ಮಹಾ ಮತ ಯಜ್ಞ ಇಂದು
1,589 ಪ್ರದೇಶಗಳಲ್ಲಿ ಒಟ್ಟು 2,119 ಮತಗಟ್ಟೆಗಳು, ಘರ್ಷಣೆಗೆ ಆಸ್ಪದ ನೀಡಬಹುದಾದ ಮತಗಟ್ಟೆಗಳು 43
ಚಿಕ್ಕಬಳ್ಳಾಪುರ: ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು ಏ.17 ರಂದು ನಡೆಯಲಿರುವ ಮತದಾನ ಯಶಸ್ವಿಯಾಗಿ ನಡೆಸಲು ಈಗಾಗಲೆ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಬಾಗೇಪಲ್ಲಿ, ಗೌರಿಬಿದನೂರು, ಚಿಕ್ಕಬಳ್ಳಾಪುರ, ನೆಲಮಂಗಲ, ದೊಡ್ಡಬಳ್ಳಾಪುರ, ಹೊಸಕೋಟೆ, ಯಲಹಂಕ, ದೇವನಹಳ್ಳಿ ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಕ್ಷೇತ್ರದಲ್ಲಿ ಒಟ್ಟು 2,119 ಮತಗಟ್ಟೆಗಳಿದ್ದು 16,58,038 ಮತದಾರರಿದ್ದಾರೆ. ಇದರಲ್ಲಿ 84,43,530 ಪುರುಷರು ಮತ್ತು 81,43,388 ಮಹಿಳೆಯರು, ಇತರರು 120 ಮತದಾರರಿದ್ದಾರೆ.
ಏ.17 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಈಗಾಗಲೇ ಚುನಾವಣಾ ಕಾರ್ಯ ನಿರ್ವಹಿಸಲು ಸಿಬ್ಬಂದಿ ಸಂಬಂಧಪಟ್ಟ ಮತಗಟ್ಟೆ ಕೇಂದ್ರಗಳನ್ನು ತಲುಪಿದ್ದಾರೆ.
ಬುಧವಾರ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಸಿಬ್ಬಂದಿಗೆ ಮತಯಂತ್ರ ಸೇರಿದಂತೆ ಸೇವೆಗೆ ಅಗತ್ಯವಿರುವ ವಸ್ತುಗಳ ಪರಿಶೀಲನೆ ನಡೆಸಿ ಕಳುಹಿಸುವ ಕೆಲಸವನ್ನು ಚುನಾವಣಾಧಿಕಾರಿಗಳು ಮಾಡಿದರು. ಸಿಬ್ಬಂದಿಯನ್ನು ಆಯಾ ಸ್ಥಳಗಳಿಗೆ ಕರೆದುಕೊಂಡು ಹೋಗಲು ಜಿಲ್ಲೆಯಲ್ಲಿ 153 ಬಸ್ಸುಗಳನ್ನು ಮತ್ತು 10 ಮಿನಿ ಬಸ್ಗಳನ್ನು ಸೇವೆಗೆ ತೆಗೆದುಕೊಳ್ಳಲಾಗಿದೆ. ಒಟ್ಟಾರೆ ಕ್ಷೇತ್ರದಲ್ಲಿ 382 ಬಸ್ಸುಗಳು ಮತ್ತು 62 ಜೀಪುಗಳನ್ನು ಬಳಸಿಕೊಳ್ಳಲಾಗುತ್ತಿದೆ.
