ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಿಜೆಪಿ ಪರ ಪ್ರಚಾರ ಜೋರು

Srinivasa Murthy VN
Updated On : 16 Apr 2014, 2:00 am

ಮಾಲೂರು: ಪಟ್ಟಣದ ನಾನಾ ವಾರ್ಡ್‌ಗಳಲ್ಲಿ ಬಿಜೆಪಿ ಅಭ್ಯರ್ಥಿ  ಎಂ. ನಾರಾಯಣಸ್ವಾಮಿ ಪರ ಪುರಸಭೆ ಮಾಜಿ ಉಪಾಧ್ಯಕ್ಷ ಮೋಹನ್ ಹಾಗೂ ಬಿಡೆಪಿಯ ಸ್ಲಂ ಮೋರ್ಚಾ ಅಧ್ಯಕ್ಷ ಕೃಷ್ಣಬಾಬು ಕಾರ್ಯಕರ್ತರೊಡನೆ ಮತಯಾಚಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಪುರಸಭೆ ಮಾಜಿ ಸದಸ್ಯ ಮೋಹನ್, ಪಟ್ಟಣದೆಲ್ಲಡೆ ಬಿಜೆಪಿ ಪರ ಬೆಂಬಲ ವ್ಯಕ್ತವಾಗುತ್ತಿದ್ದು, ಭವ್ಯ ಭಾರತದ ಕನಸು ಕಾಣುತ್ತಿರುವ ಇಂದಿನ ಯುವಕರ ಆಶಾ ಕಿರಣವಾಗಿರುವ ನರೇಂದ್ರ ಮೋದಿ ಪ್ರಧಾನಿಯಾಗಲು ಬೇಕಾದ 273 ನೇ ಕ್ಷೇತ್ರ ಕೋಲಾರ ವಾಗಲಿದೆ ಎಂದರು. ನಿವೃತ್ತ ಶಿಕ್ಷಕ ನಾರಾಯಣಪ್ಪ, ಮಧು, ರಾಮಾಂಜಿ, ಹೇಮಂತ, ಚಂದನ್, ಮಧು ಇದ್ದರು.

ವರಸಿದ್ಧಿ ವಿನಾಯಕ ಜಾತ್ರೆ
ಟೇಕಲ್: ಇಲ್ಲಿನ ಕೆ.ಜಿ.ಹಳ್ಳಿ ಗ್ರಾಮದಲ್ಲಿ ಶ್ರೀ ವರಸಿದ್ಧಿ ವಿನಾಯಕ ಸಮಿತಿ ಹಾಗೂ ಗ್ರಾಮಸ್ಥರ ಸಹಕಾರದಿಂದ 3ನೇ ವರ್ಷದ ಜಾತ್ರಾ ಮಹೋತ್ಸವ ಮಂಗಳವಾರ ನಡೆಯಲಿದೆ.
ಅಂದು ಬೆಳಿಗ್ಗೆ 6ರಿಂದ 10ರವರೆಗೆ ಶ್ರೀ ವಿನಾಯಕ ಸ್ವಾಮಿಗೆ ಪಂಚಾಮೃತ ಅಭಿಷೇಕ ಮಹಾಮಂಗಳಾರತಿ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ತೀರ್ಥ ಪ್ರಸಾದ ವಿನಿಯೋಗ, ಸಂಜೆ 6ಕ್ಕೆ ಆರ್ಕೇಸ್ಟ್ರಾ ಇದೆ. ರಾತ್ರಿ 8ಕ್ಕೆ 14 ದೇವರ ಪಲ್ಲಕ್ಕಿ ಉತ್ಸವ, 9ಕ್ಕೆ ಶ್ರೀ ಸಿದ್ಧಿ ವಿನಾಯಕ ಕೃಪಾ ಪೋಷಿತ ನಾಟಕ ಮಂಡಳಿಯಿಂದ ಸ್ರಾಮಾಟ ಸುಯೋಧನ ಪೌರಾಣಿಕ ನಾಟಕ ಪ್ರದರ್ಶನವಿದೆ. ಬೆಳಗಿನ ಜಾವ 2 ಗಂಟೆಯಿಂದ ಕರಗದ ಪೂಜಾರಿ ವಕ್ಕಲೇರಿ ರಘುರವರಿಂದ ಕರಗ ಮಹೋತ್ಸವ ನಡೆಯಲಿದೆ. ಹಾಗೆಯೇ ಅಗ್ನಿಕುಂಡ ಪ್ರವೇಶ ವಸಂತೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ವರಸಿದ್ಧಿ ವಿನಾಯಕ ಸಮಿತಿ ತಿಳಿಸಿದೆ.

