ಬಂಗಾರಪೇಟೆ: ಕೆಟ್ಟ ಮತಯಂತ್ರ
ಬಂಗಾರಪೇಟೆ: ಪಟ್ಟಣದ ಮತಗಟ್ಟೆಯೊಂದರಲ್ಲಿ ಮತಯಂತ್ರ ಕೈಕೊಟ್ಟರೆ, ತಾಲೂಕಿನ ಮೂಗನಹಳ್ಳಿ ಗ್ರಾಮದಲ್ಲಿ ಎರಡು ಬಣಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆದಿದ್ದು ಬಿಟ್ಟರೆ ಮತದಾನ ಸಂಪೂರ್ಣವಾಗಿ ಶಾಂತಿಯುತವಾಗಿತ್ತು. ಪಟ್ಟಣದ ಶಾಂತಿನಗರ ವಾರ್ಡಿನ 127ಮತಗಟ್ಟೆಯಲ್ಲಿ ಬೆಳಗ್ಗೆ 7ಗಂಟೆಗೆ ಪ್ರಾರಂಭವಾಗಬೇಕಿದ್ದ ಮತದಾನ ಮತಯಂತ್ರ ಕೈಕೊಟ್ಟಿದ್ದರಿಂದಾಗಿ ಅರ್ಧ ಗಂಟೆ ತಡವಾಗಿ ಆರಂಭವಾಯಿತು. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಮತಯಂತ್ರ ಬದಲಾಯಿಸದ ಬಳಿಕ ಹಕ್ಕು ಚಲಾವಣೆ ಪ್ರಕ್ರಿಯೆ ಆರಂಭವಾಯಿತು. ಅರ್ಧ ಗಂಟೆ ಹೆಚ್ಚು ವೇಳೆ ಕೊಡಬೇಕು ಎಂದು ಪುರಸಭೆ ಸದಸ್ಯ ಬಿ.ಸಿ.ಶ್ರೀನಿವಾಸಮೂರ್ತಿ ಪಟ್ಟು ಹಿಡಿದರು. ಇದಕ್ಕೆ ಅಧಿಕಾರಿಗಳು ಸಮ್ಮತಿಸಿದರು. ಬೆಳಗ್ಗೆ ಮಂದಗತಿಯಲ್ಲಿ ಆರಂಭವಾದ ಮತದಾನ ಮಧ್ಯಾಹ್ನ ಸ್ವಲ್ಪ ಚುರುಕಾಯಿತು. ಬಿಸಿಲಿನ ತಾಪಮಾನಕ್ಕೆ ಬೆದರಿದ ಜನರು ಪಟ್ಟಣದ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಮನೆಯಿಂದ ಮತ ಕೇಂದ್ರಕ್ಕೆ ಬರಲು ಜನರು ಮನಸು ಮಾಡಲಿಲ್ಲ. ರಾಜಕೀಯ ಪಕ್ಷಗಳ ಮುಖಂಡರು ಮಾತ್ರ ಮತದಾರರನ್ನು ಮನೆ ಮನೆಗೆ ಹೋಗಿ ಕರೆ ತರುವ ಕೆಲಸ ನಿರಂತರ ಸಾಗಿತ್ತು. ಸಂಜೆ ಬಿಸಿಲು ಕಡಿಮೆಯಾಗುತ್ತಿದ್ದಂತೆ ಮತಕೇಂದ್ರಗಳ ಕಡೆ ಜನ ಮುಖ ಮಾಡಿದರು. ಶಾಸಕ ಎಸ್.ಎನ್.ನಾರಾಯಣಸ್ವಾಮಿ ವಿವೇಕಾನಂದನಗರದ ಸರಸ್ವತಿ ವಿದ್ಯಾಸಂಸ್ಥೆಯಲ್ಲಿ ಮತದಾನ ಮಾಡಿದರೆ ಮಾಜಿ ಶಾಸಕರಾದ ಬಿ.ಪಿ.ವೆಂಕಟಮುನಿಯಪ್ಪ ಬೆಂಗನೂರಿನಲ್ಲಿ ಸಿ.ವೆಂಕಟೇಶಪ್ಪ ಬೂವನಹಳ್ಳಿ ಗ್ರಾಮದಲ್ಲಿ ಹಾಗೂ ಇ.ನಾರಾಯಣಗೌಡ ಚಿಕ್ಕಅಂಕಂಡಹಳ್ಳಿ ಗ್ರಾಮದಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು.
ಎರಡು ಗುಂಪಿನ ಮಧ್ಯೆ ಪರಸ್ಪರ ಹಲ್ಲೆ
ಕೆಜಿಎಫ್: 2 ಗುಂಪುಗಳ ಪರಸ್ಪರ ಮಾರಾಕಾಸ್ತ್ರಗಳಿಂದ ಸಂಘರ್ಷ ನಡೆಸಿದ ಘಟನೆ ಉರಿಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ. ಈ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುರುವಾರ ಮತದಾನದ ವೇಳೆ, ಕೋರಮಂಡಲ್ ರೇಲ್ವೆ ನಿಲ್ದಾಣದ ವ್ಯಾಪ್ತಿಯಲ್ಲಿ ಬಿಜೆಪಿ ಕಾರ್ಯಕರ್ತ ಪಾಂಡಿಯನ್ ತಮ್ಮ ಕಾರ್ತಿಕೆಯನ್ನನ್ನು ರಾಜಕುಮಾರ್ ಎಂಬಾತ ಹಳೇ ದ್ವೇಷದ ಹಿನ್ನೆಲೆಯಲ್ಲಿ ಮೂಗನೆ ಮೇಲೆ ಹೊಡೆದು ಗಾಯಗೊಳಿಸಿದ್ದಾನೆ. ತಮ್ಮನ ಮೇಲೆ ನಡೆದ ಹಲ್ಲೆಯ ಮಾಹಿತಿ ಗೊತ್ತಾಗುತ್ತಿದ್ದಂತೆ ಪಾಂಡಿಯನ್ ಹಾಗೂ ಇತರರು ಆಸ್ಪತ್ರೆಯ ಕೊಠಡಿಯೊಳಗೇ ರಾಜಕುಮಾರ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಈ ವಿಷಯ ಗೊತ್ತಾಗುತ್ತಿದ್ದಂತೆ ವೆಸ್ಲಿನ್ ಬ್ಲಾಕ್ ಪ್ರದೇಶದಲ್ಲಿ ರಾಜಕುಮಾರ್ ಬೆಂಬಲಿಗರಾದ ಬಬ್ಲು ಮತ್ತು ಇತರರು ಪಾಂಡಿಯನ್ ಮೇಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಪಾಂಡಿಯನ್ನನ್ನು ಚಿಕಿತ್ಸೆಗೆ ಕೋಲಾರ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಎರಡು ಗುಂಪುಗಳ ವಿರುದ್ಧ ರಾಬರ್ಟ್ಸನ್ ಮತ್ತು ಉರಿಗಾಂ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ. ಮಾಜಿ ಶಾಸಕ ವೈ.ಸಂಪಂಗಿ, ಬಿಜೆಪಿ ನಗರ ಘಟಕ ಅಧ್ಯಕ್ಷ ಸುರೇಶ್ನಾರಾಯಣ್, ಮುಖಂಡರಾದ ನೈನಾ ರವಿ, ಬಿಎಸ್ಪಿ ಅಭ್ಯರ್ಥಿ ವಿ.ಮುನಿಸ್ವಾಮಿ, ಪಿಎಸ್ಐ ರಂಗಶಾಮಯ್ಯ, ಮಾರ್ಕಾಂಡಯ್ಯ ಭೇಟಿ ನೀಡಿ ಪರಿಶೀಲಿಸಿದರು.