ಕ್ಷೇತ್ರದಲ್ಲಿ 1,589 ಪ್ರದೇಶಗಳಲ್ಲಿ ಒಟ್ಟು 2,119 ಮತಗಟ್ಟೆಗಳನ್ನು ತೆರೆಯಲಾಗಿದ್ದು ಅತಿ ಸೂಕ್ಷ್ಮ 505, ಸೂಕ್ಷ್ಮ 539, ಘರ್ಷಣೆಗೆ ಆಸ್ಪದ ನೀಡಬಹುದಾದ ಮತಗಟ್ಟೆಗಳು 43, ಕಠಿಣಕಾರಿ ಮತಗಟ್ಟೆಗಳು 67 ಎಂದು ಗುರುತಿಸಲಾಗಿದೆ. 409 ಮತಗಟ್ಟೆಗಳಿಗೆ ವಿಡಿಯೋ ಕ್ಯಾಮೆರಾ, 69 ಮತಗಟ್ಟೆಗಳಿಗೆ ವೈಬ್ ಕ್ಯಾಮೆರಾಗಳನ್ನು ಅಳವಡಿಸಿದ್ದು ಮತಗಟ್ಟೆಗಳ ಸೂಕ್ಷ್ಮ ಪರಿವೀಕ್ಷಕರು 680 ಮಂದಿಯನ್ನು ನೇಮಿಸಲಾಗಿದೆ. ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ತಲಾ ಮುಖ್ಯ ಪೇದೆ ಮತ್ತು ಪೇದೆ, ಸೂಕ್ಷ್ಮ ಮತಗಟ್ಟೆಗಳಿಗೆ ತಲಾ ಪೇದೆ, ಸಾಮಾನ್ಯ ಮತಗಟ್ಟೆಗಳಲ್ಲಿ 1 ಪೇದೆ ಅಥವಾ ಗೃಹ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ 5 ವಿಧಾನಸಭಾ ಕ್ಷೇತ್ರಗಳಿಗೆ 2,438 ೆಪೊಲೀಸ್ ಸಿಬ್ಬಂದಿ ಮತ್ತು 929 ಗೃಹ ರಕ್ಷಕ ದಳ ಸಿಬ್ಬಂದಿ ನಿಯೋಜನೆಗೆಗೊಂಡಿದ್ದು ಈಗಾಗಲೇ ವಿದ್ಯುನ್ಮಾನ ಮತ ಯಂತ್ರಗಳ ಪರಿಶೀಲನೆ ನಡೆಸಿ ದೋಷಗಳಿರುವುದನ್ನು ಹಿಂದಕ್ಕೆ ಪಡೆದು ಬೇರೆ ವಿದ್ಯುನ್ಮಾನ ಮತಯಂತ್ರಗಳನ್ನು ನೀಡಲಾಗಿದೆ.
ಕ್ಷೇತ್ರದ ಮತದಾರರು
ಕ್ಷೇತ್ರ ಪುರುಷರು ಮಹಿಳೆಯರು ಇತರರು ಒಟ್ಟು
ಗೌರಿಬಿದನೂರು 97998 96538 4 194540
ಬಾಗೇಪಲ್ಲಿ 91644 90669 8 182321
ಚಿಕ್ಕಬಳ್ಳಾಪುರ 93287 90940 17 184244
ಯಲಹಂಕ 167825 156598 36 324459
ಹೊಸಕೋಟೆ 99402 95744 13 195159
ದೇವನಹಳ್ಳಿ 96964 94324 12 191300
ದೊಡ್ಡಬಳ್ಳಾಪುರ 98620 94602 12 193234
ನೆಲಮಂಗಲ 97790 94973 18 192781
ಒಟ್ಟು 843530 814388 120 1658038
ಮತಗಟ್ಟೆಗಳು
ಕ್ಷೇತ್ರ ಒಟ್ಟು ಸಾಮಾನ್ಯ ಸೂಕ್ಷ ಅತಿ ಸೂಕ್ಷ್ಮ
ಗೌರಿಬಿದನೂರು 253 147 67 39
ಬಾಗೇಪಲ್ಲಿ 251 127 93 31
ಚಿಕ್ಕಬಳ್ಳಾಪುರ 237 166 39 32
ಯಲಹಂಕ 346 127 106 113
ಹೊಸಕೋಟೆ 265 81 27 157
ದೇವನಹಳ್ಳಿ 274 169 67 38
ದೊಡ್ಡಬಳ್ಳಾಪುರ 250 116 84 50
ನೆಲಮಂಗಲ 243 142 56 45
ಒಟ್ಟು 2119 1075 539 505
409 ಮತಗಟ್ಟೆಗಳಿಗೆ ವಿಡಿಯೋ ಕ್ಯಾಮೆರಾ, 69 ಮತಗಟ್ಟೆಗಳಿಗೆ ವೈಬ್ ಕ್ಯಾಮೆರಾಗಳನ್ನು ಅಳವಡಿಸಿದ್ದು ಮತಗಟ್ಟೆಗಳ ಸೂಕ್ಷ್ಮ ಪರಿವೀಕ್ಷಕರು 680 ಮಂದಿಯನ್ನು ನೇಮಿಸಲಾಗಿದೆ. ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ತಲಾ ಮುಖ್ಯ ಪೇದೆ ಮತ್ತು ಪೇದೆ, ಸೂಕ್ಷ್ಮ ಮತಗಟ್ಟೆಗಳಿಗೆ ತಲಾ ಪೇದೆ, ಸಾಮಾನ್ಯ ಮತಗಟ್ಟೆಗಳಲ್ಲಿ 1 ಪೇದೆ ಅಥವಾ ಗೃಹ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
---
ಶಾಂತಿಯುತ ಮತದಾನಕ್ಕಾಗಿ ಜಿಲ್ಲಾಡಳಿತ ಸಜ್ಜು: ವಿಶಾಲ್
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಏ.17 ರಂದು ನಡೆಯಲಿರುವ ಚುನಾವಣೆಗೆ ಜಿಲ್ಲಾಡಳಿತ ಸಜ್ಜಾಗಿದ್ದು ಶಾಂತಿಯುತ ಮತದಾನಕ್ಕಾಗಿ ಶ್ರಮಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್. ವಿಶಾಲ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಲೋಕಸಭಾ ಚುನಾವಣೆಗೆ ಏ.17ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ರವರೆಗೆ ಮತದಾನ ಪ್ರಕ್ರಿಯೆ ನಡೆಯಲಿದ್ದು ಈಗಾಗಲೇ ಏ.17 ರ ಸಂಜೆ 6 ಗಂಟೆಯ ವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಹಣ, ಮದ್ಯ, ಸೀರೆ ಇತರ ವಸ್ತುಗಳನ್ನು ಹಂಚಿ ಜನರಿಗೆ ಆಮಿಷ ಒಡ್ಡುವವರ ಬಗ್ಗೆ ನಿಗಾ ವಹಿಸಲಾಗಿದೆ. ಒಂದು ಮತಗಟ್ಟೆಗೆ ಗರಿಷ್ಠ 10 ಮಂದಿಯನ್ನು ನಿಯೋಜಿಸಲಾಗಿದೆ. ಮಹಿಳೆಯರನ್ನು ಅವರು ಕೆಲಸ ನಿರ್ವಹಿಸುತ್ತಿರುವ ಸ್ಥಳಗಳಲ್ಲೇ ನಿಯೋಜಿಸಲು ಒತ್ತು ನೀಡಲಾಗಿದೆ ಎಂದರು.
