ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಗುರಿ ಇರಲಿ: ಯಂಡಮೂರಿ ಸಲಹೆ
ಚಿಕ್ಕಬಳ್ಳಾಪುರ: ವಿದ್ಯಾರ್ಥಿಗಳು ಒಂದು ನಿರ್ದಿಷ್ಟ ಗುರಿಯಿಟ್ಟುಕೊಂಡು ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟರೆ ಮುಂದೆ ಸಾಧಕರಾಗುತ್ತಾರೆ. ಅದು ಅವರ ಮುಂದಿನ ಉಜ್ವಲ ಭವಿಷ್ಯಕ್ಕೆ ಸಹಕಾರಿಯಾಗುತ್ತದೆ ಎಂದು ಆಂಧ್ರದ ಖ್ಯಾತ ಚಲನಚಿತ್ರ ಕಥೆಗಾರ ಯಂಡಮೂರಿ ವಿರೇಂದ್ರನಾಥ್ ಅಭಿಪ್ರಾಯಪಟ್ಟರು.
ತಾಲೂಕಿನ ಜಡಲತಿಮ್ಮನಹಳ್ಳಿಯ ವಿಷ್ಣುಪ್ರಿಯ ಕಾಲೇಜಿನಲ್ಲಿ ವಿದ್ಯಾರ್ಥಿ, ಪೋಷಕರಿಗಾಗಿ ಏರ್ಪಡಿಸಿದ್ದ ವೃತ್ತಿ ಮಾರ್ಗದರ್ಶನ ಮತ್ತು ಆಪ್ತ ಸಲಹೆ ಶಿಬಿರ ಉದ್ಘಾಟಿಸಿ ಮಾತನಾಡಿ, ಯಾವುದೇ ವಿದ್ಯಾರ್ಥಿಗೆ ವಿದ್ಯಾರ್ಥಿ ಜೀವನ ಪ್ರಮುಖ ಘಟ್ಟ. ಆ ಘಟ್ಟದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಒಂದು ನಿರ್ದಿಷ್ಟ ಗುರಿ ಇಟ್ಟುಕೊಂಡು ಸೋಲು ಮುಂದಿನ ಗೆಲುವಿನ ಮೆಟ್ಟಿಲು ಎಂದು ಭಾವಿಸಿ, ಗುರಿ ಮುಟ್ಟುವ ತನಕ ಮುನ್ನುಗ್ಗುತ್ತಿರಬೇಕು. ತಾವು ಮಾಡುವ ಪ್ರತಿ ಕಾರ್ಯವನ್ನು ಹೊಸ ಚಿಂತನೆ ಜೊತೆಗೆ ಮನಸ್ಸಿಟ್ಟು ಕೆಲಸ ಮಾಡಬೇಕು ಎಂದರು.
ಪೋಷಕರು ಮಕ್ಕಳಲ್ಲಿ ಯಶಸ್ಸಿನ ಗುರಿಯ ಸಾಮರ್ಥ್ಯವನ್ನು ಬೆಳೆಸಬೇಕು. ಯಾವ ಪೋಷಕರೇ ಆಗಲಿ ತಮ್ಮ ಮಕ್ಕಳನ್ನು ಯಾವ ರೀತಿ ಬೆಳೆಸುತ್ತಾರೋ ಹಾಗೆ ಮಕ್ಕಳು ತಮ್ಮ ಮುಂದಿನ ಜೀವನದಲ್ಲಿ ಯಶಸ್ಸು ಕಾಣುತ್ತಾರೆ. ಗ್ರಾಮೀಣ ಮಕ್ಕಳಲ್ಲಿ ಬುದ್ಧಿಶಕ್ತಿ ಇದೆ. ಆದರೆ ಅವರಿಗೆ ಧೈರ್ಯದ ಕೊರತೆಯಿಂದ ಉದ್ಯೋಗಗಳಿಂದ ವಂಚಿತರಾಗುತ್ತಿದ್ದು, ವಿದ್ಯಾರ್ಥಿಗಳು ಮೊದಲು ಧೈರ್ಯವನ್ನು ಬೆಳೆಸಿಕೊಳ್ಳಬೇಕು ಎಂದ ಅವರು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಲವು ವಿದ್ಯಾರ್ಥಿಗಳನ್ನು ವೇದಿಕೆಗೆ ಕರೆದು, ಹಾಸ್ಯ ಭರಿತ ಪ್ರಶ್ನೆಗಳನ್ನು ಕೇಳುವ ಮೂಲಕ ವಿದ್ಯಾರ್ಥಿ ಜೀವನದ ನಂತರ ಬದುಕನ್ನು ಯಾವ ರೀತಿ ರೂಪಿಸಕೊಳ್ಳಬೇಕು ಎಂಬುದರ ಬಗ್ಗೆ ಸಲಹೆ ಸೂಚನೆ ನೀಡಿದರು.
ದಕ್ಷತ್ ಕುಮಾರ್ ಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ತಾಳ್ಮೆ, ಸಮಯ, ಸಂಯಮ ಸಾಮಾನ್ಯ ಪ್ರಜ್ಞೆ ಹಾಗೂ ಪರಿಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಯಶಸ್ಸು ಕಾಣಬೇಕು ಎಂದರು. ಪೊಲೀಸ್ ವೃತ್ತ ನಿರೀಕ್ಷಕ ಬಾಲಾಜಿ ಸಿಂಗ್, ತಾಲೂಕು ಕನ್ನಡ ಸಾಹಿತ್ಯ ಪರಷತ್‌ನ ಗೋಪಾಲಕೃಷ್ಣ ಕಲ್ವಮಂಜರಿ, ಪ್ರಾಧ್ಯಾಪಕ ಪ್ರೊ. ಕೋಡಿರಂಗಪ್ಪ, ಬಿಜೆಪಿ ಮುಖಂಡ ಲಕ್ಷ್ಮೀ ನಾರಾಯಣ ಗುಪ್ತ, ಕಾಲೇಜಿನ ಅಧ್ಯಕ್ಷ ವೈ.ಎನ್. ರಾಮಚಂದ್ರ ರೆಡ್ಡಿ, ಅಶ್ವತ್ಥನಾರಾಯಣ ಹಾಗೂ ಪೋಷಕರು ಭಾಗವಹಿಸಿದ್ದರು.