ಕೋಲಾರ -ಚಿಕ್ಕಬಳ್ಳಾಪುರದಲ್ಲಿ 'ಕೈ'ಗೇ ಗೆಲವು
ಶಿಡ್ಲಘಟ್ಟ: ಕೋಲಾರ ಹಾಗೂ ಚಿಕ್ಕಬಳ್ಳಾಪುರ ಕಾಂಗ್ರೆಸ್ ಅಭ್ಯರ್ಥಿಗಳಾದ ಕೆ.ಎಚ್.ಮುನಿಯಪ್ಪ ಹಾಗೂ ವೀರಪ್ಪಮೊಯ್ಲಿ ಗೆಲವು ನಿಶ್ಚಿತ ಎಂದು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಕಾಂಗ್ರೆಸ್ ಪರ ಮತಯಾಚಿಸಿ ಮಾತನಾಡಿದ ಅವರು, ರಾಜಕೀಯವಾಗಿ ಅಪಾರ ಅನುಭವ ಹೊಂದಿರುವ ಹಾಗೂ ಇಲ್ಲಿನ ಸಾರ್ವಜನಿಕ ಸಮಸ್ಯೆಗಳನ್ನು ಗುರುತಿಸಿ ಅದನ್ನು ಬಗೆಹರಿಸುವ ಸಾಮರ್ಥ್ಯ ಹೊಂದಿರುವ ಕೋಲಾರ ಲೋಕಸಭಾ ಅಭ್ಯರ್ಥಿ ಮುನಿಯಪ್ಪ ಹಾಗೂ ಚಿಕ್ಕಬಳ್ಳಾಪುರ ಅಭ್ಯರ್ಥಿ ವೀರಪ್ಪಮೊಯ್ಲಿ ಅವರನ್ನು ಗೆಲ್ಲಿಸಿ ಕ್ಷೇತ್ರಗಳು ಮತ್ತಷ್ಟು ಅಭಿವೃದ್ಧಿ ಹೊಂದಲು ಸಹಕಾರ ನೀಡಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.
ಮೋದಿ ಸರ್ವಾಧಿಕಾರಿ ಧೋರಣೆ: ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಗುಜರಾತ್ ರಾಜ್ಯವನ್ನು ಮಾದರಿಯಾಗಿ ಅಭಿವೃದ್ದಿ ಪಡಿಸಲಾಗಿದೆ ಎಂದು ಮಾಧ್ಯಮಗಳ ಮೂಲಕ ಸುಳ್ಳು ಪ್ರಚಾರ ಮಾಡುವ ಜೊತೆಗೆ ಸರ್ವಾಧಿಕಾರ ಧೋರಣೆ ಅನುಸರಿಸುವ ಮೂಲಕ ಬಿಜೆಪಿ ಹಿರಿಯ ಮುಖಂಡರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ, ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ಮುನಿಕ-ಷ್ಣಪ್ಪ, ಕೋಲಾರ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗ ಅಧ್ಯಕ್ಷ ಮೊಹ್ಮದ್ ಇಕ್ಬಾಲ್, ಉಪಾಧ್ಯಕ್ಷ ಅನ್ವರ್, ಕಾಂಗ್ರೆಸ್ ಯುವ ಮುಖಂಡ ಎಂ.ಅಬ್ದುಲ್ ಗಫೂರ್, ಬಿ.ಮುಬಾರಕ್ ಖಾನ್, ಬಾಂಬೆ ನವಾಝ್, ಸಮಿರ್‌ಖಾನ್, ಇನಾಯತ್‌ಉಲ್ಲಾ, ಪಿಎಲ್‌ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ನಾಗರಾಜ್, ಪುರಸಭಾ ಸದಸ್ಯರಾದ ಎಸ್.ಬಿ.ಬಾಬು, ಬಾಲಕೃಷ್ಣ, ಸುಹೇಲ್ ಅಹಮದ್, ಸಿಕೆಂದರ್, ಇಲಿಯಾದ್ ತನ್ವೀರ್ ಮತ್ತಿತರರು ಉಪಸ್ಥಿತರಿದ್ದರು.