ಮುನಿಯಪ್ಪ ವಿರುದ್ಧ 'ರಾಮ'ಕ್ಕ ವಾಗ್ಬಾಣ
ಕೆಜಿಎಫ್: ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಕಳೆದ 30 ವರ್ಷಗಳಿಂದ ಪ್ರತಿ ಲೋಕಸಭೆ ಚುನಾವಣೆಯಲ್ಲಿ ಜನರ ಮುಂದೆ ಪ್ರಚಾರಕ್ಕೆ ಬರುವಾಗಲೆಲ್ಲಾ ಕೆಜಿಎಫ್ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿದ್ದೇನೆ ಎಂದು ಸುಳ್ಳು ಹೇಳಿಕೊಂಡು ಜನರನ್ನು ವಂಚಿಸುತ್ತಾ ಬಂದಿದ್ದಾರೆ ಎಂದು ಶಾಸಕಿ ವೈ.ರಾಮಕ್ಕ ಕಿಡಿಕಾರಿದರು. ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಪರ ಮತಯಾಚನೆ ಮಾಡಿ ಅವರು ಮಾತನಾಡಿದರು.
ಜೆಡಿಎಸ್ ಅಭ್ಯರ್ಥಿ ಕೇಶವ ಕೆಜಿಎಫ್ ಹಾಗೂ ಕೋಲಾರ ಕ್ಷೇತ್ರದ ಪರಿಚಯವಿಲ್ಲದ ಅವರಿಗೆ ಜಿಲ್ಲೆಯ ಜನತೆ ಯಾವ ರೀತಿ ಮತ ನೀಡುತ್ತಾರೆ ಎಂದು ಪ್ರಶ್ನಿಸಿದರು. ಪಟ್ಟಣದ ಅಂಬೇಡ್ಕರ್ ನಗರ, ಸಂಜಯಗಾಂಧಿನಗರ, ಇ.ಟಿ.ಬ್ಲಾಕ್, 2ನೇ ಬ್ಲಾಕ್ ಮತ್ತು ಎಂ.ಜಿ.ಮಾರುಕಟ್ಟೆ ಮುಂತಾದ ಪ್ರದೇಶಗಳಲ್ಲಿ
ಅವರು ಬಿಜೆಪಿ ಪರ ಮತಯಾಚನೆ ಮಾಡಿದರು.
ಈ ಬಾರಿ ಕೇಂದ್ರದಲ್ಲಿ ಎನ್‌ಡಿಎ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ. ಮಾತ್ರವಲ್ಲ, ನರೇಂದ್ರಮೋದಿ ಪ್ರಧಾನಿಯಾಗಲಿದ್ದು, ಕೋಲಾರ ಜಿಲ್ಲೆಯ ಜನತೆ ಎಚ್ಚೆತ್ತುಕೊಂಡಿದ್ದು ಮುಂದಿನ 5 ವರ್ಷಗಳಲ್ಲಿ ಕೋಲಾರ ಜಿಲ್ಲೆಯ ಅಭಿವೃದ್ಧಿ ಚಿತ್ರಣ ಬದಲಾಗಳು ಕೆಜಿಎಫ್ ಹಾಗೂ ಕೋಲಾರ ಜಿಲ್ಲೆಯ ಜನತೆ ಕಾಂಗ್ರೆಸ್ ಮತ್ತು ಜೆಡಿಎಸ್ ತಂತ್ರ, ಆಮಿಷಗಳಿಗೆ ಒಳಗಾಗದೆ ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಅವರಿಗೆ ಮತ ನೀಡಿ ಎಂದು ಕೋರಿದರು.
ಇದೇ ವೇಳೆ ಮಾಜಿ ಶಾಸಕ ವೈ.ಸಂಪಂಗಿ ಹಾಗೂ ನಗರ ಘಟಕದ ಅಧ್ಯಕ್ಷ ಸುರೇಶ್‌ನಾರಾಯಣಕುಟ್ಟಿ ಮತ್ತಿತರರು ಮಾತನಾಡಿದರು. ನಗರಸಭಾ ಸದಸ್ಯರಾದ ವಿಜಯಕುಮಾರ್, ನಟರಾಜ್, ಅಶೋಕ್, ರವಿ, ಗಿರಿಜಾಗಾಂಧಿ, ಮುಖಂಡರಾದ ನೈನಾರವಿ, ಭಾಟಾ ಗೋಪಾಲ್, ಸುಮಾನಾಗರಾಜ್, ನವೀನ್‌ಜೈನ್, ಯಶ್ವಂತ್‌ರಾಜ್, ಜಾಮ್ ಮತ್ತಿತರರು ಹಾಜರಿದ್ದರು.
ಅಂಬೇಡ್ಕರ್ ಆಶಯ ಈಡೇರಿಕೆಗೆ ಕಮಲ ಬೆಂಬಲಿಸಿ: ಚಿ.ನಾ.ರಾಮು
ಕೋಲಾರ: ಜಗತ್ತಿಗೆ ಮಾದರಿಯಾಗುವ ಸಂವಿಧಾನ ರೂಪಿಸಿಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಿತು. ಆದರೆ, ಜನಸಂಘದ ಮುಖಂಡರು ಅಂಬೇಡ್ಕರ್ ಅವರನ್ನು ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆ ಮಾಡಲು ಪ್ರಮುಖ ಪಾತ್ರ ವಹಿಸಿದರು ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಚಿ.ನಾ.ರಾಮು ಅಭಿಪ್ರಾಯಪಟ್ಟರು.
ನಗರದ ಪತ್ರಕರ್ತರ ಭವನದಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಉರಿಯುವ ಮನೆಯಂತೆ ಎಂದು ಅಂದಿನ ಕಾಲದಲ್ಲೇ ಅಂಬೇಡ್ಕರ್ ತಿಳಿಸಿದ್ದರು. ಬಿಜೆಪಿಯನ್ನು ಕೆಲವರು ದಲಿತ ವಿರೋಧಿ, ಕೋಮುವಾದಿ ಎಂದು ಬಿಂಬಿಸುವ ಮೂಲಕ ಅಧಿಕಾರ ಶಾಶ್ವತವಾಗಿ ಅನುಭವಿಸಲು ಕಾಂಗ್ರೆಸ್‌ನವರು ಪ್ರಯತ್ನಿಸುತ್ತಿದ್ದಾರೆ. ದಲಿತ ಸಂಘಟನೆಗಳು ಅಂಬೇಡ್ಕರ್ ಆಶಯ ಈಡೇರಿಸಲು ಬಿಜೆಪಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು. ದಲಿತರನ್ನು ಕೇವಲ ಮತ ಬ್ಯಾಂಕ್‌ಗಳನ್ನಾಗಿ ಕಾಂಗ್ರೆಸ್ ನೋಡುತ್ತಿದೆಯೇ ಹೊರತು, ಅವರ ಅಭಿವೃದ್ಧಿ ಅದಕ್ಕೆ ಬೇಕಾಗಿಲ್ಲ. ದೇಶದಲ್ಲಿ ಆರ್ಥಿಕ, ಸಾಮಾಜಿಕ ಬದಲಾವಣೆ ದಿಕ್ಕಿನತ್ತ ಸಮಾಜ ನೋಡುತ್ತಿರುವುದರಿಂದ ಬಿಜೆಪಿಗೆ ಮತ ನೀಡುವುದರ ಮೂಲಕ ಮೋದಿ ಅವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಬೇಕು ಎಂದು ಕೋರಿದರು.