ಮುನಿಯಪ್ಪರ ಅಕ್ರಮ ಆಸ್ತಿ 2 ಸಾವಿರ ಕೋಟಿ
ಕೋಲಾರ: ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್. ಮುನಿಯಪ್ಪ ಸುಮಾರು 2 ಸಾವಿರ ಕೋಟಿ ಅಕ್ರಮ ಆಸ್ತಿ ಹೊಂದಿದ್ದು ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಬಿಎಸ್ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಒತ್ತಾಯಿಸಿದರು.
ಸುದ್ದಿಗಾರರಿಗೆ ಕೆ.ಎಚ್. ಮುನಿಯಪ್ಪ ಮತ್ತವರ ಕುಟುಂಬದವರು ವಿವಿಧೆಡೆ ಮಾಡಿಕೊಂಡಿರುವ ಸಾವಿರಾರು ಕೋಟಿ ರು ಸಂಪಾದಿಸಿದ್ದಾರೆಂಬ ಆರೋಪಗಳಿಗೆ ಸಂಬಂಧಿಸಿದ ವಿವರಗಳನ್ನು ತಿಳಿಸಿದರು. ಕೆ.ಎಚ್. ಮುನಿಯಪ್ಪ ಕಳೆದ 25 ವರ್ಷಗಳಲ್ಲಿ ಕ್ಷೇತ್ರವನ್ನು ಅಭಿವೃದ್ಧಿ ಮಾಡದೆ ಅಕ್ರಮ ಆಸ್ತಿ ಮಾಡಿದ್ದಾರೆಂದು ದೂರಿದರು. ಬೆಂಗಳೂರಿನಲ್ಲಿ 5ರಿಂದ 7 ಮನೆ, ಸುಮಾರು 500 ಎಕರೆ ಜಮೀನು ಸೇರಿದಂತೆ ಅನೇಕ ಆಸ್ತಿಗಳನ್ನು ತಮ್ಮ ಕುಟುಂಬ ಸೇರಿದಂತೆ ಹಿಂಬಾಲಕ ಮುಳಬಾಗಿಲಿನ ರಾಮಪ್ರಸಾದೆ ಹೆಸರಿನಲ್ಲಿ ಮಾಡಿದ್ದು, ಇಷ್ಟು ಹಣ ಎಲ್ಲಿಂದ ಬಂತೆಂದು ಪ್ರಶ್ನಿಸಿದರಲ್ಲದೆ ಈ ಬಗ್ಗೆ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಗಾಂಧಿ, ರಾಹುಲ್‌ಗಾಂಧಿ ಮತ್ತು ರಾಷ್ಟ್ರಪತಿಗಳಿಗೆ ಅಕ್ರಮ ಆಸ್ತಿಗಳ ದಾಖಲೆಯನ್ನು ನೀಡಲಾಗಿದೆ ಎಂದರು.
ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ನೀಡಬೇಕು ಎಂದು ಪಾರ್ಲಿಮೆಂಟ್‌ನಲ್ಲಿ ಬಿಎಸ್‌ಪಿ ಹೋರಾಟ ನಡೆಸಿ ಮಸೂದೆ ಪಾಸ್‌ಗೆ ಒತ್ತಾಯಿಸಿತು. ಆದರೆ ಇದಕ್ಕೆ ಕಾಂಗ್ರೆಸ್ ಬೆಂಬಲ ನೀಡಲಿಲ್ಲ ಎಂದು ದೂರಿ, ಈಗ ತನ್ನ ಪ್ರಣಾಳಿಕೆಯಲ್ಲಿ ಖಾಸಗಿ ಮೀಸಲಾತಿಯ ಬಗ್ಗೆ ಪ್ರಸ್ತಾಪ ಮಾಡಿದೆ ಎಂದು ಲೇವಡಿ ಮಾಡಿದರು. ದೇಶದಲ್ಲಿ ಯುಪಿಎ ಮತ್ತು ಎನ್‌ಡಿಎಗಳಿಗೆ ಬಹುಮತ ಬರುವುದಿಲ್ಲ ಎಂದ ಅವರು, ಬಿಎಸ್‌ಪಿ ಸಹಕಾರವಿಲ್ಲದೆ ಯಾವುದೇ ಪಕ್ಷ ದೇಶದಲ್ಲಿ ಆಡಳಿತ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದರು.