ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನಾನಾ ಅಭ್ಯರ್ಥಿಗಳ ಮೌನ ಮತ ಬೇಟೆ
ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ, ಏ.16
ಬಹಿರಂಗ ಪ್ರಚಾರ ಅಂತ್ಯಗೊಂಡ ಬಳಿಕ ವಿವಿಧ ಪಕ್ಷಗಳು ಬುಧವಾರ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಶತಾಯ ಗತಾಯ ಚಿಕ್ಕಬಳ್ಳಾಪು ಕ್ಷೇತ್ರವನ್ನು ಗೆಲ್ಲಲೇಬೇಕೆಂಬ ಪಣ ತೊಟ್ಟಿದ್ದು, ಅದಕ್ಕೇ ಬೇಕಿರುವ ಎಲ್ಲ ತಂತ್ರಗಳನ್ನು ಹೆಣೆಯುತ್ತಿವೆ.
ಮೈಕಾಸುರ ಆರ್ಭಟವಿಲ್ಲ. ಬಹಿರಂಗ ಪ್ರಚಾರವಿಲ್ಲ. ಕೇವಲ ಮನೆ ಮನೆಗೂ ಹೋಗಿ ಮತವನ್ನು ಯಾಚಿಸಬಹುದಷ್ಟೇ. ಹಾಗಾಗಿ ಕ್ಷೇತ್ರದಲ್ಲಿ 'ಮೌನ ಮತ ಕ್ರಾಂತಿ' ನಡೆಯುತ್ತಿದೆ.
ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ಕ್ಷೇತ್ರ ಅಬ್ಬರ ಪ್ರಚಾರವನ್ನು ಕಂಡಿತು. ಅಲ್ಲದೆ ಇಬ್ಬರು ಮಾಜಿ ಸಿಎಂ ಸ್ಪರ್ಧಿಸಿದ್ದರಿಂದ ಈ ಕ್ಷೇತ್ರ ಇಡೀ ದೇಶದ ಗಮನ ಸೆಳೆದಿದೆ. ಇನ್ನು ಬಿಜೆಪಿ ಪರ ಪ್ರಧಾನಿ ಅಭ್ಯರ್ಥಿ ಸ್ವತಃ ನರೇಂದ್ರ ಮೋದಿ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಆಗಮಿಸಿ, ಈ ಬಾರಿ ಕಾಂಗ್ರೆಸ್ನ ಭದ್ರಕೋಟೆಯಲ್ಲಿ 'ಕಮಲ' ಅರಳುವಂತೆ ಮಾಡಬೇಕು ಎಂದು ಕರೆ ನೀಡಿದ್ದಾರೆ. ಅವಿಭಜಿತ ಕೋಲಾರ ಜಿಲ್ಲೆಗೆ ಚಿತ್ರನಟ, ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಆಗಮಿಸಿ, ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಪರ ಬ್ಯಾಟಿಂಗ್ ಮಾಡಿದ್ದಾರೆ. ಇದರ ನಡುವೆ ಮಾಜಿ ಡಿಸಿಎಂ ಆರ್.ಅಶೋಕ್, ಸಂಸದ ಪಿ.ಸಿ.ಮೋಹನ್ ಸೇರಿದಂತೆ ಮುಖಂಡರು ಕ್ಷೇತ್ರದಲ್ಲಿ ಕೆಲವು ದಿನಗಳ ಕಾಲ ಠಿಕಾಣಿ ಹೂಡಿ, ಬಿಜೆಪಿಯನ್ನು ಗೆಲ್ಲಿಸುವಲ್ಲಿ ಬೇಕಾದ ಎಲ್ಲ ಪ್ರಯತ್ನ ಮಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ತಮ್ಮ ಸ್ವಂತ ಕ್ಷೇತ್ರದಲ್ಲಿ ಏನೂ ಕೆಲಸ ಮಾಡದ ಕಾರಣ ಅಲ್ಲಿನ ಜನರು ಅವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದರು. ಇದರಿಂದ ಮೊಯ್ಲಿ ಚಿಕ್ಕಬಳ್ಳಾಪುರದ ಕಡೆಗೆ ಬಂದು ಇಲ್ಲಿನ ಜನರಿಗೆ ಭರವಸೆ ನೀಡಿ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದರು. ಆದರೆ, ಅಭಿವೃದ್ಧಿಗೆ ಕಿಂಚಿತ್ತು ಶ್ರಮಿಸಲಿಲ್ಲ. ಶಾಶ್ವತ ನೀರಾವರಿ ಯೋಜನೆಯನ್ನು 5 ವರ್ಷದೊಳಗಡೆ ಕಲ್ಪಿಸುವುದು, ಪ್ರತ್ಯೇಕ ವಿಶ್ವವಿದ್ಯಾಲಯ, ಐಐಟಿ ಸ್ಥಾಪನೆ, ಪ್ರತಿ ಹೋಬಳಿವಾರು ಜನಸ್ಪಂದನ, ಕೇಂದ್ರ ಸರ್ಕಾರದಿಂದ ಕೋಟ್ಯಂತರ ರುಪಾಯಿ ತಂದು ಕ್ಷೇತ್ರವನ್ನು ಅಭಿವೃದ್ಧಿಪಡಿಸುವುದು, ಇಲ್ಲಿ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಲು ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ಮಾಡುವುದಾಗಿ ತಿಳಿಸಿದರು. ಈ ಭರವಸೆಗಳನ್ನೆಲ್ಲಾ ಈಡೇರಿಸಿದ್ದಾರೆಯೇ? ಇಲ್ಲಾ ನೀವೇ ಯೋಚಿಸಿ. ಬಿಜೆಪಿಗೆ ಮತ ಹಾಕಿ, ಈ ಬಾರಿ ದೇಶದಲ್ಲಿ ಬಿಜೆಪಿ ಸುಭದ್ರ ಸರ್ಕಾರ ರಚಿಸಲಿದೆ. ಈ ಹಿನ್ನೆಲೆಯಲ್ಲಿ ಬಿ.ಎನ್.ಬಚ್ಚೇಗೌಡರವನ್ನು ಗೆಲ್ಲಿಸಬೇಕೆಂದು ಮನವಿ ಮಾಡಲಾಯಿತು.
ಕಾಂಗ್ರೆಸ್, ಜೆಡಿಎಸ್ ಪ್ರಚಾರ: ಇನ್ನೂ ಬಿಜೆಪಿಯ ಜೊತೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಸಹ ಮನೆ ಮನೆಗೆ ತೆರಳಿ ಮತ ಕೇಳುವುದರಲ್ಲಿ ಹಿಂದೆ ಬಿದ್ದಿಲ್ಲ. ಕಾಂಗ್ರೆಸ್ಗೆ ಸ್ಥಳೀಯ ಶಾಸಕರು ಬಲ ಸೇರಿದ್ದು ಕೇಂದ್ರ ಸರ್ಕಾರ ಮತ್ತು ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಪರ ಗುಣಗಾನ ಮಾಡಲಾಯಿತು. ಮತ್ತೊಂದೆಡೆ ಜೆಡಿಎಸ್ ಮುಖಂಡರು, ನಗರಸಭಾ ಸದಸ್ಯರು ಕುಮಾರಸ್ವಾಮಿ ಅವರು ಚಿಕ್ಕಬಳ್ಳಾಪುರ ಜಿಲ್ಲಾ ರಚನೆ ಮಾಡಿದ್ದು, 20 ತಿಂಗಳ ಆಡಳಿತವಾಧಿಯಲ್ಲಿ ಉತ್ತಮ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಇದನ್ನು ಗಮನಿಸಿ ಮತ ನೀಡಿ ಎಂದು ಪ್ರಚಾರ ಮಾಡಿದರು. ಒಟ್ಟಾರೆ ಪಕ್ಷಗಳು ತೀವ್ರ ಪೈಪೋಟಿಯಲ್ಲಿ ಮನೆ ಮನೆಗಳಿಗೂ ಲಗ್ಗೆ ಹಾಕಿ, ಮತದಾರರ ಮನಮೊಲಿಸುವ ಕೆಲಸದಲ್ಲಿ ನಿರತವಾಗಿದ್ದು ಮತದಾನ ಮುಗಿಯುವವರೆಗೂ ಕಸರತ್ತು ನಡೆಯಲಿದೆ.