ಜೆಡಿಎಸ್-ಕಾಂಗ್ರೆಸ್ ನೇರ ಪೈಪೋಟಿ
ಕೋಲಾರ: ಮೋದಿ ಅಲೆಯಿಂದಾಗಿ ಬಿಜೆಪಿಯ ಎಂ.ನಾರಾಯಣಸ್ವಾಮಿ ತಮಗೆ ಪ್ರಬಲ ಸ್ಪರ್ಧಿ ಆಗಬಹುದು ಎಂದು ನಿರೀಕ್ಷೆ ಮಾಡಿದ್ದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಹಣದ ಹೊಳೆ ಹರಿಸುತ್ತಿರುವ ಜೆಡಿಎಸ್ನ ಕೆ.ಕೇಶವ ಮೇಲೆ ನಿಗಾ ಇಡಲು ಮುಖಂಡರಿಗೆತಾಕೀತು ಮಾಡಿದ್ದಾರೆ.
ಬಿಜೆಪಿಯ ಎಂ.ನಾರಾಯಣಸ್ವಾಮಿ ಹಾಗೂ ಜೆಡಿಎಸ್ನ ಕೇಶವ ಇಬ್ಬರು ಭೋವಿ ಸಮುದಾಯಕ್ಕೆ ಸೇರಿದವರಾಗಿದ್ದು, ಸಮುದಾಯದ ಮತಗಳು ವಿಭಜನೆ ಆಗುವುದರಿಂದ ತಮಗೆ ಲಾಭ ಎಂದು ಮುನಿಯಪ್ಪ ಲೆಕ್ಕಚಾರ ಹಾಕಿದ್ದಾರೆ. ಜೊತೆಗೆ ಬಲಗೈ ಸಮುದಾಯದವರು ಬಿಜೆಪಿ ಇಲ್ಲವೇ ಜೆಡಿಎಸ್ನಿಂದ ಕಣಕ್ಕೆ ಇಳಿಯದಂತೆ ನೋಡಿಕೊಳ್ಳುವಲ್ಲಿ ಸಫಲರಾಗಿದ್ದಾರೆ.
ಆದರೆ, ಮಾಲೂರು ಶಾಸಕ ಕೋಡಿಹಳ್ಳಿ ಮಂಜುನಾಥ್, ಚಿಂತಾಮಣಿಯ ಮಾಜಿ ಶಾಸಕ ಸುಧಾಕರರೆಡ್ಡಿ, ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಮತ್ತಿತರೆ ಜೆಡಿಎಸ್ ಮುಖಂಡರು ಕೆ.ಎಚ್.ಮುನಿಯಪ್ಪ ಮೇಲಿನ ಕೋಪದಿಂದ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಸವಾಲು ಒಡ್ಡಿರುವುದರಿಂದ ಮುನಿಯಪ್ಪ ಕೇಶವ ಬಳಿ ಇರುವ ಹಣ ಕ್ಷೇತ್ರದಲ್ಲಿ ಹರಿದಾಡದಂತೆ ಎಚ್ಚರವಹಿಸುವಂತೆ ಮುಖಂಡರಿಗೆ ಸೂಚಿಸಿದ್ದಾರೆ.
ತಮಗೆ ಬಿಜೆಪಿಯೇ ಪ್ರಬಲ ಸ್ಪರ್ಧಿ ಆಗಬಹುದು, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬರುವುದನ್ನು ತಪ್ಪಿಸಲು ಜೆಡಿಎಸ್ ಮುಖಂಡರು ತಮಗೆ ಸಹಾಯ ಮಾಡಬಹುದೆಂದು ತಿಳಿಸಿದ್ದ ಮುನಿಯಪ್ಪ, ಚಿಂತಾಮಣಿಯ ಮಾಜಿ ಶಾಸಕ ಸುಧಾಕರರೆಡ್ಡಿ, ಮಾಜಿ ಸಚಿವ ಶ್ರೀನಿವಾಸಗೌಡರ ಪ್ರಚಾರ ಹಾಗೂ ಮಾಲೂರಿನ ಮಾಜಿ ಶಾಸಕ ಎ.ನಾಗರಾಜು ಜೆಡಿಎಸ್ ಪರ ಕೆಲಸ ಮಾಡಲು ಒಪ್ಪಿರುವುದನ್ನು ಗಂಭೀರವಾಗಿ ಪರಿಗಣಿಸಿ ಬಿಜೆಪಿ ಅಭ್ಯರ್ಥಿಗಿಂತ ಜೆಡಿಎಸ್ ಅಭ್ಯರ್ಥಿ ಅಪಾಯಕಾರಿ ಎಂದು ಭಾವಿಸಿ ತಮಗೆ ಪ್ರತಿಕೂಲವಾಗುವ ಚಿಂತಾಮಣಿ, ಕೋಲಾರ, ಕೆಜಿಎಫ್ ಇನ್ನಿತರ ಕಡೆ ಕಾಂಗ್ರೆಸ್ ಪ್ರಮುಖ ಮುಖಂಡರ ಸಭೆ ನಡೆಸಿ ಯಾವುದೇ ಕಾರಣಕ್ಕೂ ಜೆಡಿಎಸ್ ಮುಖಂಡರ ತಂತ್ರ ಫಲಿಸದಂತೆ ಎಚ್ಚರವಹಿಸಬೇಕೆಂದು ತಿಳಿಸಿದ್ದಾರೆ.
ಇನ್ನು ಕಾಂಗ್ರೆಸ್-ಜೆಡಿಎಸ್ ನಡುವೆ ಉಂಟಾಗಿರುವ ಪೈಪೋಟಿಯನ್ನು ತನ್ನ ಅನುಕೂಲಕ್ಕೆ ಬಳಕೆ ಮಾಡಿಕೊಳ್ಳಲು ಬಿಜೆಪಿ ಯಾವ ರೀತಿ ತನ್ನ ಕಾರ್ಯತಂತ್ರ ರೂಪಿಸುತ್ತದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಕ್ಷೇತ್ರದಲ್ಲಿ ಮೋದಿಗಾಗಿ ಓಟು ನೀಡಲು ಜನ ಉತ್ಸುಕರಾಗಿರುವುದು ಕಾಣಬರುತ್ತಿದೆ. ಆದರೆ, ಮತದಾರರ ಬಳಿ ಹೋಗುವ ಕಾರ್ಯಕರ್ತರ ಕೊರತೆಯಿಂದಾಗಿ ರಾಜಕೀಯ ಚಾಣಾಕ್ಷರು ಮೇಲುಗೈ ಸಾಧಿಸುವುದನ್ನು ತಳ್ಳಿಹಾಕಲಾಗದು.
ಜೆಡಿಎಸ್ ವಿರುದ್ಧ ವರ್ತೂರ್ ವಾಗ್ದಾಳಿ
ಕೋಲಾರ: ಜಾತ್ಯತೀತ ತತ್ವಗಳಿಗೆ ವಿರುದ್ಧವಾಗಿ ಹಾಗೂ ತಮ್ಮ ಸ್ವಾರ್ಥಕ್ಕಾಗಿ ದೇವೇಗೌಡ ಮತ್ತು ಕುಮಾರಸ್ವಾಮಿ ಬಿಜೆಪಿ ಜೊತೆ ವ್ಯವಹಾರ ಕುದುರಿಸಿಕೊಳ್ಳುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ ಎಂದು ಶಾಸಕ ವರ್ತೂರ್ ಪ್ರಕಾಶ್ ವಾಗ್ದಾಳಿ ನಡೆಸಿದರು.
ನಗರದ ವಿವಿಧ ಬಡಾವಣೆಗಳಲ್ಲಿ ಶನಿವಾರ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಪರವಾಗಿ ಮತಯಾಚನೆ ಮಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವುದರಿಂದ ದಲಿತರು, ಅಲ್ಪ ಸಂಖ್ಯಾತರು, ಹಿಂದುಳಿದವರು ಎಚ್ಚರವಹಿಸಿ ಮತ ಚಲಾಯಿಸಬೇಕೆಂದರು. ನಗರಸಭೆ ಮಾಜಿ ಅಧ್ಯಕ್ಷ ನಜೀರ್ ಅಹಮದ್ ಮಾತನಾಡಿ, ಬಡವರಿಗೆ, ಅಲ್ಪಸಂಖ್ಯಾತರ, ದೀನ ದಲಿತರ ಪರ ವಿಶೇಷ ಕಾಳಜಿ ತೋರಿರುವ ಸಿಎಂ ಸಿದ್ದರಾಮಯ್ಯ ಅವರ ಕೈ ಬಲಪಡಿಸಲು ಇಡೀ ಅಲ್ಪಸಂಖ್ಯಾತರು ಕಾಂಗ್ರೆಸ್ ಸಮೇಮತ ಚಲಾಯಿಸಬೇಕೆಂದರು. ನಗರದ ಶಹೀದ್ನಗರ, ಸುಲ್ತಾನಿ ತಿಪ್ಪಸಂದ್ರ, ಗಾಂಧಿನಗರ, ತಸ್ಲಿಂ ಷಾ ನಗರ, ದರ್ಗಾ ಮೊಹಲ್ಲಾಗಳಲ್ಲಿ ಪಾದಯಾತ್ರೆ ನಡೆಸಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಪರ ಮತ ಯಾಚಿಸಿದರು. ಮುಖಂಡರಾದ ಬೆಗ್ಲಿ ಪ್ರಕಾಶ್, ಜಿಪಂ ಮಾಜಿ ಸದಸ್ಯ ಬಾಲಾಜಿ ಚನ್ನಯ್ಯ, ವಿ.ಕೆ. ರಾಜೇಶ್, ನಗರಸಭಾ ಸದಸ್ಯರಾದ ಸೋಮಶೇಖರ್, ಮಂಜುನಾಥ್, ಜಿಯಾವುಲ್ಲಾ ಖಾನ್, ಅಯ್ಯೂಬ್, ಮುಷ್ಠಾಕ್, ನುಸ್ರತ್, ಇಮ್ರಾನ್, ಸುಲ್ತಾನ್, ಮನ್ಸೂರ್, ಇಸ್ಮಾಯಿಲ್ ಮತ್ತಿತರರು ಉಪಸ್ಥಿತರಿದ್ದರು.