ಗ್ರಾಮೀಣ ಸೇವೆ ಸಲ್ಲಿಸಿ: ಸಿಎಂ
ದೇವರಾಜ ಅರಸು ಕಾಲೇಜಿನಲ್ಲಿ ವೈದ್ಯರಿಗೆ ಮುಖ್ಯಮಂತ್ರಿ ಸೂಚನೆ
ಕನ್ನಡಪ್ರಭ ವಾರ್ತೆ, ಕೋಲಾರ, ಆ. 2
ರಾಜ್ಯ ಸರ್ಕಾರ ಹಳ್ಳಿಗಾಡಿನಲ್ಲಿ ಸೇವೆ ಸಲ್ಲಿಸುವ ವೈದ್ಯರಿಗೆ ಎಲ್ಲಾ ರೀತಿಯ ಸೌಕರ್ಯಗಳನ್ನು ಕಲ್ಪಿಸಲು ಸಿದ್ಧವಿದೆ. ಆದರೂ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿರುವ ವೈದ್ಯರು ಹಳ್ಳಿಗಳಲ್ಲಿ ಕೆಲಸ ಮಾಡಲು ಇಚ್ಛಿಸುತ್ತಿಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಷಾದಿಸಿದರು.
ನಗರದ ಶ್ರೀ ದೇವರಾಜ್ ಅರಸು ವೈದ್ಯಕೀಯ ಮಹಾವಿದ್ಯಾಲಯದ ರಜತ ಮಹೋತ್ಸವ ನೆನಪಿಗಾಗಿ ನಿರ್ಮಿಸಿರುವ ಸಭಾಂಗಣ, ಗ್ರಂಥಾಲಯ, ಮಾಹಿತಿ ತಂತ್ರಜ್ಞಾನ ಕೇಂದ್ರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ತಾವು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ರಾಜ್ಯದ ಎಲ್ಲಾ 30 ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಲು ಉದ್ದೇಶಿಸಿ ಈಗಾಗಲೇ 12 ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜಿನ ಸ್ಥಾಪನೆಯಾಗಿದೆ. ಇನ್ನುಳಿದ ಜಿಲ್ಲೆಗಳಲ್ಲೂ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸರ್ಕಾರ ಬದ್ಧವಾಗಿದೆ ಎಂದರು.
ರಾಜ್ಯದಲ್ಲಿನ 10 ವೈದ್ಯಕೀಯ ಕಾಲೇಜುಗಳು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿವೆ. ಕೆಲವು ಕಡೆ ಗುಣಮಟ್ಟದ ಕೊರತೆ ಇದೆ. ನಮ್ಮ ಸರ್ಕಾರದ ಉದ್ದೇಶ ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಕಲ್ಪಿಸಬೇಕೆಂಬುದು ಹಾಗೂ ಉತ್ತಮ ಆರೋಗ್ಯ ಸೇವೆ ನೀಡುವುದಾಗಿದೆ. ಅದಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ಸರ್ಕಾರದಿಂದಲೇ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲು ಮುಂದಾಗಿದ್ದೇವೆ ಎಂದರು.
ಸೌಲಭ್ಯ: ಹಳ್ಳಿಗಳಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುವವರನ್ನು ಜನತೆ ಪೂಜಿಸುತ್ತಾರೆ.
