ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅದ್ಧೂರಿ ಚೌಡೇಶ್ವರಿ ರಥೋತ್ಸವ

Srinivasa Murthy VN
Updated On : 16 Apr 2014, 2:00 am

ಮುಳಬಾಗಲು: ತಾಲೂಕಿನ ಕೂಲದೇವಿ ಗ್ರಾಮದ ಪ್ರಸನ್ನ ಚೌಡೇಶ್ವರಿ ಬ್ರಹ್ಮರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
ರಥೋತ್ಸವದ ಅಂಗವಾಗಿ ವಿಶೇಷ ಪೂಜೆ ಹಾಗೂ ಹೋಮ ಕಾರ್ಯಗಳನ್ನು ಮಾಡಿ ದೇವಿಗೆ ಅಲಂಕಾರ ಮಾಡಲಾಗಿತ್ತು. ಸುತ್ತಮುತ್ತಲ ಸಾವಿರಾರಿ ಮಂದಿ ಭಕ್ತಾಧಿಗಳು ದೇವಿಯ ದರ್ಶನ ಪಡೆದರು. ರಾಜ್ಯ ರೇಷ್ಮೆ ಮಂಡಳಿ ಅಧ್ಯಕ್ಷ ಎಸ್.ಎನ್. ಬಿಸೇಗೌಡ, ಎ.ವಿ. ಕೃಷ್ಣೇಗೌಡ, ಜಿ.ಆರ್. ಶ್ರೀಧರ್, ಸಿ.ಎಂ. ಕೋದಂಡಪ್ಪ, ವೆಂಕಟೇಶ್, ಶ್ರೀನಿವಾಸ್ ಇದ್ದರು.

ಸುಟ್ಟುಕೊಂಡಿದ್ದ ವ್ಯಕ್ತಿ ಸಾವು
ಕೆಜಿಎಫ್: ಕುಡಿದ ಅಮಲಿನಲ್ಲಿ ಮೈ ಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಮೃತಪಟ್ಟ ಘಟನೆ ಬೇತಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗ್ರಾಮದ ನಿವಾಸಿ ಸೀನಪ್ಪ(40) ಮೃತಪಟ್ಟವ. ಈತ ಪುಷ್ಪರಾಜ್ ಇಟ್ಟಿಗೆ ಕಾರ್ಖಾನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಬೇತಮಂಗಲ ಗ್ರಾಮದಲ್ಲಿ ನಡೆದ ಕರಗ ಜಾತ್ರಾ ಮಹೋತ್ಸವ ನೋಡಿಕೊಂಡು ಬೆಳಗಿನ ಜಾವ ತಮ್ಮ ಮನೆಗೆ ಹೋದ ಸೀನಪ್ಪ ಕುಡಿದ ಅಮಲಿನಲ್ಲಿ ಮನೆಯಲ್ಲಿದ್ದ ಸೀಮೆ ಎಣ್ಣೆ ಮೈ ಮೇಲೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸುಟ್ಟಗಾಯಗಳಾಗಿದ್ದ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೇತಮಂಗಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಡಾ.ಬಿ.ಆರ್.ಅಂಬೇಡ್ಕರ್ ಜಂಯತಿ ಆಚರಣೆ
ಟೇಕಲ್: ಕೊಂಡಶೆಟ್ಟಹಳ್ಳಿಯ ಗ್ರಾಮಸ್ಥರು ಹಾಗೂ ಸಮತಾ ಸೈನಿಕ ದಳದ ಪದಾಧಿಕಾರಿಗಳಿಂದ 123ನೇ ಅಂಬೇಡ್ಕರ್ ಜಯಂತಿಯನ್ನು ಗ್ರಾಮದ ಸಮುದಾಯ ಭವನದ ಖಾಲಿ ನಿವೇಶನದಲ್ಲಿ ಆಚರಿಸಲಾಯಿತು. ಈ ವೇಳೆ ಶಾಖೆಯ ಕೆ.ಎಂ.ರಾಜಣ್ಣ ಮಾತನಾಡಿದರು. ಸಿ.ಎಸ್.ಮಂಜುನಾಥ್, ಚಂಬೆ ರವಿಂದ್ರ, ಗ್ರಾಮದ ಸಾದತುಲ್ಲಾಖಾನ್, ಜಿವಿಕೆ ಮೋಹನ್, ಸಾಧಿಕ್ ಪಾಷ, ಪಾಪಣ್ಣ ಮುಂತಾದವರು ಉಪಸ್ಥಿತರಿದ್ದರು.

ಕಲ್ಯಾಣಿಯಲ್ಲಿ ಮುಳುಗಿ ಬಾಲಕ ಸಾವು
ಮುಳಬಾಲು: ಪಟ್ಟಣದ ಆಂಜನೇಯಸ್ವಾಮಿ ದೇವಾಲಯದ ಮುಂದಿನ ಕಲ್ಯಾಣಿಯಲ್ಲಿ ಆಕಸ್ಮಿಕವಾಗಿ ಬಿದ್ದು ಶಾಲಾ ಬಾಲಕ ಸಾವಿಗೀಡಾದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ಮೃತ ಬಾಲಕನನ್ನು ನೂಗಲಬಂಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಮತೀನ್ ಪಾಷ(12) ಎಂದು ಗುರ್ತಿಸಲಾಗಿದೆ. ಶಾಲೆ ನಂತರ ಸ್ನೇಹಿತರೊಂದಿಗೆ ಮತೀನ್ ಪಾಷ ಕಲ್ಯಾಣಿ ಬಳಿ ಆಟವಾಡುತ್ತಿದ್ದ ವೇಳೆ ಕಾಲು ಜಾರಿ ಬಿದ್ದಾಗ. ಉಳಿದವರು ಪೋಷಕರಿಗೆ ವಿಷಯ ತಿಳಿಸುವ ವೇಳೆಗೆ ಬಾಲಕ ಮೃತಪಟ್ಟಿದ್ದಾನೆ. ಮುಳಬಾಗಲು ಸಬ್‌ಇನ್ಸ್‌ಕ್ಟರ್ ಶಂಕರಪ್ಪ ಕೇಸು ದಾಖಲು ಮಾಡಿಕೊಂಡಿದ್ದಾರೆ.

ಅಪಘಾತ: ಬೈಕ್ ಸವಾರ ಸಾವು
ಬಂಗಾರಪೇಟೆ: ಕಾರು ಮತ್ತು ಬೈಕ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸಕ್ಕನಹಳ್ಳಿ ಗೇಟ್ ಬಳಿ ಸಂಭವಿಸಿದೆ. ಮೃತನನ್ನು ದೊಡ್ಡವಲಗಮಾದಿ ಗ್ರಾಮದ ನಾರಾಯಣಸ್ವಾಮಿ ಎಂದು ಗುರುತಿಸಲಾಗಿದೆ. ನಾರಾಯಣಸ್ವಾಮಿ ಬೈಕಿನಲ್ಲಿ ಬರುತ್ತಿದ್ದಾಗ ಕಾಮಸಮುದ್ರ ಕಡೆಯಿಂದ ಬರುತ್ತಿದ್ದ ಮಾರುತಿ ಕಾರ್ ನೇರವಾಗಿ ಡಿಕ್ಕಿ ಹೊಡೆದಿದೆ. ಆಗ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪಟ್ಟಣ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.

