ಕೆಎಚ್ಚೆಂ ಸೋಲದೆ ಜಿಲ್ಲೆಗೆ ಉತ್ತಮ ನಾಯಕರು ಸಿಗಲ್ಲ
ಕೆಜಿಎಫ್: ಕೋಲಾರ ಕ್ಷೇತ್ರದಲ್ಲಿ ಕೆ.ಎಚ್. ಮುನಿಯಪ್ಪ ಅವರನ್ನು ಸೋಲಿಸಿದರೆ ಮಾತ್ರ ಕಾಂಗ್ರೆಸ್ ಸೇರಿದಂತೆ ಜಿಲ್ಲೆಯ ಎಲ್ಲ ಪಕ್ಷಗಳಲ್ಲಿ ಉತ್ತಮ ನಾಯಕರು ಮುಂದೆ ಬರಲು ಸಾಧ್ಯ ಎಂದು ಮಾಜಿ ಶಾಸಕ ಸಿ. ವೆಂಕಟೇಶಪ್ಪ ಹೇಳಿದರು.
ನಗರದಲ್ಲಿ ಆಯೋಜಿಸಿದ್ದ ಬೆಂಬಲಿಗರ ಸಭೆಯಲ್ಲಿ ಮಾತನಾಡಿ, ಕೋಲಾರ ಮೀಸಲು ಕ್ಷೇತ್ರದಲ್ಲಿ ದಲಿತ ಸಮುದಾಯದ ಮತಗಳನ್ನು ಮಡೆದ ಮುನಿಯಪ್ಪ ಜಿಲ್ಲೆಯ ಅಭಿವೃದ್ಧಿ ಹಾಗೂ ದಲಿತ ಸಮುದಾಯದವನ್ನು ಕಡೆಗಣಿಸಿ ಇವರಲ್ಲಿ ಬೇಧ ಭಾವ ಉಂಟುಮಾಡಿರುವುದು ಅವರ 6 ಅವಧಿಯ ಸಾಧನೆ ಎಂದರು. ಈ ಚುನಾವಣೆಯಲ್ಲಿ ಕೆ.ಎಚ್. ಮುನಿಯಪ್ಪರನ್ನು ಸೋಲಿಸಲು ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳು ಒಂದಾಗಿದ್ದು, ತಾವು ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿಗೆ ಬೇಷರತ್ ಬೆಂಬಲ ನೀಡಿ ಅವರ ಗೆಲವಿಗೆ ಪ್ರವಾಸ ಮಾಡುತ್ತಿರುವುದಾಗಿ ತಿಳಿಸಿದರು. ಮುನಿಯಪ್ಪರ ರಾಜಕೀಯ ಗುರುಗಳಾದ ವಿ. ಮುನಿಯಪ್ಪ ಹಾಗೂ ಕೃಷ್ಣಸ್ವಾಮಿ ಅವರಿಗೆ ದ್ರೋಹ ಬಗೆದ ಮುನಿಯಪ್ಪ ಕಪಟ ರಾಜಕೀಯ ನಡೆಸಿ ಈಗ ಇವರೆಲ್ಲರ ಕಾಲು ಹಿಡಿಯುತ್ತಾರೆ ಎಂದು ಲೇವಡಿ ಮಾಡಿದರು.
ಮುನಿಯಪ್ಪ ಗೆದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಕೆಳಗಿಳಿಸಲು ಹೈಕಮಾಂಡ್ ಕಾಲಿಗೆ ಬಿದ್ದು ಕುತಂತ್ರ ನಡೆಸಲು ಮುಂದಾಗುವುದರಲ್ಲಿ ಸಂಶಯವಿಲ್ಲ ಹಾಗಾಗಿ ಎಲ್ಲರೂ ಒಗ್ಗೂಡಿ ಮುನಿಯಪ್ಪರನ್ನು ಸೋಲಿಸಲು ಕೈಜೋಡಿಸಿದ್ದೇವೆ ಎಂದರು. ದಲಿತ ಮಹಾಸಭಾ ಜಿಲ್ಲಾಧ್ಯಕ್ಷ ಎಂ. ಚಂದ್ರಶೇಖರ್, ಶ್ರೀನಿವಾಸ್, ವೆಂಕಟೇಶ್, ಮುನಿಸ್ವಾಮಿರೆಡ್ಡಿ ಇದ್ದರು.