ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪಟ್ಟಾಭಿಷೇಕೋದ್ಯಾನ ಅನೈತಿಕ ಚಟುವಟಿಕೆ ತಾಣ

Srinivasa Murthy VN
Updated On : 19 Apr 2014, 1:10 am

ಬಂಗಾರಪೇಟೆ: ಪಟ್ಟಣದ ಪಟ್ಟಾಭಿಷೇಕೋದ್ಯಾನ ವನ ಸೂಕ್ತ ನಿರ್ವಹಣೆ ಇಲ್ಲದೆ ಇಂದು ಅನೈತಿಕ ಚಟುವಟಿಕೆಗಳ ಸ್ಥಳವಾಗಿ ಮಾರ್ಪಟ್ಟಿದ್ದರೂ ಪುರಸಭೆಯವರು ಗಮನಹರಿಸದೆ ನಿರ್ಲಕ್ಷ್ಯ ತಾಳಿರುವುದು ನಾಗರಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಉದ್ಯಾನದಲ್ಲಿನ ಗಾಂಧಿ ಭವನದ ಹಿಂಭಾಗ ಮದ್ಯದ ಸೀಸೆ, ಬಳಸಿದ ಬೀಡಿ, ಸಿಗರೇಟ್ ಪ್ಯಾಕ್‌ಗಳನ್ನು ಎಸೆಯುವ ಕಸದ ತೊಟ್ಟಿಯಾಗಿ ಬಳಕೆಯಾಗುತ್ತಿದೆ. ಶುಚಿತ್ವವಿಲ್ಲದೆ ಒಳಗೆ ಕಾಲಿಡುತ್ತಿದ್ದಂತೆ ಮೂಗಿಗೆ ದುರ್ವಾಸನೆ ಬಡಿಯುತ್ತದೆ. ಒಂದು ಕಾಲದಲ್ಲಿ ಮಕ್ಕಳಿಗೆ ಮನರಂಜನೆ ನೀಡುತ್ತಿದ್ದ ಉದ್ಯಾನವನ ಈಗ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಪಟ್ಟಿದೆ.
 ಉದ್ಯಾನದ ಮಧ್ಯದಲ್ಲಿ ಸಂಗೀತಕ್ಕೆ ತಕ್ಕಂತೆ ನೃತ್ಯ ಮಾಡುತ್ತಿದ್ದ ನೀರಿನ ಕಾರಂಜಿ, ಮಕ್ಕಳ ಮನರಂಜನೆಗಾಗಿ ಅಳವಡಿಸಿದ್ದ ಉಯ್ಯಾಲೆ, ಜಾರುಬಂಡೆ, ನಿತ್ಯ ಸಂಜೆಯಾಗುತ್ತಿದ್ದಂತೆ ಮಕ್ಕಳೊಂದಿಗೆ ಹಿರಿಯರೂ ವಿಶ್ರಮಿಸುತ್ತಿದ್ದ ತಾಣ, ಆ ವಾತಾವರಣ ಇಂದು ಮಾಯವಾಗಿದೆ. ಉದ್ಯಾನದ ಅರ್ಧ ಭಾಗದಲ್ಲಿ ಮಾತ್ರ ಅಲಂಕಾರಿಕ ಗಿಡಗಳನ್ನು ಬೆಳೆಸಲಾಗಿದೆ. ಆದರೂ ನಿರ್ವಹಣೆ ಕೊರತೆಯಿಂದ ಸೊರಗಿದೆ. ಉಳಿದ ಸುಮಾರು ಶೇಕಡ 30 ರಷ್ಟು ಭಾಗ ಶೌಚಕ್ಕೆ ಬಳಕೆಯಾಗುತ್ತಿದೆ.
ಶತಮಾನದ ಹಿಂದೆ ಹಾಜಿ ಇಸ್ಮಾಯಿಲ್ ಲೇಟ್ ಎಂಬುವರು ಸುಮಾರು 5 ಎಕರೆ ಪ್ರದೇಶವನ್ನು ಉದ್ಯಾನಕ್ಕಾಗಿ ಪುರಸಭೆಗೆ ದಾನ ನೀಡಿದ್ದರು. ಪ್ರಸ್ತುತ ಬಹುತೇಕ ಜಾಗ ಒತ್ತುವರಿಯಾಗಿದ್ದು ಕಟ್ಟಡಗಳನ್ನು ನಿರ್ಮಿಸಲಾಗಿದೆ. ಅಕ್ರಮವಾಗಿ ಕಟ್ಟಿರುವ ಕಟ್ಟಡಗಳು ಸಕ್ರಮಗೊಂಡಿವೆ. ರಕ್ಷಸಿಸಬೇಕಿದ್ದ ಅಧಿಕಾರಿಗಳು ಜಾಣಕುರುಡು ಪ್ರದರ್ಶಿಸಿರುವುದರಿಂದ ಪಟ್ಟಣದಲ್ಲಿ ಇರುವ ಏಕೈಕ ಉದ್ಯಾನವನ ನಶಿಸಿಹೋಗಲಿದೆ ಎನ್ನುವುದು ಹಿರಿಯರ ಆತಂಕ.
ಪಟ್ಟಣದ ಏಕೈಕ ಉದ್ಯಾನವನ ಅವನತಿ ಅಂಚಿನಲ್ಲಿದೆ. ಮಕ್ಕಳ ಮನರಂಜನೆ, ಹಿರಿಯರ ವಿಶ್ರಾಂತಿಗಾಗಿ ಪಟ್ಟಣದಲ್ಲಿ ಯಾವುದೆ ಅನುಕೂಲ ಇಲ್ಲದಿರುವುದು ವಿಪರ್ಯಾಸ. ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಎನ್ನುವುದು ಪಟ್ಟಣದ ನಿವಾಸಿ ಲಲಿತಾರಮೇಶ್ ಅವರ ಒತ್ತಾಯ.
ಉದ್ಯಾನವನದಲ್ಲಿರುವ ಗಾಂಧಿ ಭವನ ಮತ್ತು ಗ್ರಂಥಾಲಯಕ್ಕೆ ಅಳವಡಿಸಲಾಗಿದ್ದ ಮೇಲ್ಛಾವಣಿ ಮಳೆ ನೀರಿನ ಸಂಗ್ರಹಣೆ ವ್ಯವಸ್ಥೆ ಕೂಡ ಹದಗೆಟ್ಟಿದೆ. ಮಳೆ ನೀರು ಕೊಯ್ಲು ಪದ್ಧತಿಯನ್ನು ವ್ಯವಸ್ಥಿತವಾಗಿ ನಿರ್ವಹಿಸಿ ಇತರರಿಗೆ ಮಾದರಿ ಆಗಬೇಕಿದ್ದ ಪುರಸಭೆ ನಿರ್ಲಕ್ಷ್ಯ ವಹಿಸಿದೆ ಎನ್ನುವುದು ಸಾಮಾನ್ಯ ಆರೋಪವಾಗಿದೆ.  ಈ ಬಗ್ಗೆ ಪುರಸಭೆ ನೂತನ ಅಧ್ಯಕ್ಷೆ ಗಂಗಮ್ಮರನ್ನು ಕೇಳಿದರೆ ಲೋಸಭೆ ಚುನಾವಣೆಯಲ್ಲಿ ಬ್ಯುಸಿಯಾಗಿದ್ದರಿಂದ ಗಮನಹರಿಸಲು ಆಗಲಿಲ್ಲ ಈಗ ಉದ್ಯಾನವನ ಕಡೆ ಕಮನ ಹರಿಸಿ ರಕ್ಷಿಸಲು ವಿಶೇಷ ಒತ್ತು ಕೊಡುವುದಾಗಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement