ಚಿಕ್ಕಬಳ್ಳಾಪುರದಲ್ಲಿ ದೊಡ್ಡ ಸಮಸ್ಯೆ!
-ವಿಶೇಷ ವರದಿ
ಚಿಕ್ಕಬಳ್ಳಾಪುರ: ಪ್ರತಿ ಚುನಾವಣೆಯಲ್ಲೂ ರಾಜಕಾರಣಿಗಳು ನೀಡುವ ಭರವಸೆಗಳೇನೂ ಕಮ್ಮಿ ಇಲ್ಲ. ಇನ್ನೇನೂ ಕ್ಷೇತ್ರ ಸಂಪೂರ್ಣವಾಗಿ ಬದಲಾಗಿ ಅಭಿವೃದ್ಧಿಯತ್ತ ಸಾಗಿಯೇ ಬಿಡುತ್ತದೆ ಎಂಬ ಭಾವನೆ ಜನರಲ್ಲಿ ಮೂಡುತ್ತಿರುವಾಗಲೇ, ಅದು ಸುಳ್ಳು ಎಂಬುದು ಗೊತ್ತಾಗುತ್ತದೆ. ಇದು ಒಟ್ಟಾರೆ ಚಿಕ್ಕಬಳ್ಳಾಪುರ ಕ್ಷೇತ್ರದ ವಾಸ್ತವ ಸ್ಥಿತಿ. ಈ ಕ್ಷೇತ್ರದಲ್ಲಿ ಸೂಕ್ತ ರೀತಿಯಲ್ಲಿ ಅಭಿವೃದ್ಧಿ ಕೈಗೊಂಡಿದ್ದರೆ, ಯಾವುದೇ ರೀತಿಯ ಗಂಭೀರ ಸಮಸ್ಯೆಗಳು ಕಾಣುತ್ತಿರಲಿಲ್ಲ. ಆದರೆ, ಜನಪ್ರತಿನಿಧಿಗಳ ನಿರ್ಲಕ್ಷ್ಯ ಎಲ್ಲದಕ್ಕೂ ಅಡ್ಡಿ. ಇಲ್ಲಿ ಅಂತರ್ಜಲ ಮಟ್ಟ ತೀರಾ ಕುಸಿದಿದೆ. 1200 ಅಡಿ ಆಳ ಕೊಳವೆ ಬಾವಿಯನ್ನು ಕೊರೆದರೂ ಸಹ ನೀರು ಸಿಗುತ್ತಿಲ್ಲ. ಒಂದು ವೇಳೆ ನೀರು ದೊರೆತರೂ ಸಹ ಎರಡ್ಮೂರು ತಿಂಗಳಲ್ಲೇ ಕೊಳವೆ ಬಾವಿ ಬತ್ತಿ ಹೋಗುತ್ತದೆ. ಇನ್ನೂ ಬಿಸ್ಲೇರಿ ಕುಡಿಯುವ ಜನ ನಾಯಕರು ಫ್ಲೋರೈಡ್ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ!
ಫ್ಲೋರೈಡ್ ಭೂತ: ಬಾಗೇಪಲ್ಲಿ, ಗುಡಿಬಂಡೆ ವ್ಯಾಪ್ತಿಯ ಗ್ರಾಮಗಳಲ್ಲಿ 9-10 ವರ್ಷದ ಮಕ್ಕಳ ಹಲ್ಲುಗಳು 65 ವರ್ಷದ ಮುದುಕರ ರೀತಿಯಲ್ಲಿರುತ್ತವೆ. ಇನ್ನೂ 30 ವರ್ಷ ದಾಟುವುದರೊಳಗೆ ಮೂಳೆಗಳು ಸವೆದು ಕೀಲುನೋವು, ಅಂಗವೈಕಲ್ಯ ಸೇರಿದಂತೆ ನಾನಾ ಸಮಸ್ಯೆಗಳಿಗೆ ತುತ್ತಾಗುತ್ತಿರುವರ ಪ್ರಮಾಣ ಹೆಚ್ಚು.
ಯಾವುದೇ ಶಾಶ್ವತ ನೀರಾವರಿ ಸೌಲಭ್ಯವನ್ನು ಹೊಂದಿರದಿದ್ದರೂ ಸಹ ಈ ಭಾಗದ ರೈತರು ಬೆವರು ಸುರಿಸಿ ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ತಮ್ಮ ಪರಿಶ್ರಮದಿಂದ ದ್ರಾಕ್ಷಿ, ತರಕಾರಿ ಬೆಳೆಗಳನ್ನು ಬೆಳೆದು ರಾಜ್ಯಕ್ಕೆ ತಮ್ಮದೇ ಕೊಡುಗೆಯನ್ನು ನೀಡುತ್ತಿದ್ದಾರೆ. ರೇಷ್ಮೆ ಕೃಷಿಗೂ ಹೆಸರನ್ನು ಪಡೆದುಕೊಂಡಿರುವುದಲ್ಲದೇ ಹೈನೋದ್ಯಮದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಆದರೆ, ಪ್ರಾಮಾಣಿಕವಾಗಿ ಇವರಿಗೆ ಪ್ರೋತ್ಸಾಹ ಸಿಗದೇ ಇರುವುದು ದುರದೃಷ್ಟಕರವೇ ಸರಿ. ಸೂಕ್ತ ಸಮಯದಲ್ಲಿ ಸಮಸ್ಯೆಗಳಿಗೆ ಸ್ಪಂದಿಸದ ಕಾರಣ ಶ್ರಮಕ್ಕೆ ತಕ್ಕಂತೆ ಸಮರ್ಪಕವಾಗಿ ಪ್ರತಿಫಲವನ್ನು ರೈತರು ಪಡೆಯುತ್ತಿಲ್ಲ. ಇದರಿಂದ ಉಂಟಾಗುತ್ತಿರುವ ಹಿನ್ನಡೆಗೆ ಕೃಷಿ ಕ್ಷೇತ್ರವನ್ನು ಬಿಟ್ಟು ಹಲವರು ಬೆಂಗಳೂರು ಸೇರಿದಂತೆ ಹೈಟೆಕ್ ನಗರಗಳ ಕಡೆಗೆ ಉದ್ಯೋಗಳಿಗಾಗಿ ವಲಸೆ ಹೋಗುವಂತದ್ದೂ ಸಾಮಾನ್ಯವಾಗಿದೆ.
