ವಿದ್ಯಾರ್ಥಿಗಳು ಸಂಸ್ಕಾರವಂತರಾಗಿ
ಕೋಲಾರ: ಶಿಕ್ಷಣ ಕೇವಲ ಉದ್ಯೋಗಕ್ಕಾಗಿ ಮಾತ್ರ ಸಿಮೀತವಾಗಬಾರದು ವಿದ್ಯಾವಂತರಾಗಿ ದೇಶಕ್ಕೆ ಉತ್ತಮ ಸೇವೆ ಮಾಡಲು ಬಳಕೆ ಆಗಬೇಕೆಂದು ಬೆಂಗಳೂರಿನ ಆಯುರ್ ಆಶ್ರಮದ ಡಾ. ವಿದ್ಯಾವಾಚಸ್ವತಿ ವಿಶ್ವ ಸಂತೋಷ ಭಾರತಿ ಶ್ರೀಪಾದರು ತಿಳಿಸಿದರು.
ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಭಾನುವಾರ ನಡೆದ ಆದರ್ಶ ಸಮಾಜ ಸೇವಾ ಪ್ರತಿಷ್ಠಾನದ 28ನೇ ವಾರ್ಷಿಕೋತ್ಸವದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಯುವಕರು ದೇಶದ್ರೋಹದ ಚಟುವಟಿಕೆಯಲ್ಲಿ ತೊಡಗಬಾರದು. ಸಮಾಜಕ್ಕೆ ಉಪಕಾರ ಮಾಡದಿದ್ದರೂ ಅಪಕಾರ ಮಾಡಬೇಡಿ. ಜಾತಿ, ಕೋಮು ಭಾವನೆ ಬಿಟ್ಟು ಮನುಷ್ಯರಾಗಿ ಸಾರ್ಥಕ ಬದುಕು ನಡೆಸಿ ಎಂದು ಸಲಹೆ ನೀಡಿದರು.
ಇತ್ತೀಚಿಗೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವವರು ಚೆನ್ನಾಗಿ ಓದಿರುವವರೇ ಆಗಿದ್ದಾರೆ. ಅಂದರೆ ಶಿಕ್ಷಣ ನಮಗೆ ಏನನ್ನು ಕಲಿಸುತ್ತಿದೆ ಎಂಬುದು ಪ್ರಶ್ನಾರ್ಹ ವಿಷಯ. ವಿದ್ಯಾರ್ಥಿಗಳು ಹಾಗೂ ಯುವಜನತೆ, ಸಂಸ್ಕಾರ, ಸಂಪ್ರದಾಯ, ಆದರ್ಶಗಳನ್ನು ಬೆಳೆಸಿಕೊಂಡು ಸಮಾಜಕ್ಕೆ ಮಾರ್ಗದರ್ಶಿಗಳಾಗಿ ಎಂದು ಕಿವಿ ಮಾತು ಹೇಳಿದರು.
ಇಂದು ಯುವಜನತೆಯಲ್ಲಿ ಖಿನ್ನತೆ ಹೆಚ್ಚಾಗುತ್ತಿದೆ. ವಿವಾಹಿತರಲ್ಲಿ ಶೇ.30ರಷ್ಟು ಮಂದಿಯಲ್ಲಿ ಸಂತಾನ ಶಕ್ತಿ ಕಡಿಮೆ ಆಗುತ್ತಿದೆ. ಅತಿಯಾದ ಮೊಬೈಲ್ ಬಳಕೆ, ಕಂಪ್ಯೂಟರ್, ಕ್ರಿಮಿನಾಶಕ, ರಾಸಾಯನಿಕ ವಸ್ತುಗಳನ್ನು ಬಳಸಿದ ಆಹಾರ ಸೇವನೆಯೇ ಇದಕ್ಕೆ ಕಾರಣ ಎಂದು ಎಚ್ವರಿಕೆ ನೀಡಿದರು.
ರಾಜ್ಯಕ್ಕೆ ಒಕ್ಕಲಿಗರ ಸಂಘದ ನಿರ್ದೇಶಕ ಯಲುವಳ್ಳಿ ಎನ್. ರಮೇಶ್, ನಗರಸಭೆ ಅಧ್ಯಕ್ಷ ಬಿ.ಎಂ. ಮುಬಾರಕ್ ಮಾತನಾಡಿದರು. ಡಾ.ಎ.ಎಂ.ಜೆ ಮೌನಿ, ಕೆ.ಜಿ. ಬಾಬು ಮೌನಿ, ರಾಮಚಂದ್ರಪ್ಪ, ಲಕ್ಷ್ಮಣ್, ನಾರಾಯಣಗೌಡ, ಶಂಕರೇಗೌಡ, ಶರಣಪ್ಪ ಗಬ್ಬೂರು, ಸುಲೇಮಾನ್ ಖಾನ್ ಇದ್ದರು.
ಹಿರಿಯ ಕ್ರೀಡಾಪಟು ಮೂರಾಂಡಹಳ್ಳಿ ಮಾರಪ್ಪ, ರಂಗಭೂಮಿ ಕಲಾವಿದ ಮದ್ದೇರಿ ಮುನಿರೆಡ್ಡಿ ಸೇರಿದಂತೆ ವಿವಿಧ ಕ್ಷೇತ್ರದಲ್ಲಿನ ಸಾಧಕರಿಗೆ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ವಿದ್ಯಾರ್ಥಿಗಳು ಮತ್ತು ಯುವಕರು ದೇಶದ್ರೋಹದ ಚಟುವಟಿಕೆಯಲ್ಲಿ ತೊಡಗಬಾರದು. ಸಮಾಜಕ್ಕೆ ಉಪಕಾರ ಮಾಡದಿದ್ದರೂ ಅಪಕಾರ ಮಾಡಬೇಡಿ. ಜಾತಿ, ಕೋಮು ಭಾವನೆ ಬಿಟ್ಟು ಮನುಷ್ಯರಾಗಿ ಸಾರ್ಥಕ ಬದುಕು ನಡೆಸಿ
ಡಾ. ವಿದ್ಯಾವಾಚಸ್ವತಿ ವಿಶ್ವ ಸಂತೋಷ ಭಾರತಿ ಶ್ರೀಪಾದರು