ಧರ್ಮ ಕಾರ್ಯದಿಂದ ಏಕಾಗ್ರತೆ
ಚಿಕ್ಕಬಳ್ಳಾಪುರ: ಧಾರ್ಮಿಕ ಕಾರ್ಯಗಳಿಂದ ಚಂಚಲ ಮನಸ್ಸಿನ ನಿಯಂತ್ರಣ ಸಾಧಿಸಬಹುದು ಎಂದು ಪ್ರವಚನಕಾರ ತಳಗವಾರ ಟಿ.ಎಲ್ .ಆನಂದ್ ಅಭಿಪ್ರಾಯಪಟ್ಟರು.
ತಾಲೂಕಿನ ಯಾತ್ರಾಸ್ಥಳ ರಂಗಸ್ಥಳದ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ರಾಜು ಕ್ಷತ್ರಿಯ ವಟುಗಳ ಸಾಮೂಹಿಕ ಉಪನಯನ ಮಹೋತ್ಸವದಲ್ಲಿ ಉಪನಯನದ ಮಹತ್ವ ವಿಷಯವಾಗಿ ಉಪನ್ಯಾಸ ನೀಡಿ, ಗಾಯತ್ರಿ ಮಂತ್ರ 24 ಅಕ್ಷರಗಳಿಂದ ಕೂಡಿದ್ದು ಒಂದೊಂದು ಅಕ್ಷರ ಬೀಜಾಕ್ಷರವಾಗಿದೆ. ಒಂಬತ್ತು ಎಳೆಗಳಿಂದ ಮೂರು ಸುತ್ತುಗಳುಳ್ಳ ತಂತು ವಿಶೇಷವೇ ಯಜ್ಞೋಪವೀತ ಎಂದರು.
ತಾನೂ ಉದ್ದಾರವಾಗಿ, ಪರೋಪಕಾರಿಯಾಗಿ, ಸತ್ಪ್ರಜೆಯಾಗಿ ಬದುಕಿ ಜೀವನ ಸಾರ್ಥಕಪಡಿಸಿಕೊಳ್ಳಬೇಕು. ಹರೆಯ ಮುಗಿದು ವೃದ್ಧಾಪ್ಯ ಆವರಿಸಿದಾಗ ತನ್ನ ಕಳೆದ ಜೀವನವನ್ನು ಅವಲೋಕಿಸಿದಾಗ ತೃಪ್ತಿ ತಂದರೆ ಸಾಕು, ಅದೇ ಶ್ರೇಷ್ಠತೆ ಎಂದರು.
ಕಾರ್ಯಕ್ರಮದಲ್ಲಿ ಸುಮಾರು 40 ಕ್ಷತ್ರಿಯ ವಟುಗಳಿಗೆ ಉಪನಯನವನ್ನು ಉಚಿತವಾಗಿ ಸಂಘದ ವತಿಯಿಂದ ನೆರವೇರಿಸಲಾಯಿತು. ಆರ್. ವೆಂಕಟಾಚಲರಾಜು, ಕಾಂತರಾಜು, ಲಕ್ಷಣರಾಜು, ಜಿ.ಎನ್. ಲಕ್ಷ್ಮೀಪತಿ, ಆನಂದರಾಜು, ಶಿಕ್ಷಣ ಇಲಾಖೆಯ ಕೆ.ಎನ್. ರಾಮಚಂದ್ರ, ಪುರೋಹಿತ ವೆಂಕಟೇಶ್ ಇದ್ದರು.