ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೋಲಾರದಲ್ಲಿ ಸ್ವೀಪ್ ಯತ್ನ ಸ್ವಪ್ನ

Srinivasa Murthy VN
Updated On : 18 Apr 2014, 1:16 am

2009ರಲ್ಲಿ ಶೇ.80 ಮತದಾನವಾಗಿದ್ದರೆ ಈಬಾರಿ ಶೇ.69 ಚಲಾವಣೆ!
ಕನ್ನಡಪ್ರಭ ವಾರ್ತೆ, ಕೋಲಾರ, ಏ.17
ಮತದಾನ ಹೆಚ್ಚಳಕ್ಕೆ ಸ್ವೀಪ್ ಸಮಿತಿಯ ಪ್ರಯತ್ನಕ್ಕೆ ಈ ಬಾರಿಯೂ ಫಲ ಸಿಕ್ಕಲಿಲ್ಲ.
ಗುರುವಾರನ ನಡೆದ ಮತದಾನಲ್ಲಿ ಅಂದಾಜು ಶೇ.69 ಜನ ತಮ್ಮ ಹಕ್ಕು ಚಲಾಯಿಸಿದ್ದಾರೆ. ಕಳೆದ ಬಾರಿ ಈ ಪ್ರಮಾಣ ಶೇ.80ರಷ್ಟಿತ್ತು!
ಮತದಾರರು ತಮ್ಮ ಹಕ್ಕು ಚಲಾಯಿಸಲು ಉದಾಸೀನ ತೋರಿರುವುದಕ್ಕೆ ಅಭ್ಯರ್ಥಿಗಳು ಹಾಗೂ ಮುಖಂಡರು ಗ್ರಾಮಗಳಿಗೆ ಹೋಗಿ ಜನತೆಯ ಸಮಸ್ಯೆ ಅಲಿಸಿ ಸಾಂತ್ವನ ಹೇಳದಿರುವುದು ಹಾಗೂ ಹಣಕಾಸು ಹಂಚಿಕೆಯಲ್ಲಿನ ವ್ಯತ್ಯಾಸಗಳು ಕಾರಣ ಎನ್ನಲಾಗುತ್ತಿದೆ!
ಮುಳಬಾಗಲು ತಾಲೂಕಿನ ರಾಮಸಂದ್ರ, ಮುದುಗಿರಿ, ಕೋಲಾರ ತಾಲೂಕಿನ ಜೋಡಿಕೃಷ್ಣಾಪುರ ಇನ್ನಿತರ ಕಡೆ ಮೂಲ ಸೌಕರ್ಯಗಳ ನೆಪದಲ್ಲಿ ಜನ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದರು. ಆದರೆ, ಅಧಿಕಾರಿಗಳು ಮತ್ತು ವಿವಿಧ ಪಕ್ಷಗಳ ಓಲೈಕೆಯಿಂದಾಗಿ ಕೊನೆಗೂ ಅವರು ಮತ ಚಲಾಯಿಸಿದರು. ಕೋಲಾರ ಕ್ಷೇತ್ರದ ನವ ಮತದಾರರು ಸುಮಾರು 18 ಸಾವಿರಕ್ಕೂ ಹೆಚ್ಚಿದ್ದು ನಿರೀಕ್ಷೆ ಪ್ರಮಾಣದಲ್ಲಿ ಮತದಾನದಲ್ಲಿ ಪಾಲ್ಗೊಳ್ಳದಿರುವುದು ಪ್ರಜಾಪ್ರಭುತ್ವದ ಬಗ್ಗೆ ಯುವಕರಲ್ಲಿ ಇನ್ನೂ ಅರಿವು ಮೂಡದಿರುವುದು ಸಾಬೀತು ಆದಂತಾಗಿದೆ. ಪ್ರಜ್ಞಾವಂತ, ಬುದ್ಧಿವಂತ ಮತದಾರರು ಇರುವುದು ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಎಂದೇ ಭಾವಿಸಲಾಗಿದೆಯಾರೂ ಇಲ್ಲೂ ಸಹ ಮತದಾರರು ಮತಗಟ್ಟೆಗೆ ಬರಲು ನಿರಾಸಕ್ತಿ ತೋರಿದ್ದರಿಂದ ಕ್ಷೇತ್ರದಲ್ಲಿ ಮತದಾನ ಪ್ರಮಾಣ ಕುಸಿಯಲು ಕಾರಣವಾಗಿದೆ. ಸ್ವೀಪ್ ಸಮಿತಿಯಿಂದ ಯುವಕರನ್ನು ಅದರಲ್ಲೂ 18 ವರ್ಷ ತುಂಬಿ ಮತದಾನಕ್ಕೆ ಅರ್ಹತೆ ಪಡೆದಿರುವ ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವರೆಂದು ನಂಬಿದ್ದರು. ಆದರೆ, ಎಣಿಕೆ ಸುಳ್ಳಾಗಿದೆ.
ಹಣ ಕೊಟ್ಟಿದ್ದರೆ?!: ಅನೇಕ ಹಳ್ಳಿಗಳಲ್ಲಿ ಮಾತ್ರವಲ್ಲದೆ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ವಿವಿಧ ಪಕ್ಷದ ಕಾರ್ಯಕರ್ತರು, ಮುಖಂಡರು, ಅಭ್ಯರ್ಥಿಗಳು ತಮ್ಮನ್ನು ಸರಿಯಾಗಿ 'ಗಮನಿಸಿಕೊಳ್ಳಲಿಲ್ಲ' ಎಂಬ ಭಾವನೆ ಇತ್ತು. ಹಳ್ಳಿಗಳಿಗೆ ನಿಗದಿಪಡಿಸಿದ್ದ ಹಣವನ್ನು ಕೊಡಲಿಲ್ಲ. ಕೈಗೆ ಸಿಗಲಿಲ್ಲವೆಂದು ಮುನಿಸಿಕೊಂಡು ಕೈಚೆಲ್ಲಿ ಕುಳಿತಿದ್ದರಿಂದ ಮತದಾರರು ಸಹ ಚಾತಕಪಕ್ಷಿಯಂತೆ ಕಾದು ಕುಳಿತಿದ್ದರಿಂದ ಮತಗಟ್ಟೆಗಳಲ್ಲಿ ನೀರಸ ವಾತಾವಣ ಕಂಡು ಬಂದಿತು.

ನನಗೆ ಜಯ ಖಚಿತ: ಕೆ.ಎಚ್. ಮುನಿಯಪ್ಪ
6 ಬಾರಿ ಜನತೆಯ ಆಶೀರ್ವಾದದಿಂದ ಗೆದ್ದಿರುವ ನನಗೆ ಈ ಬಾರಿಯೂ ಜಯ ಖಚಿತ ಎಂದು ಕಾಂಗ್ರೆಸ್ ಅಭ್ಯರ್ಥಿ ಕೆ.ಹೆಚ್. ಮುನಿಯಪ್ಪ ವಿಶ್ವಾಸ ವ್ಯಕ್ತಪಡಿಸಿದರು.
   ನಗರದ ವಾರ್ಡ್ 15ಕ್ಕೆ ಸೇರಿದ ಹಾರೋಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ 230ನೇ ಮತಗಟ್ಟೆಯಲ್ಲಿ ಪತ್ನಿ ನಾಗರತ್ನಮ್ಮರೊಂದಿಗೆ ಮತದಾನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 10 ವರ್ಷಗಳ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯ ಹಾಗೂ ಸಂಸದರ ನಿಧಿಯ ಬಳಕೆಯನ್ನು ಆಧಾರವಾಗಿಟ್ಟುಕೊಂಡು ಮತಯಾಚನೆ ಮಾಡಿದ್ದು ಜನತೆ ಇದಕ್ಕೆ ಉತ್ತಮವಾದ ಅಂಕ ನೀಡುವರೆಂಬ ನಂಬಿಕೆ ಇದೆ ಎಂದರು.

ಬಿಜೆಪಿ, ಜೆಡಿಎಸ್ಗೆ ಏಜೆಂಟರ ಕೊರತೆ
ಕೋಲಾರ ನಗರ ಸೇರಿದಂತೆ ಅನೇಕ ಕಡೆ ಬಿಜೆಪಿಯ ಪರವಾಗಿ ಕೆಲಸ ಮಾಡಲು ಏಜೆಂಟರು ಇರಲಿಲ್ಲ. ಇನ್ನು ಕೆಲವು ಕಡೆ ಜೆಡಿಎಸ್ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಮಾಲೂರು ತಾಲೂಕನ ಅಬ್ಬೇನಹಳ್ಳಿಯಲ್ಲಿ ಮತದಾರರ ಎಡಗೈ ಹೆಬ್ಬರಳಿಗೆ ಗುರುತು ಹಾಕುವ ಬದಲು ಬಲಗೈ ಬೆರಳಿಗೆ ಗುರುತು ಹಾಕಿದ್ದರಿಂದ ಗೊಂದಲಕ್ಕೆ ಕಛಾರಣವಾಯಿತು. ನಂತರ ತಪ್ಪು ಅರಿತ ಅಧಿಕಾರಿಗಳು ಎಚ್ಚೆತ್ತುಗೊಂಡು ವಿವಾದ ಉಲ್ಬಣಗೊಳ್ಳದಂತೆ ಎಚ್ಚರ ವಹಿಸಿದರು. ಕೋಲಾರದ ಜೋಡಿಕೃಷ್ಣಾಪುರದಲ್ಲಿ ಸುಮಾರು ಒಂದು ಗಂಟೆಯ ಕಾಲ ಮತಯಂತ್ರ ತಾಂತ್ರಿಕ ದೋಷದಿಂದ ಕೆಲಸ ಮಾಡದೆ ಗೊಂದಲ ಉಂಟಾಗಿತ್ತು. ಅಧಿಕಾರಿಗಳು ತಕ್ಷಣ ದುರಸ್ತಿ ಕೈಗೊಂಡು ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.

ಮತಗಟ್ಟೆ ಪೂಜೆ; ಬಿಜೆಪಿ ಅಭ್ಯರ್ಥಿಗೆ ಅಡ್ಡಿ
ಕೆಜಿಎಫ್: ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಅವರು ತಮ್ಮ ಸಗ್ರಾಮವಾದ ಕ್ಯಾಸಂಬಳ್ಳಿಯ ಬೂತ್ ಸಂಖ್ಯೆ 197ರ ಸರ್ಕಾರಿ ಶಾಲೆಯಲ್ಲಿ ತಮ್ಮ ಪತ್ನಿ ಸರಸ್ವತಿ ಹಾಗೂ ಪುತ್ರ ಶಶಿಕಾಂತ್ ಅವರೊಂದಿಗೆ ಆಗಮಿಸಿ ಮತವನ್ನು ಹಾಕಿದರು.
ಮತ ಹಾಕುವ ಮುನ್ನ ಪೂಜೆ ಮಾಡಲು ಮುಂದಾದಾಗ ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಯೊಬ್ಬರು ಪೂಜೆ ಮಾಡಬಾರದು ಎಂದು ಅಡ್ಡಿಪಡಿಸಿದರು. ವಿರೋಧದ ಮಧ್ಯೆಯೂ ಎಂ.ನಾರಾಯಣಸ್ವಾಮಿ ಹಾಗೂ ಅವರ ಪತ್ನಿ ಮತಗಟ್ಟೆಯ ಮುಖ್ಯ ಬಾಗಿಲಿಗೆ ಪೂಜೆ ಮಾಡಿ, ಮತ ಚಲಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement