ಘಟನೆ ನಡೆದ 4 ತಿಂಗಳಿಗೆ ತನಿಖೆ ನಡೆಸಿದ ಅಧಿಕಾರಿ!
ಬಾಗೇಪಲ್ಲಿ: ತಾಲೂಕಿನ ಪರಗೋಡು ಗ್ರಾಪಂ ವ್ಯಾಪ್ತಿಯ ಪೂಲವಾರಿಪಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ನೀಡಿರುವ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲು ಶಾಲೆಯ ವಾರ್ಡನ್ ಹಾಗೂ ಸಿಬ್ಬಂದಿ ಆಟೋದಲ್ಲಿ ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಡಾ. ನಾಗರಾಜಪ್ಪ ರನ್ನು ತರಾಟೆಗೆ ತೆಗೆದುಕೊಂಡರು.
ಮಾಲು ಸಮೇತ ಹಿಡಿದುಕೊಟ್ಟು 4 ತಿಂಗಳು ಕಳೆದರೂ ವಾರ್ಡನ್ ವಿರುದ್ಧ ಏಕೆ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿರುವುದು ಎಂದು ಪ್ರಶ್ನಿಸಿದರು. ಗೋದಾಮಿನಲ್ಲಿ ಹಾಕಿದ್ದ ಆಹಾರ ಪದಾರ್ಥಗಳ ಮಹಜರ್ ಮಾಡಲು ನಾಗರಾಜಪ್ಪ ಆಗಮಿಸಿದ್ದರು. ಆ ಸಂದರ್ಭದಲ್ಲಿ ಜನರು ಮುತ್ತಿಕೊಂಡು ಪ್ರಶ್ನೆ ಕೇಳಿ ಕಕ್ಕಾಬಿಕ್ಕಿಯಾಗುವಂತೆ ಮಾಡಿದರು.
ಇಂತಹ ಘಟನೆ ನಡೆದ ತಕ್ಷಣ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸಿ ತಪ್ಪು ನಡೆದಿರುವುದು ಕಂಡಬಂದ ತಕ್ಷಣ ಸ್ಥಳದಲ್ಲಿಯೇ ಸೂಕ್ತ ಕ್ರಮ ಜರುಗಿಸಬೇಕಾಗಿತ್ತು. ಆದರೆ ಮಾಲು ಸಮೇತ ಹಿಡಿದು 4 ತಿಂಗಳು ಕಳೆದ ನಂತರ ಆಹಾರ ಪದಾರ್ಥಗಳ ಮಹಜರ್ ನಡೆಸಲು ಅಧಿಕಾರಿ ಬಂದಿರುವುದು ಏತಕ್ಕೆ ಎಂದು ವ್ಯಂಗ್ಯವಾಡಿದರು. 4 ತಿಂಗಳ ಹಿಂದೆ ಗೋದಾಮಿನಲ್ಲಿ ಆಹಾರ ಪದಾರ್ಥಗಳನ್ನು ಇರಿಸಿರುವುದರಿಂದ ಹುಳ ಬಿದ್ದು ಹಾಳಾಗಿರುವುದನ್ನು ಕಂಡು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಸಮಾಜಕಲ್ಯಾಣಾಧಿಕಾರಿ, ಇನ್ನು ಒಂದು ವಾರದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಇದಕ್ಕೆ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಸರ್ಕಾರದ ವೇಳಾಪಟ್ಟಿಯಂತೆ ಆಹಾರ ಪದಾರ್ಥ ವಿತರಿಸಿಲ್ಲ ಎಂದು ವಸತಿ ಶಾಲಾ ಮಕ್ಕಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.
ಜಿಪಂ ಸದಸ್ಯೆ ಬಿ. ಸಾವಿತ್ರಮ್ಮ ಮಾತನಾಡಿ, ವಸತಿ ಶಾಲೆಯ ವಾರ್ಡನ್ ಹಾಗೂ ಸಿಬ್ಬಂದಿ ಅಕ್ರಮವಾಗಿ ಸಾಗಿಸುತ್ತಿದ್ದ ಆಹಾರ ಪದಾರ್ಥಗಳನ್ನು ಗ್ರಾಮಸ್ಥರು ಹಿಡಿದುಕೊಟ್ಟಿದ್ದರು. ಅದೇ ದಿನ ಮೊಬೈಲ್ನಲ್ಲಿ ವಿಷಯ ತಿಳಿಸಿದ್ದೇನೆ. ವಿಷಯದ ಬಗ್ಗೆ ಜಿಪಂ ಸಭೆಯಲ್ಲಿ ಪ್ರಸ್ತಾಪಿಸಿದ್ದೇನೆ. ಆದರೆ ಅಧಿಕಾರಿಗಳಿಂದ ಯಾವುದೇ ಉತ್ತರ ಬಂದಿಲ್ಲ. ಸರ್ಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಲಕ್ಷಾಂತರ ರು.ಗಳ ಹಣ ಖರ್ಚು ಮಾಡುತ್ತಿದೆ. ಆದರೆ ಅಧಿಕಾರಿಗಳು ಹಾಗೂ ವಸತಿ ಶಾಲೆಯ ಮೇಲ್ವಿಚಾರಕರ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ವಿತರಿಸುತ್ತಿಲ್ಲ ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಡಾ. ನಾಗರಾಜ್ ವಿರುದ್ಧ ಗರಂ ಆದರು. ಗ್ರಾಮಸ್ಥರಾದ ಪಿ.ಆರ್.ದೇವರಾಜು, ಎ. ರಾಮಚಂದ್ರಪ್ಪ, ಶ್ರೀನಿವಾಸ್, ನಾರಾಯಣಸ್ವಾಮಿ, ಲೋಕೇಶ್, ಆನಂದ್, ಮದುರಾಜು, ಹನುಮಂತಪ್ಪಸ್ವಾಮಿ ಇದ್ದರು.