ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕಾಂಗ್ರೆಸ್ ಕಳೆ ತೊಡೆಯಲು ಸಕಾಲ: ಆರ್. ಅಶೋಕ್

Srinivasa Murthy VN
Updated On : 15 Apr 2014, 1:41 am

ಕೋಲಾರ: ಕಾಂಗ್ರೆಸ್ ಕಳೆ ಕಿತ್ತೊಗೆಯಲು ಈಗ ಸಕಾಲ, ದುರಾಡಳಿತ ಮೂಲಕ ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಕಾಂಗ್ರೆಸ್‌ನ್ನು  ಬೇರು ಸಹಿತ ಕಿತ್ತೊಗೆಯಲು ಮತದಾರರು ಸಿದ್ಧರಾಗಬೇಕೆಂದು ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ಕರೆ ನೀಡಿದರು.
ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಜೆಪಿ ಅಭ್ಯರ್ಥಿ ಎಂ. ನಾರಾಯಣಸ್ವಾಮಿ ಪರ ರೋಡ್ ಶೋನಲ್ಲಿ  ಮಾತನಾಡಿದ ಅವರು,ಇಷ್ಟು ವರ್ಷಗಳ ಕಾಲ ತಾವು ಬೇರೆ ಬೇರೆ ಕಾರಣಗಳಿಂದಾಗಿ ಕಾಂಗ್ರೆಸ್‌ಗೆ ಮತ ನೀಡಿದ್ದೀರಾ, ಈ ಬಾರಿ ದೇಶಕ್ಕಾಗಿ ಮತ್ತು ಮೋದಿಯವರನ್ನು ಪ್ರಧಾನಮಂತ್ರಿ ಮಾಡಲು ಬಿಜೆಪಿಗೆ ಮತ ನೀಡಬೇಕೆಂದು ಕೋರಿದರು.
ಕಾಂಗ್ರೆಸ್ ಕಳೆಯನ್ನು ಕಿತ್ತು ಹಾಕಿ ಜನರಿಗೆ ಬೇಕಾದ ಬೆಳೆಯನ್ನು ಬೆಳೆಯುವುದಕ್ಕೆ ಇಷ್ಟು ದಿನ ಕಷ್ಟವಾಗಿತ್ತು. ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ ನಂತರ ಜನರು ನಿರೀಕ್ಷೆಗೂ ಮೀರಿ ಬೆಂಬಲ ನೀಡುತ್ತಿದ್ದಾರೆ, ಸಮೀಕ್ಷೆಗಳ ಪ್ರಕಾರ ಬಿಜೆಪಿ ಈಗಾಗಲೇ 271 ಸ್ಥಾನಗಳಲ್ಲಿ ಗೆದ್ದಿದೆ. 272ನೇ ಸ್ಥಾನವನ್ನು ಕೋಲಾರ ಕ್ಷೇತ್ರದ ಮತದಾರರು ತುಂಬಿಕೊಡಬೇಕೆಂದರು.
ಅಭ್ಯರ್ಥಿ ಎಂ. ನಾರಾಯಣಸ್ವಾಮಿ, ಚುನಾವಣೆಯ ಉಸ್ತುವಾರಿ ವಹಿಸಿರುವ ಮೋಹನ್ ರೆಡ್ಡಿ, ಸಂಘಟನಾ ಕಾರ್ಯದರ್ಶಿ ಯತೀಶ್, ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಓಂಶಕ್ತಿ ಚಲಪತಿ, ಜಿಲ್ಲಾಧ್ಯಕ್ಷ ಕೃಷ್ಣಾರೆಡ್ಡಿ, ವಕೀಲ ಮಾಗೇರಿ ನಾರಾಯಣಸ್ವಾಮಿ, ಬೆಗ್ಲಿ ಸಿರಾಜ್, ವೆಂಕಟೇಶ್, ಮು. ರಾಘವೇಂದ್ರ, ಪ್ರಮೀಳಾ ಮಲ್ಲಿಕಾರ್ಜುನ್, ಮಮತಾ, ಸತ್ಯನಾರಾಯಣರಾವ್, ಶಿಳ್ಳಂಗೆರೆ ಮಹೇಶ್, ಜಯಂತಿಲಾಲ್ ಮುಂತಾದವರು ಇದ್ದರು.

ಬೆಲೆ ಏರಿಕೆಯೇ ಕಾಂಗ್ರೆಸ್ ಸಾಧನೆ
ಮಾಲೂರು: ಕಳೆದ ಹತ್ತು ವರ್ಷಗಳಿಂದ ನಿತ್ಯಬಳಕೆ ವಸ್ತುಗಳ ಬೆಲೆ ಏರಿಕೆ ತಡೆಯದೆ ಬಡವರ ಜೀವನ ದುಸ್ತರ ಮಾಡಿರುವ ಯುಪಿಎ ಸರ್ಕಾರ ಮತ್ತೆ ದೇಶದ ಜನತೆಯನ್ನು ವಂಚಿಸಲು ಹೊರಟಿರುವುದನ್ನು ತಿರಸ್ಕರಿಸಿ ಎಂದು ಮಾಜಿ ಉಪಮುಖ್ಯ ಮಂತ್ರಿ ಆರ್. ಆಶೋಕ್ ಹೇಳಿದರು.
ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ಪರ ಸ್ಥಳೀಯ ಬಿಜೆಪಿ ಘಟಕ ಸೋಮವಾರ ಆಯೋಜಿಸಿದ್ದ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿ, ಈ ಬಾರಿ ದೇಶಕ್ಕಾಗಿ ಬಿಜೆಪಿಯನ್ನು ಬೆಂಬಲಿಸಿ. ನಿಮ್ಮ ಸೇವಕನಾಗುವ ನರೇಂದ್ರ ಮೋದಿಗೆ ಮತ ನೀಡಿ ಎಂದರು.
ಅಭ್ಯರ್ಥಿ ಎಂ. ನಾರಾಯಣಸ್ವಾಮಿ ಮಾತನಾಡಿದರು. ಜಿಲ್ಲಾಧ್ಯಕ್ಷ ಕೃಷ್ಣಾರೆಡ್ಡಿ, ರಾಮೇಗೌಡ, ಜಿಪಂ ಸದಸ್ಯ ರಾಮಸ್ವಾಮಿ ರೆಡ್ಡಿ, ಗೋಪಾಲ್‌ಗೌಡ, ಪುರಸಭೆ ಅಧ್ಯಕ್ಷೆ ಭಾರತಮ್ಮ, ಉಪಾಧ್ಯಕ್ಷ ಶ್ರೀ ವಲ್ಲಿ, ಸದಸ್ಯರಾದ ಎಂ.ಪಿ. ವಿಜಯಕುಮಾರ್, ತಾಪಂ ಅಧ್ಯಕ್ಷ ಅಶಾ ರಾಜಪ್ಪ ಇದ್ದರು.

ದೇಶಾದ್ಯಂತ ಬಿಜೆಪಿ ಪರ ಅಲೆ
ಬಂಗಾರಪೇಟೆ: ದೇಶಾದ್ಯಂತ ಜನರು ಬಿಜೆಪಿ ಪರ ಪರಿವರ್ತನೆಯಾಗುತ್ತಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ಹೇಳಿದರು.
ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಪರ ದೇಶಿಹಳ್ಳಿಯಿಂದ ಪಟ್ಟಣದ ಹೊರವಲಯದ ಚೆಕ್ ಪೋಸ್ಟ್‌ವರೆಗೂ ಸಾವಿರಾರು ಕಾರ್ಯಕರ್ತರೊಂದಿಗೆ ರೋಡ್ ಶೋ ನಡೆಸಿ ಮಾತನಾಡಿದರು. ಅಭ್ಯರ್ಥಿ ಎಂ. ನಾರಾಯಣಸ್ವಾಮಿ ಕಾಂಗ್ರೆಸ್ ಅಭ್ಯರ್ಥಿ ಮುನಿಯಪ್ಪ ವಿರುದ್ಧ ವಾಗ್ದಾಳಿ ಮಾಡಿದರು. ಮಾಜಿ ಶಾಸಕರಾದ ವೆಂಕಟಮುನಿಯಪ್ಪ, ಸಿ. ವೆಂಕಟೇಶಪ್ಪ, ಕೃಷ್ಣಾರೆಡ್ಡಿ, ಮಾರ್ಕಂಡೇಗೌಡ ಇದ್ದರು.

ಟೋಕನ್ ಕೃಷ್ಣಯ್ಯ ಶೆಟ್ಟಿ ಮತ್ತೇ ಬಂದಿದ್ದಾರೆ ಹುಷಾರ್...!
ಮಾಲೂರು: ತಾಲೂಕಿನ ಜನತೆಯ ಮರುಳು ಮಾಡಲು ಟೋಕನ್ ಕೃಷ್ಣಯ್ಯ ಶೆಟ್ಟಿ ಮತ್ತೇ ಬಂದಿದ್ದು, ಜನತೆ ಎಚ್ಚರದಿಂದ ಇರಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಆರ್. ಆಶೋಕ್ ಹೇಳಿದರು.
ಪಟ್ಟಣದಲ್ಲಿ ಮಾತನಾಡಿ, ಈ ಹಿಂದಿನ ಚುನಾವಣೆಯಲ್ಲಿ ನೀಡಿದ್ದ ಬೀರು ನೀಡುವ ಟೋಕನ್‌ಗಳೇ ಇನ್ನೂ ನಗದು ಆಗದಿರುವಾಗ ಈಗ ಮತ್ತೇ ಹತ್ತು ರು.ಗಳ ನೋಟನ್ನು ಟೋಕನ್ ರೂಪದಲ್ಲಿ ನೀಡುತ್ತಿದ್ದಾರೆ. ಜನತೆ ಟೋಕನ್ ನೀಡುವಾಗ ಕೃಷ್ಣಯ್ಯ ಶೆಟ್ಟಿರನ್ನು ಈ ಹಿಂದಿನ ಟೋಕನ್‌ಗಳ ಬಗ್ಗೆ ವಿಚಾರಿಸಿ ಜತೆಯಲ್ಲಿ ಆಕಸ್ಮಾತ್ ಈ ಬಾರಿ ಟೋಕನ್‌ಗೆ ಉಡುಗೂರೆ ನೀಡಿದರೆ ಮುಲಾಜಿಲ್ಲದೆ ಪಡೆಯಿರಿ. ಆದರೆ ಭ್ರಷ್ಟಾಚಾರ ತಡೆಯುವ ನರೇಂದ್ರ ಮೋದಿಗೆ ಮತ ನೀಡಿ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement