ಹೆಚ್ಚು ಅಂಕ ಗಳಿಸುವಂತೆ ಮಕ್ಕಳ ಮೇಲೆ ಪೋಷಕರ ಒತ್ತಡ ಸಲ್ಲ
ಬಂಗಾರಪೇಟೆ: ಹೆಚ್ಚು ಅಂಕ ಗಳಿಸುವಂತೆ ಪೋಷಕರು ಮಕ್ಕಳ ಮೇಲೆ ಒತ್ತಡ ಹೇರಬಾರದು ಎಂದು ರತ್ನ ಸಾಗರ್ ಪ್ರಕಾಶನ ಮಾರುಕಟ್ಟೆ ವಿಭಾಗದ ಸಂಪಾದಕಿ ಸೇನಾ ದೇವರ್ ಹೇಳಿದರು. ಪಟ್ಟಣದ ಆಶ್ಲೆ ಇಂಟರ್ನ್ಯಾಷನಲ್ ಶಾಲೆಯಲ್ಲಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಪೋಷಕರ ಪಾತ್ರ ವಿಷಯ ಕುರಿತು ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಂದು ಮಗುವಿನಲ್ಲಿ ವಿಶೇಷ ಪ್ರತಿಭೆ ಅಡಗಿದೆ. ಪೋಷಕರು ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು. ಮಕ್ಕಳಿಗೆ ನಡತೆ, ಶಿಶ್ತು ಕಲಿಸುವಲ್ಲಿ ಪೋಷಕರ ಪಾತ್ರ ಹಿರಿದು. ತಮ್ಮ ಯಾಂತ್ರಿಕ ಕೆಲಸಗಳನ್ನು ಬದಿಗೊತ್ತಿ, ಮಕ್ಕಳೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಬೇಕು. ಅನುಭವ ಉತ್ತಮ ವ್ಯಕ್ತಿತ್ವ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದರು.
ತಾರುಣ್ಯ ಅವಸ್ಥೆ ಮಕ್ಕಳಲ್ಲಿ ದೈಹಿಕ, ಮಾನಸಿಕ ಬದಲಾವಣೆ ಪ್ರಕ್ರಿಯೆ ಸಾಮಾನ್ಯ. ಆ ಸಂದರ್ಭದಲ್ಲಿ ಪೋಷಕರು ಮಕ್ಕಳೊಂದಿಗೆ ಸ್ನೇಹಿತರಂತೆ ಇರಬೇಕು.
ಕೆಟ್ಟ ಚಟಕ್ಕೆ ಬಲಿಯಾದ ಪೋಷಕರ ವ್ಯಕ್ತಿತ್ವ ಮಕ್ಕಳ ಮನಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದರು.
ಕೋಲಾರ: ವಾರ್ಡ್ಗಳಲ್ಲಿ ಬಿಜೆಪಿಯಿಂದ ಭಾರಿ ಪ್ರಚಾರ
ಕೋಲಾರ: ನಗರದ ವಿವಿಧ ವಾರ್ಡುಗಳಲ್ಲಿ ಬಿಜೆಪಿ ಮುಖಂಡರು ಅಭ್ಯರ್ಥಿ ಎಂ. ನಾರಾಯಣಸ್ವಾಮಿ ಪರವಾಗಿ ಪ್ರಚಾರ ನಡೆಸಿದರು.
ಮುಖಂಡರು ಮನೆ ಮನೆಗಳಿಗೆ ತೆರಳಿ ಕರಪತ್ರಗಳನ್ನು ನೀಡಿ ದೇಶದ ಭವಿಷ್ಯವನ್ನು ಬದಲಿಸಬಲ್ಲ ಚುನಾವಣೆ ಇದ್ದಾಗಿದ್ದು ಈ ಬಾರಿ ಮೋದಿ ಸರ್ಕಾರಕ್ಕಾಗಿ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಜಯಂತಿ ಲಾಲ್, ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ವಿಜಯಕುಮಾರ್, ರಾಜ್ಯ ಅಲ್ಪಸಂಖ್ಯಾತರ ಮೋರ್ಚಾ ಕಾರ್ಯದರ್ಶಿ ಜಮೀಲ್, ಜಿ.ಪಂ ಸದಸ್ಯ ಎಂ.ಎಸ್. ಆನಂದ್, ಜಿಲ್ಲಾ ಯುವ ಮೋರ್ಚಾ ಮಾಜಿ ಅಧ್ಯಕ್ಷ ರಾಜೇಂದ್ರ, ಮುಖಂಡರಾದ
ನರಸಿಂಹರಾಜು, ಹಾರೋಹಳ್ಳಿ ನಾರಾಯಣಸ್ವಾಮಿ, ಗಾಂಧಿನಗರ ರವಿ, ಬಾಬು, ಬಾಲಾಜಿ, ಓಂಪ್ರಕಾಶ್, ಶಬರಿ, ಜಗದೀಶ್, ನಾಗರಾಜ್, ಚಲಪತಿ, ಸುಧೀರ್, ರಮೇಶ್, ವೆಂಕಟೇಶ್, ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಓಂಶಕ್ತಿ ಚಲಪತಿ ಸೇರಿದಂತೆ ನೂರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು.
ಎತ್ತಿನ ಹೊಳೆ ಶೀಘ್ರ ಜಾರಿಗೆ ಜೆಡಿಎಸ್ ಬೆಂಬಲಿಸಿ: ಎಚ್ಡಿಕೆ
ಮಾಲೂರು: ಬಯಲು ಸೀಮೆ ಪ್ರದೇಶಕ್ಕೆ ಎತ್ತಿನ ಹೊಳೆ ಯೋಜನೆ ಶೀಘ್ರ ಜಾರಿಗೆ ಜೆಡಿಎಸ್ ಜವಾಬ್ದಾರಿ ವಹಿಸಿಕೊಳ್ಳಲಿದ್ದು, ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ನೀವೂ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ತಾಲೂಕಿನ ಚಿಕ್ಕತಿರುಪತಿ ಗ್ರಾಮದ ಶ್ರೀ ಪ್ರಸನ್ನ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಜೆಡಿಎಸ್ ಅಭ್ಯರ್ಥಿಗಳ ಪರ ಆಯೋಜಿಸಿದ್ದ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿ, ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು. ಜೆಡಿಎಸ್ ಪಕ್ಷವೂಂದೇ ರಾಜ್ಯದ ರೈತರ, ದಲಿತರ ಹಿತ ಕಾಯಲಿದೆ. ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸಿ ಎಂದರು.
ಅಭ್ಯರ್ಥಿ ಕೇಶವ, ಶಾಸಕ ಮಂಜುನಾಥ್ ಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಗೌಡ, ನಂಜೇಗೌಡ, ಹನುಮಂತಪ್ಪ ಇದ್ದರು. ಕಾರ್ಯಕ್ರಮದ ನಂತರ ಬೈಕ್ ರ್ಯಾಲಿ ಹೊಸಕೋಟೆ ಕಡೆ ಸಂಚರಿಸಿತ್ತು.