ಶಿಡ್ಲಘಟ್ಟದಲ್ಲಿ 230 ಮತಗಟ್ಟೆಗಳು
ಶಿಡ್ಲಘಟ್ಟ: ಮತದಾನಕ್ಕಾಗಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ 230 ಮತಗಟ್ಟೆ ಸ್ಥಾಪಿಸಲಾಗಿದೆ. ಇವುಗಳಲ್ಲಿ 50 ಅತಿ ಸೂಕ್ಷ್ಮ, 101 ಸೂಕ್ಷ್ಮ  ಹಾಗೂ 71 ಸಾಮಾನ್ಯ ಮತಗಟ್ಟೆಗಳಿವೆ ಎಂದು ಸಹಾಯಕ ಚುನಾವಣಾಧಿಕಾರಿ ಯೋಗೀಶ್ ತಿಳಿಸಿದ್ದಾರೆ. ಚಿಂತಾಮಣಿ ತಾಲೂಕಿನ ಚಿಲಕಲನೇರ್ಪು ಹೋಬಳಿಯನ್ನು ಶಿಡ್ಲಘಟ್ಟ ವಿದಾನಸಭಾ ಕ್ಷೇತ್ರಕ್ಕೆ ಸೇರಿಸಲಾಗಿದೆ. ಒಟ್ಟು 230 ಮತಗಟ್ಟೆಗಳಿಗೆ 611 ಪೋಲಿಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ವಿಜೃಂಭಣೆಯ ಗಂಗಮ್ಮ ದೇವಿ ಬ್ರಹ್ಮರಥೋತ್ಸವ
ಶಿಡ್ಲಘಟ್ಟ: ತಾಲೂಕಿನ ಮೇಲೂರು ಗ್ರಾಮದೇವತೆ ಶ್ರೀ ಗಂಗಮ್ಮ ದೇವಿಯ ಬ್ರಹ್ಮರಥೋತ್ಸವವು ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
ಸುಮಾರು 800 ವರ್ಷಗಳ ಇತಿಹಾಸವಿರುವ ಶ್ರೀ ಗಂಗಾದೇವಿಯ ಬ್ರಹ್ಮರಥೋತ್ಸವದಲ್ಲಿ ಬೆಂಗಳೂರು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ರಥೋತ್ಸವದ ಅಂಗವಾಗಿ ಕಳೆದ ಒಂದು ವಾರದಿಂದ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಭಕ್ತರಿಗಾಗಿ ಹೆಸರುಬೇಳೆ ಪಾನಕ ಮತ್ತು ಪ್ರಸಾದಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಪ್ರಾರಂಭಕ್ಕೂ ಮುನ್ನ ಗೊಪೂಜೆಯನ್ನು ಆಚರಿಸಲಾಯಿತು. ರಥೋತ್ಸವದ ಅಂಗವಾಗಿ ಗ್ರಾಮದಾದ್ಯಂತ ವಿಶೇಷ ದೀಪಾಲಂಕಾರಗಳನ್ನು ಮಾಡಲಾಗಿತ್ತು.  ಗ್ರಾಮದ ಮುಖಂಡರಾದ ಆರ್.ಕೆ ರಾಮಕೃಷ್ಣಪ್ಪ, ಜೆ.ಜಿ ಗೌಡ, ಎನ್‌ಎಲ್‌ಎನ್ ಮೂತರ್, ಅಶ್ವತಪ್ಪ, ಶ್ರೀನಿವಾಸರೆಡ್ಡಿ, ಶ್ರೀಮತಿ ಚಂದ್ರಕಲಾ, ಎನ್.ಕೃಷ್ಣಪ್ಪ, ದೇವಾಲಯದ ಅಧ್ಯಕ್ಷ ಆರ್.ಎ ಉಮೇಶ್,  ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ್ ಇದ್ದರು.

ನಾಳೆ ಮತದಾನ
ಏ.17ರಂದು ಗುರುವಾರ ಬೆಳಿಗ್ಗೆ 7ರಿಂದ ಸಂಜೆ 6ಗಂಟೆಯವರೆಗೆ ಚುನಾವಣೆ ನಡೆಯಲಿದೆ. 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1492987 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಒಟ್ಟು 2041 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 7508 ಸಿಬ್ಬಂದಿಯನ್ನು ನೇಮಿಸಲಾಗಿದೆ. ಕಣದಲ್ಲಿ 22 ಅಭ್ಯರ್ಥಿಗಳಿದ್ದಾರೆ.
ಮತದಾನ ದಿನ ಏ.17 ಹಾಗೂ ಮತ ಎಣಿಕೆ ದಿನವಾದ ಮೇ 16ರಂದು ಒಣ ದಿನಗಳಾಗಿ ಜಿಲ್ಲಾ ಚುನಾವಣಾಧಿಕಾರಿ ಡಿ.ಕೆ.ರವಿ ಘೋಷಿಸಿದ್ದಾರೆ. ಈ ದಿನದಿಂದಲೇ ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲು ಸೂಚಿಸಲಾಗಿದೆ. ಮುಕ್ತ ನ್ಯಾಯ ಸಮ್ಮತ ಮತದಾನಕ್ಕಾಗಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಅಕ್ರಮಗಳನ್ನು ತಡೆಗಟ್ಟಲು ಸಾರ್ವಜನಿಕರು ಸಹಕಾರ ನೀಡಬೇಕೆಂದು ಚುನಾವಣಾಧಿಕಾರಿಗಳು ಮನವಿ ಮಾಡಿದ್ದಾರೆ.

ಜೆಡಿಎಸ್ ಸೇರ್ಪಡೆ
ಟೇಕಲ್: ಶಾಸಕ ಕೆ.ಎಸ್. ಮಂಜುನಾಥಗೌಡ, ತಾಪಂ ಮಾಜಿ ಅಧ್ಯಕ್ಷ ಕೆ.ವೈ. ನಂಜೇಗೌಡರ ಸಮ್ಮುಖದಲ್ಲಿ ನಾನಾ ಪಕ್ಷಗಳಿಂದ ಹಲವರು ಜೆಡಿಎಸ್ ಸೇರಿದರು. ಶ್ರೀನಿವಾಸ್ ಮೂರ್ತಿ, ಲಕ್ಷ್ಮಣ್, ರಾಮಣ್ಣ, ನಾರಾಯಣಸ್ವಾಮಿ, ತಿಮ್ಮರಾಯಪ್ಪ, ಮಂಜುನಾಥ್, ರಾಮಾಂಜಿ, ಆಂಜಿನಪ್ಪ, ಮುನಿಯಪ್ಪ ಸೇರಿದ್ದು, ಕೆ.ವೈ. ನಂಜೇಗೌಡ ಇವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಕಾಂಗ್ರೆಸ್ ಬೆಂಬಲಿಸಿ
ಚಿಂತಾಮಣಿ: ದೇಶಾದ್ಯಂತ ತಾಂಡವಾಡುತ್ತಿರುವ ಭ್ರಷ್ಟಾಚಾರ ನಿರ್ಮೂಲನೆಗೆ ಕಾಂಗ್ರೆಸ್‌ಗೆ ಬಹುಮತ ನೀಡಬೇಕು. ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಗೆಲ್ಲಿಸಿ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಬುಡನ್ ಹೇಳಿದರು. ಸೈಯದ್ ನೇತೃತ್ವದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ನಗರದ ಚೇಳೂರು ವೃತ್ತದಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಯೋಗಿನಾರಾಯಣವೃತ್ತ, ಗಜಾನನ ವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಕಾಂಗ್ರೆಸ್ ಪರ ಮತಯಾಚಿಸಿದರು. ಇದೇ ವೇಳೆ, ವಾಣಿಕೃಷ್ಣಾರೆಡ್ಡಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಕಾಂಗ್ರೆಸ್ ಪರ ಮತಯಾಚಿಸಿದರು. ಈ ಸಂದರ್ಭದಲ್ಲಿ ಬುಲೆಟ್ ರಮೇಶ್, ಖಾದರ್, ಖಲೀಲ್, ಬುಡನ್, ರತ್ನಮ್ಮ, ಒಡೆಯರ್ ರಾಜ್, ಸೀನಾ,ನಾರಾಯಣಸ್ವಾಮಿ, ಎಂ.ನಟರಾಜ್, ರವೀಂದ್ರ ಸೇರಿದಂತೆ ಯುವ ಕಾಂಗ್ರೆಸ್‌ನ ಪದಾಧಿಕಾರಿಗಳು, ಮಹಿಳೆಯರು ಭಾಗವಹಿಸಿದ್ದರು.

ಅಬ್ಬರ ಪ್ರಚಾರ
ಟೇಕಲ್: ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರದ ಕೊನೆ ದಿನವಾದ ಮಂಗಳವಾರ ಎಲ್ಲಾ ಪಕ್ಷದವರು ಬಿರುಸಿನ ಪ್ರಚಾರ ನಡೆಸಿದರು. ಕುಮಾರಸ್ವಾಮಿಯವರನ್ನು ಬಲಪಡಿಸಲು ಜೆಡಿಎಸ್ ಬೆಂಬಲಿಸಬೇಕೆಂದು ಟೇಕಲ್ ಜಿಪಂ ಸದಸ್ಯೆ ರತ್ನಮ್ಮ ನಂಜೇಗೌಡರು ಮನೆಮನೆ ಮತಯಾಚನೆ ನಡೆಸಿದರು.
ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಪರ ತಾಲೂಕು ಮುಖಂಡ ಜಿ.ಇ. ರಾಮೇಗೌಡರು ಟೇಕಲ್ ಮತ್ತು ಮಾಸ್ತಿ ಗ್ರಾಮಗಳಲ್ಲಿ ಮತಯಾಚನೆ ಮಾಡಿದರು. ನಾರಾಯಣಸ್ವಾಮಿ, ನೂಟವೆ ವೆಂಕಟೇಶ್ ಗೌಡ, ಗೋಪಾಲಕೃಷ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement