ಮತದಾನ ಜಾಗೃತಿಗೆ ಪಂಜಿನ ಮೆರವಣಿಗೆ
ಕೋಲಾರ: ಮುಕ್ತ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿದ್ದು, ಪ್ರತಿಯೊಬ್ಬರೂ ಮತ ಹಾಕುವ ಮೂಲಕ ತಮ್ಮ ಕರ್ತವ್ಯ ನಿರ್ವಹಿಸುವಂತೆ ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಆರ್. ವಿನೋತ್ ಪ್ರಿಯಾ ಕರೆ ನೀಡಿದರು.
ತಾಲೂಕಿನ ವೇಮಗಲ್ನಲ್ಲಿ ಮಂಗಳವಾರ ಸಂಜೆ ಜಿಪಂ, ತಾಲೂಕು ಸ್ವೀಪ್ ಸಮಿತಿ ಏರ್ಪಡಿಸಿದ್ದ ಮತದಾನ ಜಾಗೃತಿ ಪಂಜಿನ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ನಾಡನ್ನು ಕಟ್ಟುವ ನಾಯಕನಿಗೆ ಮತಹಾಕಬೇಕು. ಪ್ರತಿಯೊಬ್ಬರೂ ಮುಕ್ತಮತದಾನದಲ್ಲಿ ಭಾಗವಹಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಏರ್ಪಡಿಸಿದ್ದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಪಂ ಉಪಕಾರ್ಯದರ್ಶಿ ಜಿ.ಎಫ್. ಬದನೂರು ಮಾತನಾಡಿ, ತಾವು ಮತದಾನ ಮಾಡುವ ಜೊತೆಗೆ ತಮ್ಮ ನೆರೆಹೊರೆಯವರಿಗೂ ಮತದಾನದ ಜಾಗೃತಿ ಮೂಡಿಸುವುಂತೆ ತಿಳಿಸಿದರು.
ಜಿಲ್ಲಾ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸಿ.ಎಂ. ರಂಗಾರೆಡ್ಡಿ, ಮತದಾನದ ಪಾವಿತ್ರ್ಯತೆಯ ಬಗ್ಗೆ ತಿಳಿಸಿದರು. ಗ್ರಾಮಾದ್ಯಂತ ಸಂಚಾರ ಮಾಡಿದ ಪಂಜಿನ ಮೆರೆವಣಿಗೆಯಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಿ. ಜಾನಕಿರಾಮ್, ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಕೆ.ಸಿ. ಶಾಲಿನಿ ಸೇರಿ ಅನೇಕರಿದ್ದರು.