ಮತದಾನಕ್ಕೆ ಸೂಕ್ತ ಬಂದೋಬಸ್ತ್: ಅಜಯ್ ಹಿಲೋರಿ
ಕೆಜಿಎಫ್: ಗುರುವಾರ ನಡೆಯಲಿರುವ ಮತದಾನ ನಿಮಿತ್ತ ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಒಟ್ಟು 447 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಹಿಲೋರಿ ತಿಳಿಸಿದರು. ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ 232 ಮತೆಗಟ್ಟೆಗಳಿದ್ದು, ಇದರಲ್ಲಿ 38 ಅತಿ ಸೂಕ್ಷ್ಮ, 60 ಸೂಕ್ಷ್ಮ ಹಾಗೂ 134 ಸಾಮಾನ್ಯ ಮತಗಟ್ಟೆಗಳಿವೆ. ಅದೇ ರೀತಿ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 254 ಮತಗಟ್ಟೆಗಳಿದ್ದು, 38 ಅತಿ ಸೂಕ್ಷ್ಮ, 64 ಸೂಕ್ಷ್ಮ, 139 ಸಾಮಾನ್ಯ ಮತಗಟ್ಟೆಗಳಿವೆ. ಇವುಗಳಲ್ಲಿ 52 ಮತಗಟ್ಟೆಗಳು ಕ್ಲಸ್ಟರ್ ಮತಗಟ್ಟೆಗಳಿದ್ದು, ಕೆಜಿಎಫ್‌ನಲ್ಲಿ 31 ಹಾಗೂ ಬಂಗಾರಪೇಟೆಯಲ್ಲಿ 21 ಕ್ಲಸ್ಟರ್ ಮತಗಟ್ಟೆಗಳಾಗಿವೆ ಎಂದು ತಿಳಿಸಿದರು. ಬಂದೋಬಸ್ತ್‌ಗಾಗಿ ಅಧಿಕಾರಿಗಳು, ಕೇಂದ್ರ ಅರೆ ಸೇನಾ ಪಡೆಯವರು ಸೇರಿದಂತೆ ಒಟ್ಟು 982 ಮಂದಿಯನ್ನು ನಿಯೋಜಿಸಲಾಗಿದೆ. ಚುನಾವಣೆಯಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ. ಗಡಿಭಾಗದಲ್ಲಿ ಸೂಕ್ತ ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಿ ಪ್ರವೇಶಿಸುವ ಹಾಗೂ ಹೊರಹೋಗುವ ಎಲ್ಲಾ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಒಟ್ಟು 15 ಪೊಲೀಸ್ ಚೆಕ್‌ಪೋಸ್ಟ್‌ಗಳು ಸ್ಥಾಪಿಸಲಾಗಿದೆ. ಇದುವರೆಗೂ 2 ಪ್ರಕರಣಗಳು ದಾಖಲಾಗಿದ್ದು, ಕೆಜಿಎಫ್ ಹಾಗೂ ಬಂಗಾರಪೇಟೆ ಕ್ಷೇತ್ರಗಳಲ್ಲಿ ಸ್ವತಃ ಬಂದೂಕು ಹೊಂದಿರುವವರು 449 ಮಂದಿ ಠಾಣೆಗಳಲ್ಲಿ ಡಿಪಾಜಿಟ್ ಮಾಡಿರುತ್ತಾರೆ ಎಂದು ಎಸ್ಪಿ ತಿಳಿಸಿದರು. ಈ ಘಟಕದಲ್ಲಿ ಒಟ್ಟು 48 ಮಂದಿ ರೌಡಿಗಳು, ಗೂಂಡಾ ಪಟ್ಟಿಯಲ್ಲಿರುವವರನ್ನು ಮುಂಜಾಗೃತ ಕ್ರಮದಡಿಯಲ್ಲಿ ಬಂಧಿಸಲಾಗಿದೆ. ಇನ್ನುಳಿದ ರೌಡಿಗಳು, ಗೂಂಡಾಗಳ ಕುರಿತು ಅವರುಗಳ ಚಲನ ವಲನಗಳ ಬಗ್ಗೆ ಪೊಲೀಸ್ ಇಲಾಖೆ ನಿಗಾ ಇಟ್ಟಿದೆ ಎಂದರು.