ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಹಿಷ್ಕಾರ ಅಪಸ್ವರ ಮಧ್ಯೆ ಮಸ್ತ್ ಮತ!

Srinivasa Murthy VN
Updated On : 18 Apr 2014, 1:15 am

ಚಿಕ್ಕಬಳ್ಳಾಪುರ: ಅಲ್ಲಲ್ಲಿ ಮತದಾನದ ಬಹಿಷ್ಕಾರದ ಅಪಸ್ವರದ ನಡುವೆಯೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಯು ಬಹುತೇಕ ಶಾಂತಿಯುತವಾಗಿ ನಡೆದಿದೆ. ಚುನಾವಣಾ ಸಿಬ್ಬಂದಿ ಮತಗಟ್ಟೆಗಳಲ್ಲಿ ಸಕಲ ಸಿದ್ಧತೆ ಕೈಗೊಂಡು 7 ಗಂಟೆಗೆ ಮತದಾನ ಪ್ರಕ್ರಿಯೆಗೆ ಚಾಲನೆ ನೀಡಿದರು. ಹಲವರು ಮತದಾನದ ಸಮಯ ಪ್ರಾರಂಭವಾಗುವುದಕ್ಕಿಂತ ಮುಂಚೆಯೇ ಮತಗಟ್ಟೆಗಳಿಗೆ ಧಾವಿಸಿದ್ದರು. ಬೆಳಿಗ್ಗೆ 9 ಗಂಟೆಯವರೆಗೂ ಬಿರುಸಿನ ಮತದಾನ ನಡೆಯುತ್ತಿದರೂ ಸುಡು ಬಿಸಿಲಿನ ಹಿನ್ನೆಲೆಯಲ್ಲಿ ನಡು ಮಧ್ಯಾಹ್ನ ಸ್ವಲ್ಪ ಉತ್ಸಾಹ ಕಡಿಮೆಯಾಯಿತು. ಆದರೆ, ಮಧ್ಯಾಹ್ನ 4 ಗಂಟೆಯ ನಂತರ ಬಿರುಸುಗೊಂಡಿತು.
ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದ ಒಂದು ಗ್ರಾಮ, ಶಿಡ್ಲಘಟ್ಟ ಕ್ಷೇತ್ರದ ವೆಂಕಟಕೃಷ್ಣಮ್ಮನಹಳ್ಳಿ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರದ ಮತದಾನ ಬಹಿಷ್ಕಾರ ಹಾಕಿ, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಆದರೆ, ಅಧಿಕಾರಿಗಳ ಮನಮೊಲಿಕೆಯಿಂದ ಮತದಾನಕ್ಕೆ ಇನ್ನೇನು ಎರಡು ಗಂಟೆ ಬಾಕಿಯಿರುವಂತೆ ಗ್ರಾಮದ ಅರ್ಧ ಭಾಗದಷ್ಟು ಜನರು ತಮ್ಮ ಪಟ್ಟನ್ನು ಸಡಿಲಿಸಿ ಮತಗಟ್ಟೆ ಕೇಂದ್ರಗಳಿಗೆ ಧಾವಿಸಿ ತಮ್ಮ ಹಕ್ಕು ಚಲಾಯಿಸಿದರು. ಇನ್ನೂ ಶಿಡ್ಲಘಟ್ಟ ಕ್ಷೇತ್ರದ ಸೊಣಗಾನಹಳ್ಳಿಯಲ್ಲಿ ಮನೆಯ ಮುಂದೆ ಕುಡಿದು ಕುಳಿತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಥಳಿಸಲು ಮುಂದಾಗಿದ್ದರು ಎಂದು ಆರೋಪಿಸಿ, ಗ್ರಾಮಸ್ಥರು ಕಲ್ಲು ತೂರಾಟ ನಡೆಸಿದ ಘಟನೆ ನಡೆಯಿತು.
