋರ್ಟ್ ನರಸಪ್ಪ ಮಾಜಿ ಸಚಿವ ವೆಂಕಟರಮಣಪ್ಪ ಜಿಪಂ ಸದಸ್ಯ ಎಚ್.ವಿ.ವೆಂಕಟೇಶ್ ಹಾಗೂ ಪಕ್ಷದ ಮುಖಂಡರ ನೇತೃತ್ವದಲ್ಲಿ ಕಾಂಗ್ರೆಸ್ ಸದ್ರಢವಾಗಿದ್ದು ಚುನಾವಣೆಯಲ್ಲಿ ಕಾಂಗ್ರೆಸ್ ಪರ ಅತ್ಯಧಿಕ ಮತಗಳು ಲಭಿಸಲಿವೆ ಎಂದರು. ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಉಗ್ರನರಸಿಂಹಪ್ಪ, ತಾ.ಮುಖಂಡರಾದ ಉಗ್ರಪ್ಪ, ಮಾಜಿ ಶಾಸಕ ಅಂಜಿನಪ್ಪ ಅವರ ಪುತ್ರ ಗೋವಿಂದಪ್ಪ, ಮಾನವ ಹಕ್ಕಗಳ ಜಂಟಿ ಕಾರ್ಯದರ್ಶಿ ವಕೀಲ ರಾಮಾಂಜಿನೇಯ, ಕಡಮಲಕುಂಟೆ ಗ್ರಾಪಂ ಸದಸ್ಯ ರಾಮಾಂಜಿನಪ್ಪ ಇತರೆ ಅನೇಕ ಮಂದಿ ಪಕ್ಷದ ಮುಖಂಡರಿದ್ದರು.
ನಡೆಮುಡಿಯೊಂದಿಗೆ ಕಳಸೋತ್ಸವ
ಹುಳಿಯಾರು: ಹೋಬಳಿ ಕುರಿಹಟ್ಟಿಯಲ್ಲಿ ದಮ್ಮಡಿಹಟ್ಟಿ ಈರಬೊಮ್ಮಕ್ಕದೇವಿಯ ನಡೆಮುಡಿ ಕಳಸಮಹೋತ್ಸವವು ಕೆಂಕೆರೆ ಕಾಳಮ್ಮ ಹಾಗೂ ಹುಳಿಯಾರು ದುರ್ಗಮ್ಮದೇವಿ ಸಮ್ಮುಖದಲ್ಲಿ ಶನಿವಾರ ಬೆಳಿಗ್ಗೆ ಶ್ರದ್ಧಾಭಕ್ತಿಯಿಂದ ನಡೆಯಿತು. ಅಮ್ಮನವರ ಪಟ್ಟದ ಕಳಸ ಸೇರಿದಂತೆ ಇತರೆ ಕಳಸಗಳನ್ನು ಗ್ರಾಮದ ಬಾವಿ ಹತ್ತಿರ ಸಿದ್ಧಗೊಳಿಸಿ ಗಂಗಾಪೂಜೆ ಪೂಜೆ ಸಲ್ಲಿಸಿ ನಂತರ ಹೆಣ್ಣುಮಕ್ಕಳು ಕಳಸಗಳನ್ನು ಹೊತ್ತು, ದೇವರನ್ನು ವಾದ್ಯ ಸಮೇತ ಮದಾಸಿಯಲ್ಲಿ ನಡೆಮುಡಿಯೊಂದಿಗೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಕರೆತಂದು ಕಳಸಗಳನ್ನು ವಿಸರ್ಜಿಸಲಾಯಿತು.