ಆನೇಕ ತಂದೆ ತಾಯಿಯರಿಗೆ ತಮ್ಮ ಮಕ್ಕಳನ್ನು ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಓದಿಸಬೇಕೆಂಬ ಆಸೆ ಇದೆ. ಇವರ ಕೋರಿಕೆ ಈಡೇರಿಸಲು ಸರ್ಕಾರ ಬದ್ಧವಾಗಿದೆ. ಆದರೆ, ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಲ್ಲಾ ಸೌಲಭ್ಯಗಳನ್ನು ಪಡೆದು ವ್ಯಾಸಂಗ ಮುಗಿಸಿದ ನಂತರ ಸರ್ಕಾರಿ ಆಸ್ಪತ್ರೆಗಳಲ್ಲಿ ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ರೋಗಿಗಳ ಸೇವೆಗೆ ಹಿಂದೇಟು ಹಾಕುತ್ತಿರುವುದು ವಿಪರ್ಯಸ ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ. ಖಾದರ್, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್, ಸಂಸದ ಕೆ.ಎಚ್. ಮುನಿಯಪ್ಪ ಮಾತನಾಡಿದರು. ಅಧ್ಯಕ್ಷತೆ ಮಾಜಿ ಸಚಿವ ಆರ್.ಎಲ್. ಜಾಲಪ್ಪ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ನಜೀರ್ ಅಹಮ್ಮದ್, ಉಗ್ರಪ್ಪ, ಶ್ರೀ ದೇವರಾಜ್ ಅರಸ್ ವೈದ್ಯಕೀಯ ಮಹಾವಿದ್ಯಾಲಯ ಕಾರ್ಯದರ್ಶಿ ಜಿ.ಎಚ್. ನಾಗರಾಜ್, ಪ್ರಥಮ ಕುಲಪತಿ ಡಾ. ಚಂದ್ರಶೇಖರ ಶೆಟ್ಟಿ, ಪ್ರಥಮ ಪ್ರಾಂಶುಪಾಲ ಡಾ. ಗುರುಪ್ರಸಾದ್ ಇದ್ದರು. ಕುಲಾಧಿಪತಿ ರಾಜೇಶ್ ಎನ್. ಜಗದಾಳೆ ಸ್ವಾಗತಿಸಿ, ಪ್ರಭಾರಿ ಕುಲಪತಿ ಡಾ.ಎಂ.ಬಿ. ಸಾಣಿಕೊಪ್ಪ ವರದಿ ವಚಿಸಿ, ಕುಲಸಚಿವ ಡಾ.ಎ.ವಿ. ಮೊಯಿದ್ದೀನ್ ಕುಟ್ಟಿ ವಂದಿಸಿದರು.
ರಾಜ್ಯದ ಎಲ್ಲಾ 30 ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಲು ಉದ್ದೇಶಿಸಿ ಈಗಾಗಲೇ 12 ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜಿನ ಸ್ಥಾಪನೆಯಾಗಿದೆ. ಇನ್ನುಳಿದ ಜಿಲ್ಲೆಗಳಲ್ಲೂ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸರ್ಕಾರ ಬದ್ಧವಾಗಿದೆ
ಸಿದ್ದರಾಮಯ್ಯ
ಮುಖ್ಯಮಂತ್ರಿ
ನೀರಿನ ಸಮಸ್ಯೆ: 9ರಂದು ಸಭೆ
ಕೋಲಾರ: ಅವಿಭಜಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯ ಸಂಬಂಧ ಆ.9 ರಂದು ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆಯನ್ನು ಕರೆಯಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕೋಲಾರಕ್ಕೆ ಶನಿವಾರ ಭೇಟಿ ನೀಡಿದ್ದ ಅವರು ಅಧಿಕಾರಿಗಳೊಂದಿಗೆ ಕುಡಿಯುವ ನೀರಿನ ವಿಚಾರವಾಗಿ ಚರ್ಚಿಸಿದ ಬಳಿಕ ಆ.9 ರಂದು ಕರೆದಿರುವ ಸಭೆಗೆ ಎರಡು ಜಿಲ್ಲೆಗಳ ಎಲ್ಲಾ ಶಾಸಕರು.ಸಂಸದರು ಭಾಗವಹಿಸಬೇಕೆಂದು ಸೂಚಿಸಿದರು.