ಮುದ್ರಣ, ವಿದ್ಯುನ್ಮಾನ ಮಾಧ್ಯಮ ತರಬೇತಿ
ತುಮಕೂರು: ಇಲ್ಲಿನ ಶ್ರೀ ಸಿದ್ಧಗಂಗ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ  ಪತ್ರಿಕೋದ್ಯಮದ ವಿದ್ಯಾರ್ಥಿಗಳು ನಗರದ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ  ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ  ಕುರಿತ ಒಂದು ದಿನದ ತರಬೇತಿ  ಪಡೆದುಕೊಂಡರು. ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಪ್ರಾಯೋಗಿಕ ಕೆಲಸಗಳ ಕುರಿತು ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದ ಬಗ್ಗೆ ತರಗತಿಗಳನ್ನು ನಡೆಸಲಾಯಿತು. ಪತ್ರಿಕೆಯಲ್ಲಿ ಹೇಗೆ ಸುದ್ದಿಗಳನ್ನು ಸಿದ್ಧಪಡಿಸಬೇಕು ಮತ್ತು ಪತ್ರಿಕೆಯ ಪುಟವಿನ್ಯಾಸ ತಯಾರಿಸುವುದರ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಮಾಹಿತಿಯನ್ನು ನೀಡಲಾಯಿತು. ವಿದ್ಯುನ್ಮಾನ ವಿಭಾಗದಲ್ಲಿ  ಪ್ರಮುಖವಾಗಿ ಟಿ.ವಿ.ನಿರ್ಮಾಣದ ಬಗ್ಗೆ ಪರಿಚಯ ಮಾಡಿಕೊಡಲಾಯಿತು. ಕ್ಯಾಮರಾ ಬಳಕೆ ಹೇಗೆ ಮಾಡುವುದು, ಅದರಲ್ಲಿನ ಅವಕಾಶಗಳನ್ನು ಬಳಸಿಕೊಂಡು ಹೇಗೆ ಸುದ್ದಿಗಳನ್ನು ಮತ್ತು ಕಾರ್ಯಕ್ರಮಗಳನ್ನು ಸೆರೆಹಿಡಿಯಬಹುದು ಎಂಬುದನ್ನು ವಿದ್ಯಾರ್ಥಿಗಳಿಗೆ ವಿವರಿಸಲಾಯಿತು. ಸಮುದಾಯ ಬಾನುಲಿ ರೇಡಿಯೋ ಸಿದ್ಧಾರ್ಥ 90.8 ಎಫ್‌ಎಮ್ ನಲ್ಲಿ ಕಾರ್ಯಕ್ರಮಗಳನ್ನು  ನಡೆಸಿಕೊಡುವುದರ ಬಗ್ಗೆ  ಹಾಗೂ ಅದರ ಪ್ರಸಾರ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ, ರೇಡಿಯೋ ಕಾರ್ಯಕ್ರಮಗಳನ್ನು ಸಿದ್ಧಪಡಿಸಲು ಪ್ರೇರೇಪಿಸಲಾಯಿತು.ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಬಿ.ಟಿ. ಮುದ್ದೇಶ್, ಶ್ರೀ ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ  ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ದೇವರಾಜು.ಸಿ ಮತ್ತು ಸಂಸ್ಥೆಯ ಅಧ್ಯಾಪಕ ವರ್ಗ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.  

ಪೌಷ್ಟಿಕ ಆಹಾರ ಸೇವನೆ ಅತ್ಯಗತ್ಯ
ಪಾವಗಡ: ಪೌಷ್ಟಿಕ ಆಹಾರ ಸೇವನೆ ಮತ್ತು ಅಗತ್ಯ ವಸ್ತುಗಳ ಬಳಕೆಯಿಂದ ಆರೋಗ್ಯ ಕಾಪಾಡಿಕೊಳ್ಳುವಂತೆ ಬ್ಯಾಡನೂರು ಉಪ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ವಿ. ಸಾವಿತ್ರಮ್ಮ ಹೆಣ್ಣು ಮಕ್ಕಳಿಗೆ ಕರೆ ನೀಡಿದರು.ಸರ್ಕಾರಿ ಸಾರ್ವಜನಿಕ ಆರೋಗ್ಯ ಕೇಂದ್ರ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಮಂಗಳವಾರ ಬ್ಯಾಡನೂರು ಗ್ರಾಮದ ಆರೋಗ್ಯ ಉಪ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಹದಿ ಹರೆಯದ ಬಡ ಹೆಣ್ಣು ಮಕ್ಕಳಿಗೆ ಆರೋಗ್ಯದ ಸಲಹೆ ಮತ್ತು ನ್ಯಾಪ್‌ಕಿನ್‌ಗಳ ವಿತರಣೆ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮಹಿಳೆಯರು ಜಾಗೃತರಾಗಬೇಕು. ಅದರಲ್ಲೂ ಹದಿಹರೆಯದ ಹೆಣ್ಣು ಮಕ್ಕಳು ಹೆಚ್ಚು ಗಮನ ಹರಿಸಿ ತಮ್ಮ ಆರೋಗ್ಯ ಉತ್ತಮ ಪಡಿಸಿಕೊಳ್ಳಲು ಸಲಹೆ ನೀಡಿದರು. ಆರೋಗ್ಯ ಮತ್ತು ಶಿಕ್ಷಣದ ಬಗ್ಗೆ ಅರಿವು ಮೂಡಿಸಿದ ಅವರು ಹೆಣ್ಣು ಮಕ್ಕಳು ವಿದ್ಯಾವಂತರಾಗಿ ಸಮಾಜದ ಎಲ್ಲಾ ರಂಗದಲ್ಲಿಯೂ ಮುಂದೆ ಬರಬೇಕು. ಮೀಸಲು ಕಲ್ಪಿಸುವ ಮೂಲಕ ಮಹಿಳೆಯರಿಗಾಗಿಯೇ ಸಂವಿಧಾನದ ಅನ್ವಯ ಅನೇಕ ಕಾರ್ಯಕ್ರಮಗಳು ರೂಪಿಸಿದ್ದು ಸದುಪಯೋಗಪಡಿಸಿಕೊಂಡು ಸ್ವಾವಲಂಬಿಗಳಾಗಿ ಆರ್ಥಿಕವಾಗಿ ಸದೃಢರಾಗುವಂತೆ ಅವರು ಕರೆ ನೀಡಿದರು. ಎಲ್.ಎಚ್. ವಿ. ತಿಪ್ಪೀರಮ್ಮ, ರತ್ನಮ್ಮ, ಲಕ್ಷ್ಮಮ್ಮ, ವರಲಕ್ಷ್ಮೀ ಹಾಗೂ ಗ್ರಾಮದ ಎಲ್ಲಾ ಸ್ವಸಹಾಯಕ ಮತ್ತು ಸ್ತ್ರಿ ಶಕ್ತಿ ಸಂಘಗಳ ಮಹಿಳೆಯರು ಭಾಗವಹಿಸಿದ್ದರು.

ಚಿನ್ನಪ್ಪಗೆ ವಿವಿಧ ಸಂಘಟನೆಗಳ ಬೆಂಬಲ
ತುಮಕೂರು: ತುಮಕೂರುಲೋಕಸಭಾ ಕ್ಷೇತ್ರದ ಸಿಪಿಐ ಅಭ್ಯರ್ಥಿ ವಿ. ಚಿನ್ನಪ್ಪ ಅವರಿಗೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಈ ಕುರಿತು ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅಖಿಲ ಭಾರತ ಯುವಜನ ಫೆಡರೇಷನ್, ಭಾರತೀಯ ಮಹಿಳಾ ಒಕ್ಕೂಟ, ಭಾರತೀಯ ಕೃಷಿ ಕೂಲಿ ಕಾರ್ಮಿಕ ಸಂಘಟನೆ ರಾಜ್ಯ ಮುಖಂಡರು ಸಾಮಾನ್ಯ ಜನತೆ, ರೈತ, ಕಾರ್ಮಿಕರ ಪರ ಹಲವು ದಶಕಗಳಿಂದ ಹೋರಾಟ ನಡೆಸುತ್ತಲೇ ಬಂದಿರುವ ಭಾರತೀಯ ಕಮ್ಯೂನಿಸ್ಚ್ ಪಕ್ಷದ ಧ್ಯೇಯ, ಧೋರಣೆ ಹಿನ್ನೆಲೆಯಲ್ಲಿ ಆ ಪಕ್ಷದ ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿ. ಚಿನ್ನಪ್ಪ ಅವರಿಗೆ ಬೆಂಬಲ ನೀಡುತ್ತಿರುವುದಾಗಿ ಘೋಷಿಸಿದರು. ಕಾಂಗ್ರೆಸ್, ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು. ರೈತ, ಕಾರ್ಮಿಕ, ಜನವಿರೋಧಿ ನೀತಿ ಅನುಸರಿಸುತ್ತಿರುವ ಎರಡು ರಾಷ್ಟೀಯ ಪಕ್ಷಗಳು. ಈ ಎರಡೂ ಪಕ್ಷಗಳು ಮಹಿಳಾ ವಿರೋಧಿಗಳೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement