ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನೀರಿಗೆ ಹಾಹಾಕಾರ; ಊರು ಬಿಡುತ್ತಿರುವ ಜನ

Srinivasa Murthy VN
Updated On : 20 Apr 2014, 11:59 am

ಕೆ. ರಮೇಶ್
ಬಂಗಾರಪೇಟೆ: ಲೋಕಸಭೆ ಚುನಾವಣೆಗೆ ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಪಟ್ಟಣದಲ್ಲಿ ಕುಡಿಯುವ ನೀರಿನ ಅಭಾವ ಮಿತಿಮೀರಿ ಕಾಡುತ್ತಿದ್ದು ಬಾಡಿಗೆ ಮನೆಗಳಲ್ಲಿ ವಾಸವಿರುವ ಜನರು ನೀರಿಗಾಗಿ ಪಟ್ಟಣದಿಂದ ಬೇರೆಡೆ ವಲಸೆ ಹೋಗುವಂತಹ ವಾತಾವರಣ ನಿರ್ಮಾಣವಾಗಿದೆ.
ಕ್ಷೇತ್ರದಾದ್ಯಂತ ಕುಡಿಯುವ ನೀರಿನ ಸಮಸ್ಯೆ ಬೇಸಿಗೆ ಕಾಲಿಡುವ ಮೊದಲೆ ಜನರನ್ನು ಅಧಿಕವಾಗಿ ಭಾದಿಸುತ್ತಿದ್ದು, ಪಟ್ಟಣದಲ್ಲಿ ಕಳೆದ 15ದಿನಗಳಿಂದ ಜನರು ಚುನಾವಣೆ ಗುಂಗಿನಲ್ಲಿದ್ದರು. ಈಗ ಚುನಾವಣೆಯಿಂದ ಹೊರ ಬಂದಿರುವ ಜನರಿಗೆ ನೀರಿನ ಬಿಸಿ ಮುಟ್ಟತೊಡಗಿದೆ. ಚುನಾವಣೆ ನಡೆಯುವವರೆಗೂ ಎಸ್.ಎನ್. ಚಾರಿಟೆಬಲ್ ಟ್ರಸ್ಟ್ ವತಿಯಿಂದ ಉಚಿತವಾಗಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ನೀರು ಪೂರೈಕೆ ಮಾಡುತ್ತಿದ್ದರು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಹೊಸ ಕೊಳವೆ ಬಾವಿಗಳನ್ನು ಕೊರೆಸುವ ಕಾರ್ಯವನ್ನು  ಸ್ಥಗಿತಗೊಳಿಸಲಾಗಿತ್ತು. ಈ ನಡುವೆ ಪಟ್ಟಣ ಜನರು ನೀರಿಗಾಗಿ ಪಡಬಾರದ ಕಷ್ಟ ಅನುಭವಿಸಿದ್ದರು.
ಎಸ್.ಎನ್.ನಾರಾಯಣಸ್ವಾಮಿ ಎಷ್ಟೇ ನೀರು ಸರಬರಾಜು ಮಾಡಿದರೂ ಜನರಂತು ನೀರಿನ ಸಮಸ್ಯೆಯಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ. ಪಟ್ಟಣದಲ್ಲಿ ಕೊರೆಸಿರುವ ಎಲ್ಲಾ ಕೊಳವೆ ಬಾವಿಗಳು ಒಣಗಿರುವುದರಿಂದ ಸಮಸ್ಯೆ ಮತ್ತಷ್ಟು ಜಟಿಲಗೊಂಡಿದೆ. ಬಾಡಿಗೆ ಮನೆಗಳಲ್ಲಿ ವಾಸಿಸುವವರಂತೂ ನೀರಿಗಾಗಿ ಪರದಾಡಿ ಮನೆ ತೊರೆಯುತ್ತಿದ್ದಾರೆ. ಇತ್ತ ಶಾಶ್ವತ ನೀರಾವರಿ ಇಲ್ಲ, ಅತ್ತ ಪುರಸಭೆ ಕೊಳಾಯಿಗಳಲ್ಲಿ ನೀರೂ ಬರುತ್ತಿಲ್ಲ, ಹೀಗಾಗಿ ಜೀವಜಲಕ್ಕಾಗಿ ಬಡಿದಾಟ, ಮಹಿಳೆಯರು ಬಿಂದಿಗೆಗಳೊಂದಿಗೆ ಅಲೆಯುವಂತಾಗಿದೆ. ಚಿನ್ನ ಬೇಕಾದರೂ  ಖರೀದಿಸಬಹುದು ಆದರೆ ಹಣ ಕೊಟ್ಟರೂ ನೀರು ಸಿಗುತ್ತಿಲ್ಲ. ಅಷ್ಟೊಂದು ಹಾಹಾಕಾರ ಉಂಟಾಗಿದೆ. ಕ್ಷೇತ್ರದಲ್ಲಿ ಬ್ರಾಂದಿ, ವಿಸ್ಕಿಗೇನೂ ಕೊರತೆಯಿಲ್ಲ. ಗಲ್ಲಿಗಲ್ಲಿಗಳಲ್ಲೂ ಬಾರ್ ರೆಸ್ಟೋರೆಂಟ್‌ಗಳಿವೆ. ಆದರೆ ಗುಟುಕು ನೀರಿಗೂ ತತ್ವಾರವಿದೆ. ಶಾಸಕ ನಾರಾಯಣಸ್ವಾಮಿ ಸಮಸ್ಯೆ ಬಾರದಂತೆ ಎಚ್ಚರ ವಹಿಸಲು ಸರ್ಕಾರದಿಂದ ನೀರಿಗಾಗಿ ಕೋಟ್ಯಂತರ ಅನುದಾನ ತಂದಿದ್ದಾರೆ. ಆದರೆ ಅಂತರ್ಜಲ ಕುಸಿದಿರುವುದರಿಂದ ಈ ಭಾರಿ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ.
ಖಾಸಗಿ ಟ್ಯಾಂಕರ್ ಮಾಲೀಕರಿಗೆ ಸುಗ್ಗಿ: ಪಟ್ಟಣದಲ್ಲಿ ನೀರಿನ ಅಭಾವದಿಂದಾಗಿ ಖಾಸಗಿ ನೀರಿನ ಟ್ಯಾಂಕರ್ ಮಾಲೀಕರು ಒಮ್ಮೆಲೆ ಟ್ಯಾಂಕರ್ ನೀರಿನ ಬೆಲೆಯನ್ನು ದುಪ್ಪಟ ಮಾಡಿದ್ದಾರೆ ವಿಧಿಯಿಲ್ಲದೆ ದುಡ್ಡಿರುವವರು ದುಬಾರಿ ಬೆಲೆ ಕೊಟ್ಟು ನೀರು ಖರೀದಿ ಮಾಡುವರು ಬಡವರು ಎಲ್ಲಿಂದ ಖರೀದಿ ಮಾಡಬೇಕು. ವಾರದ ಹಿಂದೆ ಬುಕ್ ಮಾಡಿದರೆ ನೀರು ಸಿಗುತ್ತದೆ ಇಲ್ಲದಿದ್ದರೆ ಟ್ಯಾಂಕರ್ ನೀರಿಗೂ ಕಾಯಬೇಕು, ಬಂಗಾರಪೇಟೆಯಲ್ಲಿ ಬಂಗಾರ ಬೇಕಾದರು ಹಣ ಕೊಟ್ಟು ಕೊಳ್ಳಬಹುದು ಆದರೆ ನೀರನ್ನು ಅಲ್ಲ, ಟ್ಯಾಂಕರ್ ಬರುತ್ತಿದ್ದಂತೆ ಮಹಿಳೆಯರು ನೊಣಗಳಂತೆ ಮುಗಿಬಿದ್ದು ನೀರು ಸಂಗ್ರಹಿಸುವರು. ಇದು ಪಟ್ಟಣದ ಸ್ಥಿತಿ ಇನ್ನು ಗ್ರಾಮೀಣ ಪ್ರದೇಶದಲ್ಲಿ ಹೇಳಲೇಬೇಕಿಲ್ಲ ಪಟ್ಟಣಕ್ಕಿಂತಲೂ ಭಿನ್ನವೇನಲ್ಲ.

