ಬಿಜೆಪಿಗೆ ಮತ ನೀಡಲು ಮನವಿ
ಮುಳಬಾಗಲು: ಬಲಿಜ ಜನಾಂಗದ ಅಭಿವೃದ್ಧಿಗೆ ಕಾಂಗ್ರೆಸ್ ಏನೂ ಮಾಡಿಲ್ಲ ಎಂದು ಬಲಿಜ ಜನಾಂಗದ ಮುಖಂಡ ಹಾಗೂ ಮಾಜಿ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಎಂ.ಪ್ರಭಾಕರ್ ಹೇಳಿದರು. ಬಲಜ ಜನಾಂಗಕ್ಕೆ ಮೀಸಲು ಕಲ್ಪಿಸಿರುವ ಬಿಜೆಪಿ ಅಭ್ಯರ್ಥಿಗೆ ಮತ ನೀಡಲು ಕೋರಿದ್ದಾರೆ.
ಮತದಾನ ಅರಿವಿಗೆ ಪಂಜಿನ ಮೆರವಣಿಗೆ
ಮುಳಬಾಗಲು: ಮತದಾನ ಅರವಿಗೆ ಸೋಮವಾರ ರಾತ್ರಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪಂಜಿನ ಮೆರವಣಿಗೆ ನಡೆಸಲಾಯಿತು. ತಾಲೂಕು ಆಡಳಿತವತಿಯಿಂದ ಈ ಕಾರ್ಯಕ್ರಮ ಹಾಕಿಕೊಳ್ಳಲಾಗಿತ್ತು. ಮತದಾನ ಮಹತ್ವದ ಬಗ್ಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಅಲಂಗೂರು ಮಂಜುನಾಥ್ ತಿಳಿಸಿದರು. ಕಾರ್ಯಕ್ರದಲ್ಲಿ ತಾಪಂ ಅಧಿಕಾರಿ ಅರುಣಕುಮಾರ್, ಸರ್ಕಲ್ ಇನ್ಸ್ಪೆಕ್ಟರ್ ಕೃಷ್ಣಪ್ಪ, ಸಮಾಜ ಕಲ್ಯಾಣ ಅಧಿಕಾರಿ ಎಂ.ನಾರಾಯಣಸ್ವಾಮಿ, ಅಧಿಕಾರಿಗಳಾದ ಗಂಗಾಧರಯ್ಯ, ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.
ಎಎಪಿಗೆ ದೇವನೂರು ಬೆಂಬಲ
ಕೋಲಾರ: ಮುಳುಗುತ್ತಿರುವವನಿಗೆ ದಡ ಸೇರಲು ಹುಲ್ಲುಕಡ್ಡಿ ಸಿಕ್ಕಿದಂತೆ ಆಮ್ ಆದ್ಮಿ ಪಕ್ಷ ಹುಟ್ಟಿಕೊಂಡಿದ್ದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಈ ಪಕ್ಷದ ಮೂಲಕ ರಾಜಕೀಯ ಕ್ಷೇತ್ರಕ್ಕೆ ಮಾದರಿಯಾಗುವುದರಿಂದ ಸರ್ವೋದಯ ಕರ್ನಾಟಕ ಪಕ್ಷ ಇವರನ್ನು ಬೆಂಬಲಿಸುತ್ತದೆ ಎಂದು ಸರ್ವೋದಯ ಪಕ್ಷದ ಅಧ್ಯಕ್ಷ, ಸಾಹಿತಿ ದೇವನೂರು ಮಹಾದೇವ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದ ಅವರು, ಪ್ರಸ್ತುತ ರಾಜಕಾರಣ ಮಾಯಾ ಬಜಾರ್ ಆಗಿರುವುದರಿಂದ ಜನಪ್ರತಿನಿಧಿಗಳು ಮಾರಾಟದ ವಸ್ತುಗಳಾಗಿದ್ದಾರೆ, ಪ್ರಜಾಪ್ರಭುತ್ವ ಗಂಡಾಂತರದಲ್ಲಿರುವುದರಿಂದ ಆಮ್ ಆದ್ಮಿ ಪಕ್ಷದ ಮೂಲಕ ಹೊಸ ಬದಲಾವಣೆ ಕಾಣಬೇಕಾಗಿದೆ ಎಂದರು. ಕೋಟಿಗಾನಹಳ್ಳಿ ರಾಮಯ್ಯ ಈಗಾಗಲೇ ಸಾಂಸ್ಕೃತಿಕ ರಾಜಕಾರಣದಲ್ಲಿ ಒಂದು ಮಾದರಿಯನ್ನು ಸೃಷ್ಟಿಸಿದ್ದು ಅದರ ಮುಖವಾಣಿಯಾಗಿ ಆದಿಮ ಇಂದು ದೇಶದಲ್ಲೇ ಮಾದರಿಯಾಗಿದೆ. ಇವರನ್ನು ಲೋಕಸಭೆಗೆ ಆಯ್ಕೆ ಮಾಡಿದಲ್ಲಿ ದೇಶಕ್ಕೆ ಒಳ್ಳೆಯದಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅಂಕಣಕಾರ ವಿವೇಕಾನಂದ, ಎ.ಟಿ. ಕೃಷ್ಣನ್, ಇಮ್ರಾನ್ ಇದ್ದರು.
ಜೆಡಿಎಸ್ ರೋಡ್ ಶೋ ಇಂದು
ಚಿಕ್ಕಬಳ್ಳಾಪುರ: ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ಏ.15ರಂದು ಮಧ್ಯಾಹ್ನ 12 ಗಂಟೆಗೆ ನಗರದಲ್ಲಿ ರೋಡ್ ಶೋ ನಡೆಸಲಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ವಿ. ನಾಗರಾಜ್ ತಿಳಿಸಿದ್ದಾರೆ.
ಜೆಡಿಎಸ್ಗೆ ದಸಂಸ ಬೆಂಬಲ
ಗುಡಿಬಂಡೆ: ಚಿಕ್ಕಬಳ್ಳಾಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್.ಡಿ. ಕುಮಾರ ಸ್ವಾಮಿಗೆ ತಾಲೂಕು ದಸಂಸ ಬೆಂಬಲ ನೀಡಲು ತೀರ್ಮಾನಿಸಿದೆ ಎಂದು ಜಿಲ್ಲಾ ಸಂಚಾಲಕ ಸಿ.ಜಿ. ಗಂಗಪ್ಪ ತಿಳಿಸಿದ್ದಾರೆ.
ಈ ಹಿಂದೆ ಕ್ಷೇತ್ರದ ದಲಿತರ ಮತ ಪಡೆದು ಸಂಸದರಾಗಿದ್ದ ಎಂ. ವೀರಪ್ಪ ಮೊಯ್ಲಿ ದಲಿತರ ಬಗ್ಗೆ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಕುಮಾರಸ್ವಾಮಿಗೆ ಬೆಂಬಲ ನೀಡಲು ಜಿಲ್ಲಾ ಸಮಿತಿ ಸೂಚನೆಯಂತೆ ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ. ವ್ಯೆ.ಎ. ಆದಿನಾರಾಯಣಪ್ಪ, ಗಂಗುಲಪ್ಪ, ನಂದೀಶ, ನಾಗರಾಜು ಇದ್ದರು.
ಮತದಾನ ಬಹಿಷ್ಕಾರ
ಟೇಕಲ್: ಹುಳದೇನಹಳ್ಳಿ ಗ್ರಾಪಂ ವ್ಯಾಪ್ತಿಯ ಪದೋಬಟ್ಟಿ ಮತ್ತು ಮಾತಂಗಪುರ ಗ್ರಾಮಸ್ಥರು ಮೂಲಸೌಕರ್ಯಗಳ ಕೊರತೆಯಿಂದ ಈ ಬಾರಿ ಮತದಾನಕ್ಕೆ ಬಹಿಷ್ಕರಿಸಿರುವುದೀಗಿ ತಿಳಿಸಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಮಾತನಾಡಿ, ಗ್ರಾಮದಲ್ಲಿ ಚರಂಡಿ, ಕುಡಿಯುವ ನೀರಿಗಾಗಲಿ ಇಲ್ಲ. 5 ವರ್ಷಕ್ಕೊಮ್ಮೆ ಬಂದು ಹೋಗುವ ಜನಪ್ರತಿನಿಧಿಗಳು ಇತ್ತ ಸುಳಿಯುವುದಿಲ್ಲವೆಂದು ಹಾಗಾಗಿ ಮತದಾನ ಬಹಿಷ್ಕರಿಸಲಾಗಿದೆ ಎಂದು ತಿಳಿಸಿದ್ದಾರೆ.