ಮೊಯ್ಲಿ ಮತ
ಕಾಂಗ್ರೆಸ್ ಅಭ್ಯರ್ಥಿ ಎಂ.ವೀರಪ್ಪ ಮೊಯ್ಲಿ ಚಿಕ್ಕಬಳ್ಳಾಪುರ ನಗರಸಭೆ ಕಚೇರಿಯಲ್ಲಿರುವ ಮತಗಟ್ಟೆಯಲ್ಲಿ ತಮ್ಮ ಪತ್ನಿ ಮಾಲತಿ ಮೊಯ್ಲಿ ಸಮೇತ ಆಗಮಿಸಿ ಮತವನ್ನು ಚಲಾಯಿಸಿದರು. ನಂತರ ತಮ್ಮ ಪುತ್ರ ಹರ್ಷ ಮೊಯ್ಲಿ ಮತ್ತು ಮುಖಂಡರು ಜೊತೆಗೂಡಿ ನಗರದ ಸೇಂಟ್ ಜೊಸೆಫ್ ಕಾನ್ವೆಂಟ್ ಶಾಲೆ, ಕೋಟೆ ಸರ್ಕಾರಿ ಶಾಲೆ ಸೇರಿದಂತೆ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿದರು. ಪಂಚಗಿರಿ ಬೋಧನ ಪ್ರೌಢಶಾಲೆ ಸಮೀಪದ ಶಿಶು ವಿಹಾರ ಕೇಂದ್ರಕ್ಕೆ ಆಗಮಿಸಿದ ವೀರಪ್ಪ ಮೊಯ್ಲಿ ಅವರಿಗೆ ಮತಗಟ್ಟೆ ಸಿಬ್ಬಂದಿ ಎದ್ದು ನಿಂತು, ಸ್ವಲ್ಪ ಸಮಯ ಅವರೊಂದಿಗೆ ಮಾತನಾಡಿದರು. ಇದು ಗೊಂದಲಕ್ಕೆ ಕಾರಣವಾಯಿತು. ಮೊಯ್ಲಿ ಆಗಮನದ ಹಿನ್ನೆಲೆಯಲ್ಲಿ ಒಂದಿಬ್ಬರು ಮತದಾರರು ಕೇಂದ್ರದ ಹೊರಗಡೆ ನಿಂತುಕೊಂಡು ಕಾದಿದ್ದು ಕಂಡು ಬಂತು.
ಕುಮಾರಸ್ವಾಮಿ ಭೇಟಿ
ಮತ್ತೊಂದೆಡೆ ಜೆಡಿಎಸ್ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಸಂಜೆ 4 ಗಂಟೆಗೆ ನಗರಕ್ಕೆ ಆಗಮಿಸಿ, ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿದರು. ಸರ್ಕಾರಿ ಹೊಸ ಹಿರಿಯ ಪ್ರಾಥಮಿಕ ಶಾಲೆ, ಪಂಚಗಿರಿ ಬೋಧನಾ ಪ್ರೌಢಶಾಲೆಗೆ ಬಂದು ತಮ್ಮ ಪಕ್ಷದ ಕಾರ್ಯಕರ್ತರಿಂದ ಮತದಾನಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಪಡೆದರುಕೊಂಡರು. ಶಾಸಕ ಕೆ.ಸುಧಾಕರ್ ತಾಲೂಕಿನ ಪೆರೇಸಂದ್ರದಲ್ಲಿ ಮತ್ತು ಜಿಲ್ಲಾಧಿಕಾರಿ ಆರ್.ವಿಶಾಲ್ ನಗರದ ವಾಪಸಂದ್ರದ ಮತಗಟ್ಟೆಯಲ್ಲಿ ಮತವನ್ನು ಹಾಕಿದರು.  

ಮಂದಗತಿಯಿಂದ ಮಂದಹಾಸ!
ಶಿಡ್ಲಘಟ್ಟ: ಮಂದಗತಿಯಿಂದ ಆರಂಭವಾದ ಮಧ್ಯಾಹ್ನ 3 ಗಂಟೆಗೆ ನಂತರ ಚುರುಕು ಪಡೆದುಕೊಂಡಿತು. ಮೂರು ಗಂಟೆ ನಂತರ ಸುಮಾರಾಗಿ ಬಿದ್ದ ಮಳೆಯಿಂದ ಬಿಸಲಿನ ಝಳ ಕಡಿಮೆಯಾದ್ದರಿಂದ ಮತದಾನ ಚುರುಕುಗೊಳ್ಳಲು ಕಾರಣವಾಯಿತು.
 ವಿವಿಧ ಪಕ್ಷಗಳ ಕಾರ್ಯಕರ್ತರು ವಾಹನಗಳಲ್ಲಿ ಜನರನ್ನು ತುಂಬಿಸಿಕೊಂಡು ಮತಗಟ್ಟೆಯ ಬಳಿ ಬಿಡುತ್ತಿರುವ ದೃಶ್ಯ ನಗರದ ಹೊರ ವಲಯದ ಎಲ್ಲ ಮತಗಟ್ಟೆಗಳ ಬಳಿ ಸಾಮಾನ್ಯವಾಗಿತ್ತು. ಸದಾ ಜನ ಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಟಿ.ಬಿ. ರಸ್ತೆ ಕೋಟೆ ವೃತ್ತಗಳು ಬಿಕೋ ಎನ್ನುತ್ತಿದ್ದವು. ಬಹುತೇಕ ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿದ್ದವು. ಸರ್ಕಾರಿ ಕಚೇರಿ, ಬ್ಯಾಂಕುಗಳು, ಶಾಲೆ ಕಾಲೇಜುಗಳಲ್ಲಿ ಜನ ವಿರಳವಿತ್ತು.  ತಾಲೂಕಿನ ಎಲಗಲ ಹಳ್ಳಿ, ಕುಂದಲಗುಕರ್ ಕೇಂದ್ರಗಳಲ್ಲಿನ ವಿದ್ಯುನ್ಮಾನ ಮತಯಂತ್ರಗಳು ಕೈಕೊಟ್ಟ ಕಾರಣ ಬದಲಿ ಯಂತ್ರಗಳು ಬರುವವರೆಗೂ ಮತದಾನ ತಡವಾಗಿ ಆರಂಭವಾಯಿತು. ವೆಂಕಟಕೃಷ್ಣಮ್ಮನಹಳ್ಳಿ ಮತ್ತು ತಲದುಮ್ಮನ ಹಳ್ಳಿ ಗ್ರಾಮಗಳಲ್ಲಿ ಯುವಕರು ಮತ ಬಹಿಷ್ಕಾರಕ್ಕೆ ಕರೆ ನೀಡಿದ್ದರು. ಆದರೂ ಅಧಿಕಾರಿಗಳು ಮತ್ತು ಕೆಲವು ಸ್ಥಳೀಯರ ಸಂಧಾನದಿಂದ ಮತಕ್ಕೆ ಒಪ್ಪಿಸಿದರು. ಪಟ್ಟಣದ 24-25 ವಾರ್ಡ್ಗಳಲ್ಲಿ 100ಕ್ಕೂ ಅದಿಕ ಮತದಾರರ ಹೆಸರು ಪಟ್ಟಿಯಲ್ಲಿ ಇಲ್ಲ ಎಂದು ಆರೋಪಿಸಿ, ಕೆಲವು ಕಾಲ ಘೋಷಣೆ ಕೂಗಲಾಯಿತು. ಅನ್ಸಾರಿ ಮೊಹಲ್ಲಾಗಳ ಒಂದೇ ಕುಟುಂಬದ ಎಲ್ಲರ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ತೆಗೆದುಹಾಕಲಾಗಿದ್ದು, ಅಧಿಕಾರಿಗಳಿಗೆ ದೂರನ್ನು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಅಪಘಾತ: ಚುನಾವಣೆ ಸಿಬ್ಬಂದಿ ಸಾವು
ಮುಳಬಾಗಲು: ರಾಷ್ಟ್ರೀಯ ಹೆದ್ದಾರಿ ಎನ್.ವಡ್ಡಹಳ್ಳಿಯಲ್ಲಿ ಬುಧವಾರ ಸಂಜೆ ಸಂಭವಿಸಿದ ಅಪಘಾತದಲ್ಲಿ ಚುನಾವಣೆ ಸಿಬ್ಬಂದಿಯೊಬ್ಬರು ಸಾವಿಗೀಡಾಗಿದ್ದಾರೆ. ಮೃತನನ್ನು ಅರ್ಜುನ್(30) ಎಂದು ಗುರುತಿಸಲಾಗಿದೆ. ಇವರು ಕಂಪ್ಯೂಟರ್ ಆಪರೇಟರ್ ಆಗಿದ್ದು, ಚುನಾವಣಾ ಕೆಲಸ ಮುಗಿಸಿಕೊಂಡು ತಮ್ಮ ಸಹವರ್ತಿ ಜತೆ ನಂಗಲಿಯಿಂದ ಮುಳಬಾಗಲು ಪಟ್ಟಣಕ್ಕೆ ಬರುತ್ತಿದ್ದರು. ಆಗ ಸರಕು ಸಾಗಣೆ ವಾಹನವೊಂದು ಇವರಿದ್ದ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಅರ್ಜುನ್ ಅಸುನೀಗಿದರೆ, ಪ್ರವೀಣ್ಕುಮಾರ್ ಗಾಯಗೊಂಡಿದ್ದಾರೆ. ನಂಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಂಚ ಕೊಡಬೇಕಂತೆ!
ನಮಗೆ ಸರ್ಕಾರದಿಂದ ಮನೆಗಳು ಮಂಜೂರು ಆಗಿದೆ. ಆದರೆ, ಮನೆ ಕಟ್ಟಿಕೊಡಲು 5ರಿಂದ 10 ಸಾವಿರ ಲಂಚ ಕೇಳುತ್ತಿದ್ದಾರೆ. ಎಲೆಕ್ಷನ್ ಬಂದಾಗ ಮಾತ್ರ ನಾವು ನಾಯಕರಿಗೆ ಕಾಣುತ್ತೇವೆ. ಗುಡಿಸಲು ಮನೆಗಳಲ್ಲಿ ವಾಸ ಮಾಡುತ್ತಿರುವ ನಮಗೆ ವಾಸಕ್ಕೆ ಯೋಗ್ಯವಾದ ಮನೆ ಕಟ್ಟಿಕೊಟ್ಟರೆ ಮಾತ್ರ ಓಟು ನೀಡುತ್ತೇವೆ ಎಂದು ರಾಮಸಂದ್ರ ಗ್ರಾಮದ ನ್ಯಾತಪ್ಪ ತಿಳಿಸಿದರು. ರಾಮಸಂದ್ರ ಗ್ರಾಮದಲ್ಲಿ ಕಲ್ಲು ಕೆಲಸ ಮಾಡುವವರೇ ಹೆಚ್ಚಾಗಿದ್ದು ಅನೇಕರು ಗುಡಿಸಲುಗಳಲ್ಲಿ ವಾಸ ಮಾಡುತ್ತಿರುವುದು ಕಂಡು ಬಂದಿತು. ಗುಡಿಸಲು ಮುಕ್ತ ರಾಜ್ಯ ಮಾಡುವುದಾಗಿ ಹೇಳಿರುವ ವಸತಿ ಸಚಿವರು ಇನ್ನಾದರೂ ಗಮನ ಹರಿಸುವರೇ?

ಮತದಾನದಿಂದ ದೂರ ಉಳಿದ ತೇಕಲಹಳ್ಳಿ ಜನರು
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ (ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ) ವ್ಯಾಪ್ತಿಯ   ತೇಕಲಹಳ್ಳಿಯಲ್ಲಿ ಗ್ರಾಮಸ್ಥರು ಮತದಾನದಿಂದ ದೂರ ಉಳಿದು ಪ್ರತಿಭಟನೆ ನಡೆಸಿದರು.
ಗ್ರಾಮದ ಅಶ್ವತ್ಥ ಕಟ್ಟೆ ಮರದಡಿ ಬೆಳಿಗ್ಗೆಯಿಂದ ಸಂಜೆವರೆಗೂ ಪ್ರತಿಭಟನೆ ಕುಳಿತು ತಮ್ಮ ಗ್ರಾಮದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರದಿಂದ 10 ಕಿ.ಮೀ ದೂರವಿರುವ ನಮ್ಮ ಗ್ರಾಮವನ್ನು ನಿರ್ಲಕ್ಷ್ಯದಿಂದ ಕಾಣಲಾಗುತ್ತಿದೆ. ಯಾವುದೇ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತಿಲ್ಲ. ಕೇವಲ ಭರವಸೆಗಳನ್ನು ನೀಡಿಕೊಂಡು ಬರುವ ಜನಪ್ರತಿನಿಧಿಗಳು ಕೇವಲ ಮತಕ್ಕಾಗಿ ಮಾತ್ರ ನಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಮತ ಚಲಾಯಿಸುವುದಿಲ್ಲ. ಈ ಬಗ್ಗೆ ಏಕ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಚುನಾವಣಾಧಿಕಾರಿಗಳ ಮಾತಿಗೂ ಮಣಿಯಲಿಲ್ಲ. ಚುನಾವಣೆಗಳು ಬರುತ್ತವೆ, ಹೋಗುತ್ತವೆ. ಆದರೆ, ನಮ್ಮ ಸಮಸ್ಯೆಗಳು ಬಗೆಹರಿಯುವುದಿಲ್ಲವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಪ್ರತಿಭಟನೆಯಲ್ಲಿ ಗ್ರಾಮದ ಮುಖಂಡರಾದ ಯಲ್ಲಪ್ಪ, ಸುಬ್ಬರಾಯಪ್ಪ, ವಿ. ನಾರಾಯಣಪ್ಪ, ಯಲ್ಲಪ್ಪ, ಜಯರಾಮಪ್ಪ, ಶ್ರೀನಿವಾಸ್, ನಾಗರಾಜು, ಬೀರಪ್ಪ, ಲಕ್ಷ್ಮಣಪ್ಪ, ರಂಗಪ್ಪ, ನಾಗೇಶ್,  ಅನುಸೂಯಮ್ಮ, ಪದ್ಮಾವತಮ್ಮ, ರಾಧಮ್ಮ ಇದ್ದರು.

ಮತದಾರರಿಗೆ ಹಣ?
ಕೋಲಾರ: ಚುನಾವಣಾ ಅಧಿಕಾರಿಗಳ ಎಚ್ಚರವಾಗಿ ಎಲ್ಲಾ ಕಡೆ ಹದ್ದಿನ ಕಣ್ಣಿನಿಟ್ಟಿದ್ದರೂ ಸಹ ಮತದಾರರಿಗೆ ಹಣ ಹಂಚುವುದು ಕದ್ದು ಮುಚ್ಚಿ ನಡೆಯಿತು. ಒಬ್ಬೊಬ್ಬ ಕಾರ್ಯಕರ್ತ ಒಂದೊಂದು ನೋಟನ್ನು ತನ್ನ ಜೇಬಿಗಿಳಿಸಿಕೊಂಡು ಹೋಗಿ ಕೆಲವರ ಕೈಗೆ ಕೊಟ್ಟು ಬಿಟ್ಟು ಬರುತ್ತಿದ್ದ. ಇನ್ನು ಕೆಲವರು ಮತದಾನ ಪ್ರೇರೇಪಿಸುವಂತೆ ಮನೆ ಮನೆಗಳಿಗೆ ಹೋಗಿ ಮನೆ ಯಜಮಾನರಿಗೆ ಹಣವನ್ನು ಕೊಟ್ಟರು.

ಮತಯಂತ್ರಗಳ ಭದ್ರತೆ
ಕೋಲಾರ: ಚುನಾವಣಾಧಿಕಾರಿಗಳ ಕಟ್ಟುನಿಟ್ಟಿನ ಕಾರ್ಯ ನಿರ್ವಹಣೆಯಿಂದ ಮತದಾನ ಬಹುತೇಕ ಶಾಂತಿಯುತವಾಗಿಯೇ ಮುಕ್ತಾಯವಾಯಿತು. ಸಂಜೆ 6 ಗಂಟೆ ಬಳಿಕ ವಿವಿಧೆಡೆಯ ಮತಗಟ್ಟೆಗಳಿಂದ ಅಧಿಕಾರಿಗಳು ಪೊಲೀಸ್ ಸಿಬ್ಬಂದಿ ಬಂದೋಬಸ್ತ್ನಲ್ಲಿ ಮತಯಂತ್ರಗಳನ್ನು ಭದ್ರವಾಗಿ ಸಾಗಿಸಿದರು. ನಂತರ ಮತ ಎಣಿಕೆ ನಡೆಯುವ ನಗರದ ಹೊರ ವಲಯದಲ್ಲಿರುವ ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜಿಗೆ ಮತಯಂತ್ರಗಳನ್ನು ರಕ್ಷಿಸಿಡಲಾಯಿತು.

12 ವರ್ಷ ಬಳಿಕ ಮತ ಚಲಾಯಿಸಿದ ನಿರಾಶ್ರಿತರು!
ಬಂಗಾರಪೇಟೆ: ತಾಲೂಕಿನ ಚಿಕ್ಕಅಂಕಂಡಹಳ್ಳಿ ಗ್ರಾಪಂ ವ್ಯಾಪ್ತಿಯ ಬೀರಂಡಹಳ್ಳಿ ಬಳಿ ಇರುವ ನಿರಾಶ್ರಿತ ಕೇಂದ್ರದಲ್ಲಿನ 70 ಜನರು ಇದೇ ಮೊದಲ ಬಾರಿಗೆ ಮತದಾನ ಮಾಡಿದ್ದು ಈ ಬಾರಿಯ ಚುನಾವಣೆಯ ವಿಶೇಷವಾಗಿದೆ.
ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮತದಾನ ಕೇಂದ್ರದಲ್ಲಿ ತಮ್ಮ ಹಕ್ಕು ಚಲಾಯಿಸಿದರು.
ಈ ನಿರಾಶ್ರಿತ ಕೇಂದ್ರ ಪ್ರಾರಂಭವಾಗಿ 12 ವರ್ಷಗಳಾಗಿದ್ದು ಇಂದಿನವರೆಗೂ ಯಾರ ಸಹ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿರಲಿಲ್ಲ. ಆದರೆ, ಈ ಸಾರಿ ಕೇಂದ್ರದಲ್ಲಿರುವ ನಿರಾಶ್ರಿತರ ಹೆಸರನ್ನು ಮೇಲ್ವಿಚಾರಕಿ ರತ್ನಕುಮಾರಿ ಮುತುವರ್ಜಿ ವಹಿಸಿ ಮತದಾರರ ಪಟ್ಟಿಗೆ ಸೇರಿಸಿದ್ದರು. ಮೇಲ್ವಿಚಾರಕಿ ರತ್ನ ಕುಮಾರಿ ಮಾತನಾಡಿ, 'ನಮ್ಮ ನಿರಾಶ್ರಿತರ ಕೇಂದ್ರದಲ್ಲಿ ಒಟ್ಟು 100 ಮಂದಿ ಇದ್ದಾರೆ. ಭಿಕ್ಷಾಟನೆ ಮಾಡುತ್ತಿದ್ದವರನ್ನು ಇಲ್ಲಿಗೆ ತಂದು ಆಶ್ರಯ ನೀಡಲಾಗಿದೆ. ಇವರಲ್ಲಿ 30 ಮಂದಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಬಲವಾಗಿಲ್ಲ. ಹಾಗಾಗಿ ಅವರ ಹೆಸರನ್ನು ಮತಪಟ್ಟಿಗೆ ಸೇರಿಸಲಿಲ್ಲ ಎಂದರು.
ಇದೇ ಮೊದಲ ಬಾರಿಗೆ ಮತ ಚಲಾಯಿಸಿ ಬಂದ ನಿರಾಶ್ರಿತರು, ವಾಹನದಲ್ಲಿ ಹೋಗಿ ವೋಟ್ ಮಾಡಿ ಬಂದಿದ್ದು ತುಂಬಾ ಖುಷಿ ಕೊಟ್ಟಿದೆ ಎಂದರು. 70 ಮಂದಿಯಲ್ಲಿ ಕನ್ನಡ, ತೆಲುಗು, ತೆಮಿಳು, ಹಿಂದಿ ಹೀಗೆ ಬೇರೆ ಬೇರೆ ಭಾಷೆ ಮಾತನಾಡುವವರು ಇದ್ದಾರೆ. ಅವರಿಗೆ ಅವರದೇ ಭಾಷೆಯಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಿ ಮತದಾನ ಮಾಡಿಸಿರುವುದು ವಿಶೇಷವಾದ ಸಂಗತಿಯಾಗೆ.

ಮನೆ ಕೊಟ್ಟಿಲ್ಲ, ಮತ ನೀಡಲ್ಲ
ಕೋಲಾರ: ನನಗೀಗ 70 ವರ್ಷ. ಸರಿಯಾಗಿ ಕಿವಿ ಕೇಳಲ್ಲ, ಕಣ್ಣೂ ಸರಿಯಾಗಿ ಕಾಣಲ್ಲ. ಒಬ್ಬಂಟಿಗನಾದ ನನಗೆ ಸರ್ಕಾರ ಮನೆ ನೀಡಿಲ್ಲ. ಭಿಕ್ಷೆ ಬೇಡಿ ಬದುಕುತ್ತಿರುವ ನನ್ನ ಮೇಲೆ ಜನಪ್ರತಿನಿಧಿಗಳು ಕರುಣೆ ತೋರದಿರುವುದರಿಂದ ಮತದಾನ ಮಾಡದಿರಲು ನಿರ್ಧರಿಸಿದ್ದೇನೆಂದು ಮುಳಬಾಗಿಲು ತಾಲೂರಿನ ರಾಮಸಂದ್ರ ಗ್ರಾಮದ ವೆಂಕಟರಾಮಪ್ಪ ತಿಳಿಸಿದರು. ಹಂದಿ ಗೂಡಿಗಿಂತ ಅಧ್ವಾನವಾಗಿರುವ ಮುರುಕಲು ಮನೆಯಲ್ಲಿ ವಾಸವಾಗಿರುವ ಈ ವೃದ್ಧನಿಗೆ ಇನ್ನಾದರೂ ನೆಮ್ಮದಿಯಿಂದ ಮಲಗುವುದಕ್ಕೆ ಆಶ್ರಯ ಸಿಗಲಿದೆಯೇ ಕಾದು ನೋಡಬೇಕು.

ಒಗ್ಗಟ್ಟು ಪ್ರದರ್ಶನ
ಕೋಲಾರ:  ನಮ್ಮ ಗ್ರಾಮಕ್ಕೆ ಅಭ್ಯರ್ಥಿಗಳು ಬಂದಿಲ್ಲ, ಗ್ರಾಮದ ಮುಖಂಡರು ಮತಕ್ಕಾಗಿ ನೀಡಿರುವ ಹಣ ಸಾಕಾಗಿಲ್ಲ. ಊರಿನಲ್ಲಿ ಅನೇಕ ಸಮಸ್ಯೆಗಳಿವೆ. ನೀರು, ರಸ್ತೆ ಬೇಕಾಗಿದೆ. ದೇವಾಲಯ ಕಟ್ಟಿಸಿಕೊಡುವುದಾಗಿ ಹೇಳಿ ಮಾತು ತಪ್ಪಿದ್ದಾರೆ. ಮುಖಂಡರು ಬಂದು ಬೇಡಿಕೆ ಈಡೇರಿಸುವವರೆಗೆ ಮತದಾನ ಮಾಡಲ್ಲವೆಂದು ಮುಳಬಾಗಿಲು ತಾಲೂಕಿನ ರಾಮಸಂದ್ರ ಗ್ರಾಮಸ್ಥರು ಮತದಾನದ ದಿನ ಒಗ್ಗಟ್ಟು ಪ್ರದರ್ಶಿಸಿದರು.

ಬಾಗೇಪಲ್ಲಿಯಲ್ಲಿ ಮದ್ಯ ನಿರಂತರ
ಬಾಗೇಪಲ್ಲಿ: ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದ್ದರೂ ಪಟ್ಟಣದಲ್ಲಿ ರಾಜಾರೋಷವಾಗಿ ಗುರುವಾರ ಬೆಳಗ್ಗೆ ವರೆಗೂ ಮದ್ಯ ಮಾರಾಟ ಮಾಡುತ್ತಿದ್ದ ದೃಶ್ಯಗಳು ಕಂಡುಬಂದವು. ಪಟ್ಟಣದ ಒಂದು ಕಡೆ 3 ಜನರು ಬಾಗಿಲು ಮುಚ್ಚಿದ ಅಂಗಡಿಯ ಮುಂದೆ ಕುಳಿತು ಮದ್ಯ ಸೇವನೆ ಮಾಡುತ್ತಿದ್ದರು. ಆ ಸ್ಥಳಕ್ಕೆ ಹೋಗಿ ಪೋಟೋ ತೆಗೆಯಲು ಮುಂದಾಗುತ್ತಿದ್ದಂತೆ ಮದ್ಯ ಮತ್ತು ಸ್ನ್ಯಾಕ್ಸ್ ಅನ್ನು ಅಲ್ಲಿಯೇ ಬಿಟ್ಟು ಅಲ್ಲಿಂದ ಪರಾರಿಯಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement