ಆಮ್ ಆದ್ಮಿ ಪ್ರಚಾರಕ್ಕೆ ಅಡ್ಡಿ
ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಬೆಂಬಲಿಗರಿಂದ ತರಾಟೆ
ಶಿಡ್ಲಘಟ್ಟ: ಆಮ್ ಆದ್ಮಿ ಪಕ್ಷದ ಪ್ರಚಾರ ಕಾರ್ಯಕ್ಕೆ ಮಳ್ಳೂರು ಗ್ರಾಮದಲ್ಲಿ ತಡೆಯೊಡ್ಡಿದ ಕಾರಣ ಪ್ರಚಾರ ಮೊಟಕುಗೊಳಿಸಿದ ಪ್ರಕರಣ ನಡೆಯಿತು.
ತಾಲೂಕಿನಲ್ಲಿ ಮೊದಲ ಬಾರಿಗೆ ಚುನಾವಣಾ ಪ್ರಚಾರಕ್ಕೆ ಬಂದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಕೋಟಗಾನಹಳ್ಳಿ ರಾಮಯ್ಯ ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್. ಮುನಿಯಪ್ಪ ಹಣ ತಂದು ಹಂಚುತ್ತಿದ್ದಾರೆಂದು, ಮತದಾರರು ಆಮಿಷಗಳಿಗೆ ಬಲಿಯಾಗದೆ ಉತ್ತಮ ಅಭ್ಯರ್ಥಿಗಳಿಗೆ ಮತ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಭೆಯಲ್ಲಿದ್ದ ಕಾಂಗ್ರೆಸ್ ಬೆಂಬಲಿಗರು ತೀವ್ರ ಪ್ರತಿಭಟನೆ ಮಾಡಿ ಕೊಟ್ಟಿರುವ ಹಣದ ಬಗ್ಗೆ ತೋರಿಸಲು ಒತ್ತಾಯಪಡಿಸಿ ಭಾಷಣಕ್ಕೆ ಅಡ್ಡಿಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಇದರಿಂದ ಬೇಸತ್ತ ಕೋಟಗಾನ ಹಳ್ಳಿ ರಾಮಯ್ಯ ಶಿಡ್ಲಘಟ್ಟ ತಾಲೂಕಿನ ಜನತೆ ಒಳ್ಳೆಯ ಸ್ವಾಗತವನ್ನೇ ನೀಡಿದ್ದಾರೆ ಇದು ನಿಮ್ಮ ಸಂಸ್ಕೃತಿಯನ್ನು ತೋರುತ್ತದೆ ಎಂದು ವಾಹನದ ಮೇಲೆ ಹತ್ತಿ ಕಟ್ಟು ಶಬ್ದಗಳಿಂದ ಟೀಕಿಸಿ ಮೇಲೂರಿಗೆ ಪ್ರಯಾಣ ಬೆಳೆಸಿದರು. ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷ ವಿಸ್ಡಮ್ ನಾಗರಾಜ್, ಶ್ರೀನಿವಾಸ್, ಮಂಜುನಾಥ್ , ಆಮ್ ಆದ್ಮಿ ಕಾರ್ಯಕರ್ತರು ಇದ್ದರು.