ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕಾಮಗಾರಿ ಆರಂಭ ನಾಗರಿಕರ ನಿರಾಳ

Srinivasa Murthy VN
Updated On : 19 Apr 2014, 1:11 am

ಮಾಲೂರು: ಎರಡು ತಿಂಗಳಿಂದ ಅರ್ಧಕ್ಕೆ ನಿಂತಿದ್ದ ಪಟ್ಟಣದ ರಸ್ತೆ ಅಬಿವೃದ್ಧಿ ಕಾಮಗಾರಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮತ್ತೆ ಪ್ರಾರಂಭವಾಗಿದ್ದು, ಮುಂದಿನ ವಾರ ನಡೆಲಿರುವ ಕರಗ ಮಹೋತ್ಸವ ಸುಗುಮವಾಗಿ ನಡೆಯಲಿದೆ ಎಂಬ ಆಶಾ ಭಾವನೆ ಪಟ್ಟಣದ ಜನರಲ್ಲಿ ಮೂಡಿದೆ. ಏ.27 ರಂದು ಕರಗ ನಡೆಯಲಿರುವುದರಿಂದ ಕರಗ ಹೂತ್ತು ಸಾಗುವ ರಸ್ತೆಗಳಲ್ಲಿ ಕೇಲವ ಜಲ್ಲಿ ಕಲ್ಲು ಕೂಡಿದ್ದ ಹಿನ್ನೆಲೆಯಲ್ಲಿ ಪುರಸಭೆ ಗುತ್ತಿಗೆದಾರರಿಗೆ ನಾಲ್ಕು ಬಾರಿ ನೋಟಿಸ್ ನೀಡಿ, ಜಿಲ್ಲಾಧಿಕಾರಿಗಳಿಗೂ ವರದಿ ಸಲ್ಲಿಸಿತ್ತು. ಕನ್ನಡ ಪ್ರಭ ಈ ಬಗ್ಗೆ ವರದಿ ಪ್ರಕಟಿಸಿ ಜಿಲ್ಲಾಧಿಕಾರಿಗಳ ಕಣ್ಣು ತೆರೆಸುವ ಪ್ರಯತ್ನ ಮಾಡಿತ್ತು. ಇದರಿಂದ ಎಚ್ಚೆತ್ತಿರುವ ಜಿಲ್ಲಾಧಿಕಾರಿಗಳು ವಿಶೇಷ ಗಮನ ನೀಡಿ ಗುತ್ತಿಗೆದಾರನಿಗೆ ಕಟ್ಟುನಿಟ್ಟಿನ ಆದೇಶ ನೀಡಿದ ಹಿನ್ನೆಲೆಯಲ್ಲಿ ಪಟ್ಟಣದ ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಪ್ರಾರಂಭವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪುರಸಭೆ ಮುಖ್ಯಾಧಿಕಾರಿ ರೇಣುಕಾ, ಕಾಮಗಾರಿಯನ್ನು ತಕ್ಷಣ ಪ್ರಾರಂಭಿಸುವಂತೆ ಜಿಲ್ಲಾಧಿಕಾರಿಗಳು ಆದೇಶ ನೀಡಿರುವ ಹಿನ್ನೆಲೆಯಲ್ಲಿ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸ ಇದೆ ಎಂದು ತಿಳಿಸಿದ್ದಾರೆ.

ನಾಳೆ ಕವಿಗೋಷ್ಠಿ
ಚಿಂತಾಮಣಿ: ತಾಲೂಕು ಕನ್ನಡ ಸಾಹಿತ್ಯ ವೇದಿಕೆ ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಏಪ್ರಿಲ್ 20ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ದೊಡ್ಡಬೊಮ್ಮನಹಳ್ಳಿಯ ಬಿ.ವಿ.ಶ್ರೀನಿವಾಸ್‌ರೆಡ್ಡಿ ನಿವಾಸದಲ್ಲಿ ಮನೆಗೊಂದು ಕವಿಗೋಷ್ಠಿ ಆಯೋಜಿಸಲಾಗಿದೆ. ಉಭಯ ಜಿಲ್ಲೆಗಳ ಎಲ್ಲಾ ಆಸಕ್ತ ಕವಿಗಳು, ಕಾವ್ಯಾಸಕ್ತರು, ಕನ್ನಡಾಭಿಮಾನಿಗಳು ಸಕಾಲಕ್ಕೆ ಹಾಜರಾಗಿ ಸಹಕರಿಸಬೇಕೆಂದು ಚುಟುಕು ಸಾಹಿತ್ಯ ಪರಿಷತ್ತಿನ ಗ್ರಾಮಾಂತರ ಸಂಚಾಲಕರಾದ ಮೈಲಾಂಡ್ಲಹಳ್ಳಿ ಎಂ.ವಿ.ಅಶ್ವತ್ಥನಾರಾಯಣ ರವರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ- 9845647607, 9738828561 ಸಂಪರ್ಕಿಸಿ.

ಅಂಬೇಡ್ಕರ್ ಜಯಂತಿ
ಚಿಂತಾಮಣಿ: ಕೈವಾರ ಗ್ರಾಮದಲ್ಲಿರು ಅಂಬೇಡ್ಕರ್ ನಾಮಫಲಕಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಮಾದಿಗ ದಂಡೋರ ಸಮಿತಿ ಅಂಬೇಡ್ಕರ್ ಅವರ 123ನೇ ಜನ್ಮ ದಿನಾಚರಣೆಯನ್ನು ಆಚರಿಸಿದರು.
 ಈ ಸಂದರ್ಭದಲ್ಲಿ ರಾಜ್ಯ ಜಂಟಿ ಕಾರ್ಯದರ್ಶಿ ಪಿ.ವಿ.ವೆಂಕಟರವಣಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ಜಂಗಮಶೀಗೇನಹಳ್ಳಿ ದೇವರಾಜ್, ಮುಖಂಡರಾದ ಶ್ಯಾಮರಾಜ್, ಎಂ.ಆರ್.ನಾರಾಯಣಸ್ವಾಮಿ, ಆಟೋ ಕೃಷ್ಣ, ಶ್ರೀನಿವಾಸ್, ಮಂಜುನಾಥ್, ನಾರಾಯಣಪ್ಪ, ಮುನಿನಾರಾಯಣಪ್ಪ, ಅಶ್ವತ್ಥ ರೆಡ್ಡಿ, ವೆಂಕಟೇಶ್, ಕುಮಾರ್, ಮಾರಪ್ಪ ಸೇರಿದಂತೆ ಇನ್ನೂ ಹಲವು ಮುಖಂಡರು, ಹಾಗೂ ನೂರಾರು ಜನರು ಭಾಗವಹಿಸಿದ್ದರು.

ಜನಪದ ಸಾಹಿತ್ಯ ಮಹಾಕಾವ್ಯಗಳಿಗೂ ಮೀರಿದ್ದು
ಹುಳಿಯಾರು: ಜನಪದ ಸಾಹಿತ್ಯವು ಮಹಾಕಾವ್ಯಗಳಿಗಿಂತ ಮಹತ್ವದಾಗಿದೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಎಚ್.ಎಂ. ಮಲ್ಲಿಕಾರ್ಜುನಯ್ಯ  ತಿಳಿಸಿದರು. ಬಸವೇಶ್ವರನಗರದ ಚಿದಾನಂದಮೂರ್ತಿ ಅವರ ನಿವಾಸದಲ್ಲಿ ಈಚೆಗೆ ಹೋಬಳಿ ಕನ್ನಡಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ಮನೆಮನೆಗಳಲ್ಲಿ ಕನ್ನಡ  ಕವಿಕಾವ್ಯಗೋಷ್ಠಿ ಪಾಕ್ಷಿಕ ಕಾರ್ಯಕ್ರಮದಲ್ಲಿ ಅವರು ಜನಪದ ಸಾಹಿತ್ಯ ಕುರಿತಂತೆ ಮಾತನಾಡಿ ಕೆಲಸ ಮಾಡುವಾಗ ಪದಪದಗಳನ್ನು ಕಟ್ಟಿ ಹಾಡಿದ ಸಾಹಿತ್ಯವೇ ಜನಪದ ಸಾಹಿತ್ಯವಾಗಿದೆ. ಅವು ಒಬ್ಬರ ಬಾಯಿಂದ ಮತ್ತೊಬ್ಬರ ಬಾಯಿಗೆ ಹರಡಿದ ಸಾಹಿತ್ಯವಾಗಿದ್ದು ಪ್ರಸ್ತುತ ಹೆಚ್ಚಿನ ಮಹತ್ವ ಪಡೆದುಕೊಂಡಿದೆ ಎಂದರು. ಈ ಸಾಹಿತ್ಯದಲ್ಲಿ ಜನರ ನೋವು, ನಲಿವುಗಳಿದ್ದು ಸಾಮಾಜಿಕ ನೆಲೆಗಟ್ಟಿನಲ್ಲಿ ರೂಪಗೊಂಡಿದೆ. ಮಹಿಳೆಗೆ ಮಹತ್ವದ ಸ್ಥಾನವನ್ನು ಜನಪದದಲ್ಲಿ ಕೊಟ್ಟಿದ್ದು, ಹೆಣ್ಣಿಗೆ ತನ್ನ ತವರಿಗೆ ಬಗ್ಗೆ ಇರುವ ಪ್ರೇಮ, ವಾತ್ಸಲ ಹಾಗೂ ತವರಿಗಾಗಿ ಹಂಬಲಿಸುವ ಪರಿಯನ್ನು ಜನಪದ ಸಾಹಿತ್ಯ ತಿಳಿಸಲಿದೆ ಎಂದರು. ಶಿಕ್ಷಕ ಗೋವಿಂದರಾಜು  ಅಧ್ಯಕ್ಷತೆವಹಿಸಿ ಮಾತನಾಡಿ ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯನ್ನು ಉಳಿಸಿ  ಬೆಳೆಸುವಲ್ಲಿ ನಾವೆಲ್ಲ ಕೈ ಜೋಡಿಸಿ ಸಾಗಬೇಕಿದೆ ಎಂದರು. ಬಸವಮೂರ್ತಿ, ಟಿ. ನಾರಾಯಣಪ್ಪ, ಟಿ. ಸುದರ್ಶನ್ ಜಯಣ್ಣ, ಬಸವರಾಜು ಸೇರಿ ಅನೇಕರಿದ್ದರು.

ಯುಪಿಎ-3 ಸರ್ಕಾರ ಖಚಿತ: ಮುನಿಯಪ್ಪ
ಮಾಲೂರು: ಕೋಲಾರ ಕ್ಷೇತ್ರದಲ್ಲಿ ಮತ್ತೆ ಏಳನೇ ಬಾರಿಗೆ ಕಾಂಗ್ರೆಸ್ ಗೆಲವು ಕಾಣಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ವಿಶ್ವಾಸ ವ್ಯಕ್ತ ಪಡಿಸಿದರು. ಗುರುವಾರ ಮತದಾನ ಮುಗಿದ ಬಳಿಕ ಇಲ್ಲಿನ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ವೇಳೆ ಸುದ್ದಿಗಾರರ ಜತೆ ಮಾತನಾಡಿ, 'ಕಳೆದ ಎರಡು ದಶಕಗಳಿಂದ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳೇ ನನ್ನ ಗೆಲುವಿಗೆ ಸಹಕಾರಿ. ಕೇಂದ್ರದಲ್ಲಿ ಯುಪಿಎ-3ರ ಸರ್ಕಾರ ಬರುವುದು ಖಂಡಿತ' ಎಂದರು.

ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ; ಆರೋಪಿ ಬಂಧನ
ಕೆಜಿಎಫ್: ಚುನಾವಣಾ ಕರ್ತವ್ಯದಲ್ಲಿ ನಿರತರಾಗಿದ್ದ ಪೊಲೀಸ್ ಸಿಬ್ಬಂದಿಯೊಬ್ಬರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ ಆರೋಪದ ಮೇಲೆ ಬೇತಮಂಗಲ ಠಾಣಾ ಪೊಲೀಸರು ಶುಕ್ರವಾರ ವ್ಯಕ್ತಿಯನ್ನು ಬಂಧಿಸಿದ್ದಾರೆ. ತಾತೇಪಲ್ಲಿ ಗ್ರಾಮದ ರಮೇಶ್‌ಬಾಬು ಎಂಬುವರು ಹಲ್ಲೆ ನಡೆಸಿದ್ದು ಆತನನ್ನು ಬಂಧಿಸಿದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮತದಾನ ನಡೆಯುತ್ತಿದ್ದ ವೇಳೆ ಸಾಲಿನಲ್ಲಿ ಬರದೆ ಮುಂದೆ ಬಂದ ರಮೇಶ್‌ಬಾಬುರನ್ನು ಪೊಲೀಸ್ ಸಿಬ್ಬಂದಿ ಸುನಿಲ್‌ಕುಮಾರ್ ತಡೆದಾಗ ಇಬ್ಬರ ಮಧ್ಯೆ ವಾಗ್ವಾದ ನಡೆದು ಸಮವಸ್ತ್ರ ಹರಿದುಹಾಕಿದ್ದಾಗಿ ಆರೋಪಿಸಿ ಸುನಿಲ್‌ಕುಮಾರ್ ಬೇತಮಂಗಲ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಮಹಿಳೆ ನೇಣಿಗೆ ಶರಣು
ಶಿಡ್ಲಘಟ್ಟ: ಹನುಂತಪುರ ಗೇಟ್ ಬಳಿಯ ಬಿಜಿಎಸ್ ಶಾಲೆಯ ಹಿಂಬಾಗದಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುವ ಮಹಿಳೆಯ ಶವ ಪತ್ತೆಯಾಗಿದೆ. ಗಂಗಮ್ಮ(50) ಮೃತಪಟ್ಟಿರುವ ಮಹಿಳೆ. ಶ್ರೀರಾಮ ನವಮಿ ಹಬ್ಬದ ದಿನ ಗಂಡ ಅಶ್ವತಪ್ಪ ಹಾಗೂ ಮಕ್ಕಳ ಜೊತೆ ಅಡುಗೆ ಮಾಡುವ ವಿಷಯದಲ್ಲಿ ಜಗಳವಾಡಿದ್ದು ಕೋಪದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗಂಗಮ್ಮ ಕಾಣೆ.ಾಗಿರುವ ಬಗ್ಗೆ ಪುರ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಬಿ.ಜಿ.ಎಸ್ ಶಾಲೆಯ ಹಿಂಬಾಗದಲ್ಲಿ ಶವ ಕಂಡ ಸಾರ್ವಜನಿಕರು ಪೊಲೀಸರಿಗೆ ಸುದ್ದಿ ತಿಳಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು ಕೊಳೆತ ಸ್ಥಿತಿಯಲ್ಲಿದ್ದ ಗಂಗಮ್ಮರ ಶವವನ್ನು ಪ್ರಾಣಿಗಳು ಕಿತ್ತು ತಿಂದಿದ್ದು ಕೇವಲ ಮೂಳೆ ಮಾತ್ರ ಉಳಿದಿತ್ತು. ಆಕೆಯ ಮೊಬೈಲ್ ಹಾಗೂ ಬಟ್ಟೆಯನ್ನು ನೋಡಿ ಗಂಗಮ್ಮ ಎಂದು ಆಕೆಯ ಗಂಡ ಅಶ್ವತಪ್ಪ ಗುರುತಿಸಿದ್ದಾನೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಾದರ್‌ಗೆ ಕಪಾಳಮೋಕ್ಷ
ಕೆಜಿಎಫ್: ಚರ್ಚ್ ಫಾದರ್‌ಗೆ ವ್ಯಕ್ತಿಯೊಬ್ಬರು ಕಪಾಳಮೋಕ್ಷ ಮಾಡಿದ ಕಾರಣ ಫಾದರ್ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಉರಿಗಾಂ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವೆಸ್ಲಿನ್ ಬ್ಲಾಕ್ ವ್ಯಾಪ್ತಿಯ ಸಂತ್ ಮಾರ್ಟಿನ್ ಚರ್ಚ್ (ಸಿಎಸ್‌ಐ)ಚರ್ಚ್ ಕಾರ್ಯದರ್ಶಿ ನ್ಯಾನದಾಸ್ ಎಂಬುವರು ಚರ್ಚ್‌ನ ಮುಖ್ಯಸ್ಥ ಫಾದರ್ ಜೆ.ಅಲ್ವೀನ್ ಹೆರ್ಬರ್ ಎಂಬುವರಿಗೆ ತಿಳಿಸದೇ ಚರ್ಚ್‌ನ ವಸ್ತುಗಳನ್ನು ವೈಯುಕ್ತಿಕ ಕಾರ್ಯಕ್ರಮಕ್ಕೆ ಉಪಯೋಗಿಸಿರುವ ಆರೋಪವನ್ನು ಚರ್ಚ್ ಸದಸ್ಯರು ಮಾಡಿದ್ದು, ಫಾದರ್ ಸಭೆ ಕರೆದಿದ್ದಾಗ ಕಪಾಳಮೋಕ್ಷ ಮಾಡಿದ್ದಾರೆ. ಇದರಿಂದ ಕುಸಿದು ಬಿದ್ದ ಫಾದರ್‌ರನ್ನು ಚರ್ಚ್ ಸದಸ್ಯರು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚರ್ಚ್ ಮುಖ್ಯಸ್ಥರ ಮೇಲೆ ಹಲ್ಲೆ ನಡೆಸಿರುವುದನ್ನು  ನಗರದ ವಿವಿಧ ಚರ್ಚ್‌ಗಳ ಮುಖ್ಯಸ್ಥರು ಖಂಡಿಸಿದ್ದು, ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ. ಉರಿಗಾಂ ಠಾಣೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ನ್ಯಾನದಾಸ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪಿಎಚ್‌ಡಿ
ಕೋಲಾರ: ದಲಿತ ಚಳುವಳಿಯ ಮುಖಂಡ, ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಎಂ. ವೆಂಕಟಸ್ವಾಮಿ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯ ಅರ್ಥಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ. ಅವರು ತಮ್ಮ ಸಂಶೋಧನೆಯನ್ನು ಬೆಂಗಳೂರು ವಿವಿಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎನ್. ರಂಗಸ್ವಾಮಿ ಸಂಶೋಧನೆಯ ಮಾರ್ಗದರ್ಶಕರಾಗಿದ್ದರು. ವೆಂಕಟಸ್ವಾಮಿಯವರನ್ನು ಕೆ. ಚಂದ್ರಶೇಖರ್, ಲೋಲಾಕ್ಷ, ಎಚ್.ಕೆ. ದಾಸು ಅಭಿನಂದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement