ಅಪಘಾತದಲ್ಲಿ ಸಾವು: ಉದ್ರಿಕ್ತರಿಂದ ಜೀಪ್‌ಗೆ ಬೆಂಕಿ
ಚಿಕ್ಕಬಳ್ಳಾಪುರ: ಅಪಘಾತದಲ್ಲಿ ಬೈಕ್ ಸವಾರನೊಬ್ಬ ಮೃತಪಟ್ಟ ಘಟನೆಯಿಂದ ಆಕ್ರೋಶಗೊಂಡ ಜನರು ಜೀಪ್‌ಗೆ ಬೆಂಕಿ ಹಚ್ಚಿದ ಘಟನೆ ಪೆರೆಸಂದ್ರ ಬಳಿ ಗುರುವಾರ ರಾತ್ರಿ ನಡೆದಿದೆ. ಮೃತನನ್ನು ಭೂಶೆಟ್ಟಿವಾರಹಳ್ಳಿ ಶ್ರೀನಿವಾಸ್(52) ಎಂದು ಗುರುತಿಸಲಾಗಿದೆ. ಇವರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಬೈಕ್ ಮೂಲಕ ಹೋಗುತ್ತಿದ್ದರು. ಆಗ ಎದುರಿನಿಂದ ಬಂದ್ ಬಸ್ ಡಿಕ್ಕಿ ಹೊಡೆದಿದೆ. ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಮಾಹಿತಿ ಗೊತ್ತಾಗುತ್ತಿದ್ದಂತೆ ಗ್ರಾಮಸ್ಥರು ಜಮಾಯಿಸಿ, ಗಲಾಟೆ ಮಾಡಿದರು. ಅಪಘಾತಕ್ಕೆ ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸಿದ್ದೇ ಕಾರಣ ಎಂದು ಜಗಳಕ್ಕೆ ನಿಂತರು. ಇಷ್ಟಕ್ಕೆ ಸುಮ್ಮನಾಗದ ಅವರು, ರಸ್ತೆ ನಿರ್ಮಾಣ ಗುತ್ತಿಗೆ ಪಡೆದಿರುವ ಕೆಎನ್‌ಆರ್ ಕನ್ಸ್‌ಟ್ರಕ್ಷನ್ ಕಂಪನಿಗೆ ಸೇರಿದ ಜೀಪ್‌ಗೆ ಬೆಂಕಿ ಹಚ್ಚಿದ್ದರಿಂದ ತ್ವೇಷಮಯ ವಾತಾವರಣ ನಿರ್ಮಾಣವಾಗಿತ್ತು. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ, ಗ್ರಾಮಸ್ಥರನ್ನು ಸಮಾಧಾನಪಡೆಸಿದರು.
ಕ್ಷುಲ್ಲಕ ಕಾರಣಕ್ಕೆ ಕೊಲೆ: ಇಬ್ಬರ ಬಂಧನ
ಗೋಣಿಕೊಪ್ಪಲು: ವಿರಾಜಪೇಟೆ ಪೊಲೀಸ್ ಠಾಣೆಯ ಪೆರುಂಬಾಡಿ ಗ್ರಾಮದ ಇಂದ್ರ ನಗರ ಎಂಬಲ್ಲಿ ಸ್ನೇಹಿತರ ನಡುವೆ ಗುರುವಾರ ಕ್ಷುಲ್ಲಕ ಕಾರಣಕ್ಕೆ ಮನಸ್ತಾಪ ಏರ್ಪಟ್ಟು ನೌಶೀರ್ (23) ಎಂಬ ಯುವಕನನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸಂಜೆ 6.30ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಆರೋಪಿಗಳಾದ ವಿನಯ್ ಹಾಗೂ ಪುಷ್ಪೇಶ್ ಎಂಬವರನ್ನು ವಿರಾಜಪೇಟೆ ನಗರ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿದ್ದಾರೆ.