ಅಂತರ್ಜಲ ಸಮಸ್ಯೆ: ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಸಮಸ್ಯೆ ಹೆಚ್ಚಿದೆ, ಪರ್ಯಾಯ ಯೋಜನೆಗಾಗಿ ಪ್ರಸ್ತಾವನೆ ಸಿದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಡಿ.ಕೆ.ರವಿ ತಿಳಿಸಿದಾಗ, ಇದಕ್ಕೆ ಸ್ಪಂಧಿಸಿದ ಸಿದ್ದರಾಮಯ್ಯನವರು, ಆ.9ರಂದು ಕರೆದಿರುವ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿ ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಮಳೆ ತಡೆವಾಗಿ ಬಂದರೂ ಎದೆಗುಂದಬೇಕಿಲ್ಲ. ರೈತರಿಗೆ ಬೇಕಾದ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಿ. ಜಾನುವಾರುಗಳಿಗೆ ಮೇವಿನ ತೊಂದರೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಾಮರಸ್ಯದ ಕೊರತೆ: ಕೋಲಾರ ಜಿಲ್ಲಾಧಿಕಾರಿ ಮತ್ತು ಎಸ್ಪಿಯ ನಡುವೆ ಸಾಮರಸ್ಯದ ಕೊರತೆ ನನ್ನ ಗಮನಕ್ಕೂ ಬಂದಿದೆ. ಜಿಲ್ಲೆಯ ಹಿತದೃಷ್ಟಿಯಿಂದ ಇಬ್ಬರು ಅಧಿಕಾರಿಗಳು ಪರಸ್ವರ ಸಹಕಾರ ಮನೋಭಾವನೆಯಿಂದ ಕೆಲಸ ಮಾಡಬೇಕು. ಜನರಿಗೆ ತೊಂದರೆ ಆದರೆ ಸಹಿಸುವುದಿಲ್ಲವೆಂದು ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿರುವ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿಗಳು, ಕನ್ನಡ ಮಾತನಾಡಲು ಬರುತ್ತದೆಯೇ ಎಂಬ ಪ್ರಶ್ನೆಗೆ ಎಸ್ಪಿ ಅಜಯ್ ಹೆಲೋರಿ ಸ್ಪಷ್ಟವಾಗಿ ಮಾತನಾಡಲು ಬರೋದಿಲ್ಲ ಎಂದಾಗ, ಎಷ್ಟು ವರ್ಷದಿಂದ ಕರ್ನಾಟಕದಲ್ಲಿ ಇದ್ದೀರಾ ಎಂಬ ಮುಖ್ಯಮಂತ್ರಿಗಳ ಮರುಪ್ರಶ್ನೆಗೆ ಮೂರೂವರೆ ವರ್ಷ ಎಂದರು.
ಕನ್ನಡ ಕಲಿಯಿರಿ: ಇದರಿಂದ ಅಸಮಾಧಾನಗೊಂಡ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವುದರಿಂದ ನೀವು ಕನ್ನಡ ಭಾಷೆ ಕಲಿಯಬೇಕು. ಇದರಿಂದ ಜನತೆ ಮತ್ತು ನಿಮ್ಮ ನಡುವೆ ಉತ್ತಮ ಬಾಂಧವ್ಯ ವೃದ್ಧಿಸುತ್ತದೆ ಎಂದು ತಾಕೀತು ಮಾಡಿದರು. ಉಸ್ತುವಾರಿ ಸಚಿವ ಯು.ಟಿ. ಖಾದರ್, ಸಂಸದ ಕೆ.ಎಚ್. ಮುನಿಯಪ್ಪ, ವಿಧಾನ ಪರಿಷತ್ ಸದಸ್ಯರಾದ ನಜೀರ್ ಅಹಮದ್ ಇದ್ದರು.
ನಾನು ಡಾಕ್ಟರ್ ಆಗಿದ್ದರೆ ರಾಜಕಾರಣಕ್ಕೆ ಬರುತ್ತಿರಲಿಲ್ಲ
ಕೋಲಾರ: ನಮ್ಮಪ್ಪನಿಗೆ ನಾನು ಡಾಕ್ಟರ್ ಆಗಬೇಕೆಂಬ ಆಸೆ ಇತ್ತು. ನನಗೂ ಅದೇ ಆಸೆ ಇತ್ತು. ಒಂದು ವೇಳೆ ನಾನು ಡಾಕ್ಟರ್ ಆಗಿದ್ದರೆ ರಾಜಕಾರಣಕ್ಕೆ ಬರುತ್ತಿರಲಿಲ್ಲ.
ಇದು ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮನದಾಳದ ಮಾತು. ನಗರದ ದೇವರಾಜ್ ಅರಸ್ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವೈದ್ಯನಾಗಲು ಕಂಡಿದ್ದ ಕನಸಿನ ಬಗ್ಗೆ ವಿವರಿಸಿದರು.
ಬಿಎಸ್ಸಿ, ಎಂಎಸ್ಸಿ ಮುಗಿಸಿದ ನಾನು ಕಡೆಗೆ ಲಾಯರ್ ಆಗಿ ರಾಜಕಾರಕ್ಕೆ ಬಂದೆ. ನಾನು ವೈದ್ಯನಾಗದಿದ್ದರೆನಂತೆ ನನ್ನ ಮಗನೊಬ್ಬ ಡಾಕ್ಟರ್ ಆಗಿದ್ದಾನೆ. ಅದರಿಂದ ನನಗೆ ಸಂತೋಷವಾಗಿದೆ ಎಂದರು.
ಎಲ್ಲರು ವೈದ್ಯರು, ಎಂಜನಿಯರ್ ಆಗಬೇಕೆಂದೆನಿಲ್ಲ, ಸಮತೋಲನ ಕಾಪಾಡಿಕೊಳ್ಳಲು ಬೇರೆ ಪದವಿಗಳನ್ನು ಮಾಡಿ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸುವ ಗುರಿಯನ್ನು ಹೊಂದಬೇಕೆಂದರು. ಆರ್.ಎಲ್. ಜಾಲಪ್ಪ ಮತ್ತು ನನ್ನ ನಡುವೆ 31 ವರ್ಷಗಳ ಸಂಬಂಧವಿದೆ. ನೆರ ನಡೆ ನುಡಿಯ ವ್ಯಕ್ತಿ. ಹಿಂದುಳಿದವರಿಗೆ ವೈದ್ಯಕೀಯ ಕಾಲೇಜು ಬೇಕೆಂಬ ಪ್ರಸ್ತಾವನೆಯನ್ನು ಸರ್ಕಾರದ ಮುಂದೆ ಇಟ್ಟಾಗ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಕೋಲಾರದಲ್ಲಿ ದೇವರಾಜ್ ಅರಸ್ ವೈದ್ಯಕೀಯ ಕಾಲೇಜು ಸ್ತಾಪಿಸಲು ಅನುಮತಿ ನೀಡಿದರೆಂದು ಸ್ಮರಿಸಿಕೊಂಡರು.
ದೇವರಾಜ್ ಅರಸ್ ವಿದ್ಯಾ ಸಂಸ್ಥೆಯ ಟ್ರಸ್ಟಿಗಳಲ್ಲಿ ನಾನು ಒಬ್ಬನಾಗಿದ್ದೆ. ನಾನೇನು ಟ್ರಸ್ಟಿ ಆಗಲು ಅರ್ಜಿ ಹಾಕಿರಲಿಲ್ಲ. ಜಾಲಪ್ಪನವರು ನನ್ನ ಮೇಲೆ ಪ್ರೀತಿ, ವಿಶ್ವಾಸವಿಟ್ಟು ಟ್ರಸ್ಟಿಯನ್ನಾಗಿ ಮಾಡಿ ಅವರೇ ನನ್ನ ಹೆಸರಿನಲ್ಲಿ 5 ಸಾವಿರ ರು. ಷೇರು ಹಣವನ್ನು ಕಟ್ಟಿದ್ದಾರೆ. ಟ್ರಸ್ಟಿನ ಕೆಲಸವನ್ನು ನಿರಂತರವಾಗಿ ಮಾಡಲು ಆಗದಿದ್ದರಿಂದ ಟ್ರಸ್ಟಿನಿಂದ ಹೊರ ಬರಬೇಕಾಯಿತು ಎಂದು ತಿಳಿಸಿದರು.