ನಿರ್ಲಕ್ಷ್ಯ ಯಾಕೆ?: ಚಿಕ್ಕಬಳ್ಳಾಪುರ ಕ್ಷೇತ್ರ ಕಾಂಗ್ರೆಸ್ನ ಭದ್ರಕೋಟೆ. ಈ ಹಿಂದೆ ಬೇರೆ ಪಕ್ಷಗಳ ಪ್ರಾಬಲ್ಯಗಳ ಕೊರತೆಯಿಂದ ಏಕವ್ಯಕ್ತಿ, ಏಕಪಕ್ಷ ಬಲ ಕೆಲಸ ಮಾಡುತ್ತಿತ್ತು. ಇದರಿಂದ ತಮಗೆ ಗೆಲುವು ಸುಲಭದ ತುತ್ತು ಎಂಬ ಭಾವನೆಯು ನಿರ್ಲಕ್ಷ್ಯಕ್ಕೆ ಪ್ರಮುಖ ಕಾರಣವಾಗಿತ್ತು. ಪ್ರಭಾವಿ ಮುಖಂಡ ಆರ್.ಎಲ್.ಜಾಲಪ್ಪ ರಾಜಕೀಯದಿಂದ ತೆರೆಮೆರೆಗೆ ಸರಿದು ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಕ್ಷೇತ್ರಕ್ಕೆ ಆಗಮಿಸುತ್ತಿದ್ದಂತೆ ಜನರಲ್ಲಿ ಹೊಸ ಹೊಸ ನಿರೀಕ್ಷೆಗಳು ಹುಟ್ಟಿಕೊಂಡವು. 2009ರಲ್ಲಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಿದ ಪ್ರತ್ಯೇಕ ದೊಡ್ಡ ಪ್ರಣಾಳಿಕೆಯನ್ನು ನೋಡಿದ ಜನರು, ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದಂಥ ಮೊಯ್ಲಿ, ಆಯ್ಕೆಯಾದರೆ ಕೇಂದ್ರದಲ್ಲಿ ಪ್ರಭಾವಿ ಸಚಿವ ಹುದ್ದೆ ಪಡೆಯುವುದು ಗ್ಯಾರಂಟಿ. ಹಾಗಾದರೆ, ಇಲ್ಲಿನ ಸಮಸ್ಯೆಗಳಿಗೆ ಮುಕ್ತಿ ಸಿಗುವುದು ಎಂದು ನಂಬಿದ್ದರು. ಆದರೆ, ಆಗಿದ್ದೇ ಬೇರೆ.
ಏನು ಮಾಡಬಹುದಿತ್ತು?
-ಈ ಭಾಗದಲ್ಲಿ ಕೆರೆಗಳ ಸಂರಕ್ಷಣೆ, ಅಂತರ್ಜಲ ಮಟ್ಟ ಹೆಚ್ಚಿಸಬೇಕಾಗಿತ್ತು.
-ವೈನ್ ಯಾರ್ಡ್ ಸ್ಥಾಪನೆ, ರಫ್ತಿಗೆ ಕ್ರಮ, ತರಕಾರಿ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಒದಗಿಸಬಹುದು.
-ರೇಷ್ಮೆ ಕೃಷಿಕರಿಗೆ ಪ್ರೋತ್ಸಾಹ, ಮಾರುಕಟ್ಟೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಿತ್ತು.
-ಹೈನೋದ್ಯಮವು ಸಹ ಇಲ್ಲಿನ ರೈತರ ಜೀವಾಳ. ಹೈನೋದ್ಯಮದಲ್ಲಿ ಕಂಡು ಬರುತ್ತಿರುವ ಸಮಸ್ಯೆಗಳ ಕಡೆಗೆ ಗಮನ ಕೊಡುವುದು.
-ಗ್ರಾಮೀಣ ಭಾಗದಲ್ಲಿ ವಲಸೆ ಹೆಚ್ಚಾಗಿದೆ. ಇದನ್ನು ತಪ್ಪಿಸಲು ಪೂರಕವಾದ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚು ಒತ್ತು ಕೊಡುವುದು.
-ಕ್ಷೇತ್ರದಲ್ಲಿ ನಂದಿ ಬೆಟ್ಟದ ಜೊತೆಗೆ ಸ್ಕಂದಗಿರಿ, ರಂಗಸ್ಥಳ, ಮುದ್ದೇನಹಳ್ಳಿ, ಮುರುಗಮಲ್ಲಾ, ಕೈವಾರ, ಗುಮ್ಮನಾಯಕನಪಾಳ್ಯ, ತಲಕಾಯಲಬೆಟ್ಟ ಸೇರಿದಂತೆ ಅನೇಕ ಪ್ರವಾಸಿ ತಾಣಗಳಿವೆ. ಇದರಿಂದ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಬಹುದಿತ್ತು.