ಸ್ಫೋಟಕ ಸಿಡಿದು ವ್ಯಕ್ತಿ ಸಾವು
ಅಕ್ರಮ ಕಲ್ಲು ಕ್ವಾರಿಯಲ್ಲಿ ನಡೆದ ಅನಾಹುತ
ಟೇಕಲ್: ಕಲ್ಲು ಬಂಡೆಗೆ ಸಿಡಿಮದ್ದು ಸಿಡಿಸುವಾಗ ಸ್ಥಳದಲ್ಲೆ ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ಇಬ್ಬರಿಗೆ ತೀವ್ರ ಗಾಯಗೊಂಡಿರುವ ಘಟನೆ ಸಮೀಪದ ಹಳೇಪಾಳ್ಯ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಬಂಗಾರಪೇಟೆ ತಾಲೂಕಿನ ಬಾಡಗೂರು ಗ್ರಾಮದ ನಾಗರಾಜು(40) ಮೃತ ವ್ಯಕ್ತಿಯಾಗಿದ್ದು ಗಾಯಗೊಂಡಿರುವ ಭುವನಹಳ್ಳಿ ಚಲಪತಿಯನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡಿರುವ ಮತ್ತೊಬ್ಬ ಆಂಧ್ರದ ಚಿತ್ತೂರು ಜಿಲ್ಲೆಯ ಚಿನ್ನಾಪುರ ಗ್ರಾಮದ ಜಾಫರ್‌ಗೆ ಕೋಲಾರದ ದೇವರಾಜ್ ಅರಸ್ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹಳೇಪಾಳ್ಯ ಸಮೀಪದ ಬೆಟ್ಟದ ತಪ್ಪಲಿನಲ್ಲಿ ಸ್ಫೋಟಕ ಸಿಡಿಸುತ್ತಿರುವಾಗ ಆಕಸ್ಮಿಕವಾಗಿ ಸಿಡಿದು ಬಂಡೆ ಅಂಚಿನಲ್ಲಿದ್ದ ಮೂವರಿಗೆ ಪೆಟ್ಟಾಗಿದೆ. ಈ ಬಂಡೆ ಇರುವ ಸ್ಥಳ ಅನಧೀಕೃತವಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ. ಈ ಭಾಗದಲ್ಲಿ ಬಂಡೆ ಉರುಳಿ ಈ ಹಿಂದೆ 3 ಪ್ರಕರಣಗಳಲ್ಲಿ 5ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಸ್ಥಳೀಯ ಪೊಲೀಸ್ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಮಾಸ್ತಿ ಪಿಎಸ್‌ಐ ಸಿದ್ದಪ್ಪ, ಉಪತಹಸೀಲ್ದಾರ್ ಶ್ರೀಧರ್, ರೆವೆನ್ಯೂ ಅಧಿಕಾರಿ ಶ್ರೀನಿವಾಸ್ ಭೇಟಿ ನೀಡಿದ್ದರು.
ಬೆದರಿಕೆ: ಹಳೇಪಾಳ್ಯ ಗ್ರಾಮಕ್ಕೆ ಸುದ್ದಿ ಮಾಡಲು ಹೋದ ಮಾಧ್ಯಮದವರಿಗೆ ಕೆಲವರು ಪೋಟೋ ತೆಗೆಯದಂತೆ ಬೆದರಿಕೆ ಹಾಕಿದರು.
ಮಿನಿ ಬಸ್, ಬೈಕ್ ಡಿಕ್ಕಿ: ಸವಾರ ಸಾವು
ಬಂಗಾರಪೇಟೆ: ಮಿನಿ ಬಸ್ಸು ಮತ್ತು ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರವಾಹನ ಚಾಲಕ ಸ್ಥಳದಲ್ಲಿಯೇ ಸಾವನಪ್ಪಿದ್ದು, ಹಿಂದೆ ಕುಳಿತಿದ್ದ ವ್ಯಕ್ತಿ ತೀವ್ರವಾಗಿ ಗಾಯಗೊಂಡು ಘಟನೆ ಸಂಭವಿಸಿದೆ.
ಶನಿವಾರ ರಾತ್ರಿ 11.30ಕ್ಕೆ ಹೊಸಕೋಟೆ ತಾಲೂಕಿನ ಬೀರೇಹಳ್ಳಿಯ ವೆಂಕಟಾಚಲಪತಿ(22), ಪ್ರಭಾಕರ್(22) ತಮ್ಮ ಸಂಬಂಧಿಕರ ಮದುವೆಗಾಗಿ ಬಂಗಾರಪೇಟೆಗೆ ಬಂದು, ಬಳಿಕ ತಮ್ಮ ಊರಿಗೆ ಮರಳುತ್ತಿದ್ದರು. ಆಗ ಪಟ್ಟಣದ ಜೈನ್ ಶಾಲೆ ಬಳಿ ಎದುರಿಂದ ಬಂದ ಟಾಟಾ ಮಿನಿ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರವಾಗಿ ಗಾಯಗೊಂಡ ವೆಂಕಟಾಚಲಪತಿ ಸ್ಥಳದಲ್ಲಿಯೇ ಮೃತಪಟ್‌ಟ್ಟ. ಹಿಂದೆ ಕುಳಿತ್ತಿದ್ದ ಪ್ರಭಾಕರ್ ಗಾಯಗೊಂಡು ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಂಗಾರಪೇಟೆ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಅಪಘಾದಲ್ಲಿ ವ್ಯಕ್ತಿ ಸಾವು
ಟೇಕಲ್: ಟ್ರ್ಯಾಕ್ಟರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ನಕ್ಕನಹಳ್ಳಿ ಶ್ರೀನಿವಾಸ್ (25) ಸ್ಥಳದಲ್ಲೆ ಮೃತಪಟ್ಟ ಘಟನೆ ನಾರಾಯಣಪುರ ಗೇಟ್ ಬಳಿ ನಡೆದಿದೆ.