ಸ್ಟ್ಯಾಟಿಕ್ ಸರ್ವಲೆನ್ಸ್ ತಂಡ, ಫ್ಲೈಯಿಂಗ್ ಸ್ಕ್ವಾಡ್ ಗಳು ಹಾಗೂ ಸೆಕ್ಟರಲ್ ಅಧಿಕಾರಿಗಳು ಎಲ್ಲಾ ತಾಲ್ಲೂಕುಗಳಲ್ಲೂ ಪ್ರವಾಸವನ್ನು ನಡೆಸಿ ಚುನಾವಣಾ ಅಕ್ರಮಗಳನ್ನು ತಡೆಯಲಿದ್ದಾರೆ. ಅಲ್ಲದೆ ಚುನಾವಣಾ ವೀಕ್ಷಕರು ಹೆಚ್ಚು ವೆಚ್ಚ ಮಾಡುವ ಅಭ್ಯರ್ಥಿಗಳ ಬಗ್ಗೆ ನಿಗಾ ವಹಿಸಲಿದ್ದಾರೆ ಎಂದ ಅವರು, ಒಂದು ಅಭ್ಯರ್ಥಿಯಿಂದ ಮತಗಟ್ಟೆಗೆ ಪ್ರವೇಶಿಸಲು 3 ವಾಹನಗಳಿಗೆ ಅನುಮತಿ ನೀಡಲಾಗಿದೆ ಎಂದರು. ಮತದಾನ ಮಾಡಿದಾಗ ಮತದಾರರ ಎಡಗೈ ಹೆಬ್ಬರಳಿಗೆ ಶಾಹಿಯನ್ನು ಹಾಕಲಾಗುವುದು. ಎಪಿಕ್ ಕಾರ್ಡ್ ಇಲ್ಲದವರು ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಅಥವಾ ಇನ್ನಾವುದೇ ಅಧಿಕೃತ ದಾಖಲೆಯನ್ನು ತೋರಿಸಿ ಮತಹಾಕಬಹುದು. ಈಗಾಗಲೇ ಓಟರ್ ಸ್ಲಿಪ್ಗಳನ್ನು ವಿತರಿಸಲಾಗಿದೆ ಎಂದರು.
ಮತದಾನ ಪ್ರಕ್ರಿಯೆ ಮುಗಿದ ನಂತರ ಮತಯಂತ್ರಗಳನ್ನು ನಗರದ ಹೊರ ವಲಯದಲ್ಲಿರುವ ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜಿಗೆ ತಂದು ಅಲ್ಲಿನ ಸ್ಟ್ರಾಂಗ್ ರೂಂನಲ್ಲಿ ಸೀಲ್ ಮಾಡಿ ಇಡಲಾಗುವುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್ ಮಾತನಾಡಿ, ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಈ ವರೆಗೆ 120 ಎಫ್ಐಆರ್ಗಗಳನ್ನು ದಾಖಲಿಸಲಾಗಿದ್ದು, ಒಟ್ಟು 2,39,69,180 ಲೀಟರ್ ಮದ್ಯ, ರು. 3 ಕೋಟಿ ಮೌಲ್ಯದ 12,983 ಸೀರೆಗಳು, ಇತರೆ 25 ಲಕ್ಷಗಳನ್ನು ವಶಪಡಿಸಿಕಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸತ್ಯಭಾಮಾ ಇದ್ದರು.