ಮುನಿಯಪ್ಪ ಗೆಲ್ಲಿಸಿದರೆ ಮತ್ತೆ ಸ್ವೀಪರ್, ವಾಲ್ವ್ಮ್ಯಾನ್
ಕೋಲಾರ: ಕೋಲಾರ ವಿಧಾನಸಭಾ ಕ್ಷೇತ್ರದ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಮುನಿಯಪ್ಪ ಅವರನ್ನು ಗೆಲ್ಲಿಸಿದರೆ, ನಾನು ಮತ್ತೆ ಸ್ವೀಪರ್, ವಾಲ್ವ್ಮ್ಯಾನ್ನಾಗಿ ಕೆಲಸ ಮಾಡುತ್ತೇನೆ ಎಂದು ಶಾಸಕ ವರ್ತೂರ್ ಪ್ರಕಾಶ್ ಹೇಳಿದರು.
ಕೋಲಾರ ಕ್ಷೇತ್ರದ ಗ್ರಾಮೀಣ ಪ್ರದೇಶದ ಹಲವೆಡೆ ಮಂಗಳವಾರ ಬಿರುಸಿನ ಪ್ರಚಾರ ಕೈಗೊಂಡಿದ್ದ ಅವರು, ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಕುಡಿವ ನೀರಿಗೆ ಅಭಾವವಿಲ್ಲದಂತೆ ನೋಡಿಕೊಳ್ಳುತ್ತೇನೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ವಿಶೇಷ ಅನುದಾನ ತಂದು ಸಮಸ್ಯೆಗಳ ನಿವಾರಣೆಗೆ ಒತ್ತು ನೀಡುವುದಾಗಿ ತಿಳಿಸಿದರು.
ಕಳೆದ ಬಾರಿ ನಾನು ಸಾಕಷ್ಟು ಶ್ರಮಪಟ್ಟು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ತೆಗೆದುಕೊಂಡಿದ್ದೆ. ಆದರೆ, ನಗರಸಭೆಯಲ್ಲಿ ತಮ್ಮ ಬಣಕ್ಕೆ ತೀವ್ರ ಹಿನ್ನಡೆಯಾಗಿದ್ದು, ಇದರಿಂದ ನಾನು ಸಾಕಷ್ಟು ನೊಂದು ಮಾನಸಿಕ ವೇದನೆ ಸಹ ಅನುಭವಿಸಿದೆ. ಆದರೀಗ ಇರುವ ನಗರಸಭಾ ಸದಸ್ಯರು ಕುಡಿಯುವ ನೀರಿನ ಬವಣೆ ನಿಭಾಯಿಸಲು ಯಾವ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂಬುದನ್ನು ಕಳೆದೊಂದು ವರ್ಷದಿಂದ ಜನ ನೋಡಿದ್ದಾರೆ ಎಂದು ಹೇಳಿದರು.
ಈಕಂಬಳ್ಳಿ ಗ್ರಾಮದಲ್ಲಿ ಪ್ರಸನ್ನ, ಗಂಗರಾಜು ಮತ್ತಿತರ ಮುಖಮಡರು ಜೆಡಿಎಸ್ ತೊರೆದು ವರ್ತೂರ್ ಬಣಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಬೆಗ್ಲಿ ಪ್ರಕಾಶ್, ತಾಪಂ ಸದಸ್ಯೆ ನಂದಿನಿ ರಾಜಗೋಪಾಲ್, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಶ್ರೀರಾಮರೆಡ್ಡಿ, ಗ್ರಾಪಂ ಅಧ್ಯಕ್ಷ ಚಿಕ್ಕಮುನಿಯಪ್ಪ, ಉಪಾಧ್ಯಕ್ಷ ರಘು, ಮಂಜುನಾಥ್, ಗೋಪಾಲ್ ಸೇರಿದಂತೆ ಹಲವು ಮುಖಂಡರು ಇದ್ದರು.