ಆದಿಮ ಅಂಗಳದಲ್ಲಿ 100ನೇ ಹುಣ್ಣಿಮೆ ಜಾತ್ರೆ 10ರಂದು
ಕೋಲಾರ: ಆದಿಮ ಅಂಗಳದಲ್ಲಿ 100ನೇ ಹುಣ್ಣಿಮೆ ಜಾತ್ರೆಯನ್ನು ಆ. 10ರಂದು ಸಾಹಿತಿ ಡಾ.ದೇವನೂರು ಮಹಾದೇವ ಉದ್ಘಾಟಿಸಲಿದ್ದಾರೆ ಎಂದು ಆದಿಮ ಸಂಸ್ಥಾಪಕ ಅಧ್ಯಕ್ಷ ಕೋಟಿಗಾನಹಳ್ಳಿ ರಾಮಯ್ಯ ತಿಳಿಸಿದರು.
ರಂಗ ಪ್ರಯೋಗಗಳ ಮೂಲಕ ದೇಸೀ ಮೌಲ್ಯಗಳನ್ನು ರೂಡಿಸಿಕೊಂಡು ಒಂಟಿತನ ಮತ್ತು ಪರಾವಲಂಭಿತನದಿಂದ ಹೊರಗೆ ಬಂದು ಮನುಷ್ಯ ಪ್ರೀತಿಯ ನೆಲೆಯನ್ನು ಕಂಡುಕೊಳ್ಳಲು ಹಾಗೂ ಮಕ್ಕಳ ಮನಸ್ಸು, ನೋಟ, ಅನುಭವಗಳನ್ನು ವಿಸ್ತಾರಗೊಳಿಸಲು ಇದುವರೆಗೂ ಆದಿಮ ಜಿಲ್ಲೆಯ ಸಾಂಸಕ್ಕೃತಿಕ ನೆಲೆಯಿಂದ ನಡೆಸಿದ ಅನುಸಂಧಾನ ಜಾಗತಿಕವಾಗಿ ಗಮನಸೆಳೆದಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.
100ನೇ ಹುಣ್ಣಿಮೆ ಜಾತ್ರೆ: ಆದಿಮ ತನ್ನ 99 ಹುಣ್ಣಿಮೆ ಹಾಡುಗಳಲ್ಲಿ ತಳಹದಿ ಹಾಕಿಕೊಟ್ಟಿದೆ.100 ಹುಣ್ಣಿಮೆಗಳನ್ನು ಕಾಣುತ್ತಿರುವ ಆದಿಮ, ಚುಕ್ಕಿ ಮೇಳ ಹಾಗೂ ಹುಣ್ಣಿಮೆ ಹಾಡು ಎಂಬ ಎರಡು ಪಾದಗಳಲ್ಲಿ ತನ್ನ ಸಾಂಸ್ಕೃತಿಕ ವಿಸ್ತಾರತೆಯನ್ನು ಪಸರಿಸುವ ಮೂಲಕ ಇದೀಗ 100ನೇ ಹುಣ್ಣಿಮೆ ಜಾತ್ರೆಗೆ ಅಣಿಯಾಗಿದೆ ಎಂದು ಹೇಳಿದರು.
ಆ.10ರಂದು ಬೆಳಿಗ್ಗೆ 9ಗಂಟೆಯಿಂದ ಸತತ 24 ಗಂಟೆಗಳು ಈ ಜಾತ್ರೆ ನಡೆಯಲಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ, ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಲೋಕಸಭಾ ಸದಸ್ಯ ಕೆ.ಹೆಚ್.ಮುನಿಯಪ್ಪ, ಶಾಸಕ ವರ್ತೂರು ಪ್ರಕಾಶ್, ಜಾನಪದ ಅಕಾಡೆಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್ ಹಾಗೂ ಶಿಕ್ಷಣ ತಜ್ಞ ಶ್ರೀರಾಮರೆಡ್ಡಿ ಭಾಗವಹಿಸುವರು. ಗೋಷ್ಠಿಯಲ್ಲಿ ಎನ್.ಮುನಿಸ್ವಾಮಿ, ಹಾ.ಮಾ.ರಾಮಚಂದ್ರ, ಕೊಮ್ಮಣ್ಣ, ಡಿ.ಆರ್.ರಾಜಪ್ಪ, ಕೆ.ಆರ್.ಧನರಾಜ್ ಇದ್ದರು.