ಪುರಸಭೆ 3ತಿಂಗಳಿಗೊಮ್ಮೆ ನೀರು ಬಿಡುತ್ತಾರೆ ಅದೂ ಯಾವಾಗ ಬಿಡ್ತಾರೆರೋ ಆ ದೇವರಿಗೇ ಗೊತ್ತು,ನಲ್ಲಿ ಕಾಯ್ತಿರ್ಬೇಕು ನೀರು ಬಂದಾಗ ಹಿಡ್ಕೋಬೇಕು, ಇಲ್ಲ ಅಂದ್ರೆ ನೀರು ಬರುವ ಕೊಳಾಯಿ ಹುಡ್ಕೊಂಡು ಹೋಗಿ ತರಬೇಕು ನೀರಿಗಾಗಿ ಸಖತ್ ಹಿಂಸೆ ಅನುಭವಿಸ್ತಾ ಇದ್ದೀವಿ.
-ಜಯಮ್ಮ
ಗೃಹಿಣಿ.

ಪುರಸಭೆ 3ತಿಂಗಳಿಗೊಮ್ಮೆ ನೀರು ಬಿಡುತ್ತಾರೆ ಅದೂ ಯಾವಾಗ ಬಿಡ್ತಾರೆರೋ ಆ ದೇವರಿಗೇ ಗೊತ್ತು,ನಲ್ಲಿ ಕಾಯ್ತಿರ್ಬೇಕು ನೀರು ಬಂದಾಗ ಹಿಡ್ಕೋಬೇಕು, ಇಲ್ಲ ಅಂದ್ರೆ ನೀರು ಬರುವ ಕೊಳಾಯಿ ಹುಡ್ಕೊಂಡು ಹೋಗಿ ತರಬೇಕು ನೀರಿಗಾಗಿ ಸಖತ್ ಹಿಂಸೆ ಅನುಭವಿಸ್ತಾ ಇದ್ದೀವಿ.
-ಜಯಮ್ಮ
ಗೃಹಿಣಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement