ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮತ ಬಹಿಷ್ಕಾರ ಅಪಸವ್ಯ

Srinivasa Murthy VN
Updated On : 18 Apr 2014, 1:16 am

ಸುಣ್ಣಪಗುಟ್ಟ ಗ್ರಾಮಸ್ಥರ ಆಕ್ರೋಶ
ಚಿಂತಾಮಣಿ: ಮೂಲಭೂತ ಸೌಕರ್ಯ ಕಲ್ಪಿಸಲು ಅಧಿಕಾರಿಗಳು ವಿಫಲವಾಗಿದ್ದಾರೆಂದು ಆರೋಪಿಸಿ ಸುಣ್ಣಪಗುಟ್ಟ ಗ್ರಾಮದಲ್ಲಿನ ದಲಿತ ಕಾಲೋನಿ ನಿವಾಸಿಗಳು ಗುರುವಾರ ಮತದಾನ ಬಹಿಷ್ಕರಿಸಿದರು. ಈ ಗ್ರಾಮದಲ್ಲಿ ಅರವತ್ತು ಕುಟುಂಬಗಳು ವಾಸವಾಗಿವೆ. ಆದರೆ, ಚುನಾವಣೆ ವೇಳೆ ಮತ ಕೇಳುವ ಅಭ್ಯರ್ಥಿಗಳು ಗೆದ್ದ ನಂತರ ತಮ್ಮ ಸಮಸ್ಯೆಗಳನ್ನು ಬಗೆಹರಿಸುವುದಿಲ್ಲ. ಕುಡಿಯುವ ನೀರು, ರಸ್ತೆ, ಬೀದಿ ದೀಪಗಳು ಸೇರಿದಂತೆ ಅನೇಕ ಸಮಸ್ಯೆಗಳನ್ನು ಪರಿಹರಿಸಿಲ್ಲ. ಹಾಗಾಗಿ, ಮತದಾನ ಬಹಿಷ್ಕರಿಸಿದರು.
ರಾಜಿ ಸಂಧಾನ ವಿಫಲ: ಚುನಾವಣಾ ಅಧಿಕಾರಿಗಳಾದ ಶಿವಣ್ಣ, ಕೃಷ್ಣಾರೆಡ್ಡಿ ಹಾಗೂ ಸಿಬ್ಬಂದಿ ಗುರುವಾರ ಸಂಜೆ ಗ್ರಾಮಕ್ಕೆ ಭೇಟಿ ನೀಡಿ, ಮತದಾನಕ್ಕೆ ಮನವೊಲಿಸಲು ಪ್ರಯತ್ನಿಸಿದರು. ಮೊದಲು ಮತ ಚಲಾಯಿಸಿ, ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದರು. ಆದರೆ, ಇದಕ್ಕೆ ಗ್ರಾಮಸ್ಥರು ಸೊಪ್ಪು ಹಾಕಲಿಲ್ಲ.

ಕಾಗಾನಪಲ್ಲಿ ಗ್ರಾಮಸ್ಥರದ್ದೂ ಅದೇ ಕಥೆ
ಬಾಗೇಪಲ್ಲಿ: ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಸಂಪೂರ್ಣವಾಗಿ ವಿಫಲವಾಗಿವೆ ಎಂದು ಆರೋಪಿಸಿ ತಾಲೂಕಿನ ಯಲ್ಲಂಪಲ್ಲಿ ಗ್ರಾಪಂ ವ್ಯಾಪ್ತಿಯ ಕಾಗಾನಪಲ್ಲಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದರು.
ಕಾಗಾನಪಲ್ಲಿ ಗ್ರಾಮದಲ್ಲಿ 250 ಮನೆಗಳಿವೆ. ಈ ಗ್ರಾಮದಲ್ಲಿ ಹಲವು ವರ್ಷಗಳಿಂದ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿಯಿದೆ. ಈ ಸಂಬಂಧ ಅನೇಕ ಬಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕುಡಿಯುವ ನೀರು, ಬೀದಿ ದೀಪ, ಚರಂಡಿ ಸೇರಿದಂತೆ ಮೂಲಭೂತ ಸೌಲಭ್ಯಗಳು ಈ ಗ್ರಾಮದಲ್ಲಿ ಹಲವು ವರ್ಷಗಳಿಂದ ಮರೀಚಿಕೆಯಾಗಿವೆ. ವಿಧಾನಸಭಾ ಚುನಾವಣೆ ಸಮಯದಲ್ಲಿ ಈ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆಗಳ ಮಹಾಪೂರವೇ ಹರಿಯಿತು. ಚುನಾವಣೆಗೂ ಮುಂಚೆಯೇ ಒಂದು ಕೊಳವೆ ಬಾವಿಯನ್ನು ಕೊರಸಲಾಗಿದೆ. ಈ ಕೊಳವೆ ಬಾವಿಗೆ ಪಂಪು ಮತ್ತು ಮೋಟರ್ ಸಹ ಅಳವಡಿಸಲಾಗಿದೆ. ಆದರೆ 8-10 ತಿಂಗಳು ಕಳೆದರೂ ಸಹ ಇದುವರೆಗೂ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಈ ಸಂಬಂಧ ಅಧಿಕಾರಿಗಳನ್ನು ಕೇಳಿದರೆ ಹಾರಿಕೆ ಉತ್ತರವನ್ನು ನೀಡುತ್ತಾರೆ ಎಂದು ಅವರು ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ರಾಮಕೃಷ್ಣಾರೆಡ್ಡಿ, ಸಿದ್ದೇಶ್ವರರೆಡ್ಡಿ, ಅಶ್ವತ್ಥನಾರಾಯಣ, ಶಿವಾನಂದರೆಡ್ಡಿ, ಶ್ರೀಹರಿ, ರಂಗಪ್ಪ, ಈಶ್ವರಪ್ಪ, ಚೆನ್ನಾರೆಡ್ಡಿ, ಧೋಭಿ ವೆಂಕಟರಾಮಪ್ಪ, ವಿಜಯಮ್ಮ, ಸುಗುಣಮ್ಮ, ರತ್ನಮ್ಮ, ಸರೋಜಮ್ಮ ಗಾಯತ್ರಿ ಸೇರಿದಂತೆ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement