ಮತ ಸಮರಕ್ಕೆ ಒಂದೇ ದಿನ ಬಾಕಿ
ಕೋಲಾರ: ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರ ಮಂಗಳವಾರ ಸಂಜೆ ಆರು ಗಂಟೆಗೆ ಅಂತ್ಯಗೊಂಡಿತು. ಮತ ಸಮರಕ್ಕೆ ಇನ್ನು 48 ಗಂಟೆ ಮಾತ್ರ ಬಾಕಿ. ಮತ ಬೇಟೆಗೆ ಮುಂದಾಗುವ ಅಭ್ಯರ್ಥಿಗಳ ಮೇಲೆ ಚುನಾವಣಾಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ.
ಮತದಾರರ ಬೇಟೆಗಾಗಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಪ್ರಚಾರಕ್ಕೆ ಕಡೆ ದಿನವಾಗಿದ್ದ ಇಂದು ನಗರ,ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಬಿರುಸಾಗಿ ಪ್ರಚಾರ ನಡೆಸಿದರು.
ಕಾಂಗ್ರೆಸ್ ಅಭ್ಯರ್ಥಿ ಮುನಿಯಪ್ಪನವರು ಶಿಡ್ಲಘಟ್ಟ, ಚಿಂತಾಮಣಿಯಲ್ಲಿ ಅನೇಕ ಕಡೆ ಸುತ್ತಿ ಮತಗಟ್ಟೆಗಳಿಗೆ ನೇಮಿಸಲಾಗಿರುವ ಏಜೆಂಟರು ಮತ್ತು ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು.
ಜೆಡಿಎಸ್ ಅಭ್ಯರ್ಥಿ ಕೆ.ಕೇಶವ ಹಾಗೂ ಮುಖಂಡರು ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರನ್ನು ಬುಟ್ಟಿಗೆ ಹಾಕಿಕೊಂಡು ಮತ ಪ್ರಮಾಣ ಹೆಚ್ಚಳಕ್ಕೆ ಪ್ರಯತ್ನಿಸುತ್ತಿದ್ದರೆ, ಅಭ್ಯರ್ಥಿಗಿಂತ ಅವರ ಪರವಾಗಿ ಕೆಲಸ ಮಾಡುತ್ತಿರುವ ಮಾಜಿ ಶಾಸಕರು ತಮ್ಮ ಅಸ್ತಿತ್ವಕ್ಕಾಗಿ ಹರ ಸಾಹಸ ಮಾಡುತ್ತಿರುವುದು ಕಂಡು ಬಂದಿತು. ಬಿಜೆಪಿಯ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಅವರು ರೋಡ್ ಶೋಗಳಲ್ಲಿ ಕಂಡು ಬಂದ ಜನಸ್ತೋಮ, ನಟ ಪವನ್ ಕಲ್ಯಾಣ್ ಪ್ರಚಾರ ಹಾಗೂ ಯುವಕರು ಮೋದಿ ಬಗ್ಗೆ ತೋರುತ್ತಿರುವ ಒಲವು ಕಂಡು ಬೆರಗಾಗಿದ್ದಾರೆ. ಕೋಲಾರ, ಬಂಗಾರಪೇಟೆ, ಕೆಜಿಎಫ್ ಇನ್ನಿತರ ಕಡೆ ಸಂಚರಿಸಿ ಮತಯಾಚಿಸಿದ್ದಾರೆ. ಅಮ್ ಆದ್ಮಿ ಪಕ್ಷದ ಕೋಟಗಾನಹಳ್ಳಿ ರಾಮಯ್ಯ ಸಹ ಅಂತಿಮ ಸುತ್ತಿನ ಕಸರತ್ತು ನಡೆಸಿದರು.
ನಾಳೆ ಮತದಾನ
ಏ.17ರಂದು ಗುರುವಾರ ಬೆಳಿಗ್ಗೆ 7ರಿಂದ ಸಂಜೆ 6ಗಂಟೆಯವರೆಗೆ ಚುನಾವಣೆ ನಡೆಯಲಿದೆ. 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1492987 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಒಟ್ಟು 2041 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 7508 ಸಿಬ್ಬಂದಿಯನ್ನು ನೇಮಿಸಲಾಗಿದೆ. ಕಣದಲ್ಲಿ 22 ಅಭ್ಯರ್ಥಿಗಳಿದ್ದಾರೆ.
ಮತದಾನ ದಿನ ಏ.17 ಹಾಗೂ ಮತ ಎಣಿಕೆ ದಿನವಾದ ಮೇ 16ರಂದು ಒಣ ದಿನಗಳಾಗಿ ಜಿಲ್ಲಾ ಚುನಾವಣಾಧಿಕಾರಿ ಡಿ.ಕೆ.ರವಿ ಘೋಷಿಸಿದ್ದಾರೆ. ಈ ದಿನದಿಂದಲೇ ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲು ಸೂಚಿಸಲಾಗಿದೆ. ಮುಕ್ತ ನ್ಯಾಯ ಸಮ್ಮತ ಮತದಾನಕ್ಕಾಗಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಅಕ್ರಮಗಳನ್ನು ತಡೆಗಟ್ಟಲು ಸಾರ್ವಜನಿಕರು ಸಹಕಾರ ನೀಡಬೇಕೆಂದು ಚುನಾವಣಾಧಿಕಾರಿಗಳು ಮನವಿ ಮಾಡಿದ್ದಾರೆ.