ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಮಸ್ಯೆ ಪರಿಹರಿಸಿ, ಸಂಘಟನೆ ಬಲಗೊಳಿಸಿ

Srinivasa Murthy VN
Updated On : 3 Aug 2014, 11:53 am

ಕೋಲಾರ: ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅವರ ನಂಬಿಕೆ ಉಳಿಸಿಕೊಂಡು ಸಂಘಟನೆಯನ್ನು ಬಲಗೊಳಿಸಿ ಎಂದು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಪದಾಧಿಕಾರಿಗಳಿಗೆ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಕೆ.ಎನ್. ಮಂಜುನಾಥ್ ಕರೆ ನೀಡಿದರು.
ನೌಕರರ ಭವನದಲ್ಲಿ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ಆಯ್ಕೆಯಾದ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಅವರು ಮಾತನಾಡುತ್ತಿದ್ದರು. ಶಿಕ್ಷಕರು ವೇತನ ತಾರತಮ್ಯ ಸೇರಿದಂತೆ ಹಲವಾರು ಸಮಸ್ಯೆಗಳ ಸುಳಿಯಲ್ಲಿದ್ದಾರೆ. ಅವರ ನಾಯಕತ್ವ ವಹಿಸಿದವರು, ಅವರ ಸೇವೆಗೆ ಸದಾ ಸಿದ್ಧರಾಗಿರಬೇಕು. ನೌಕರರ ಸಂಘ ಈಗಾಗಲೇ ಶಿಕ್ಷಕರ ಸಮಸ್ಯೆಗಳ ನಿವಾರಣೆಗೆ ಸರ್ಕಾರದ ಮೇಲೆ ಒತ್ತಡ ಹಾಕಿದೆ ಎಂದರು.
ಪ್ರಾಮಾಣಿಕ ಕಾರ್ಯ: ಸಹ ಶಿಕ್ಷಕರ ಸಂಘದ ನೂತನ ಅಧ್ಯಕ್ಷ ಶಂಕರಪ್ಪ, ಮತ ನೀಡಿದ ಶಿಕ್ಷಕರ ಋಣ ತೀರಿಸಲು, ತಾವು ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ತಿಳಿಸಿದರು. ಸಮಸ್ಯೆಗಳನ್ನು ತಿಳಿಸಿದರೆ ಅವರ ನೆರವಿಗೆ ಸದಾ ನಿಂತಿರುವುದಾಗಿಯೂ ತಿಳಿಸಿದರು.
ಸಹಮತ: ಇದೇ ಸಂದರ್ಭದಲ್ಲಿ ಶಿಕ್ಷಕರ ಸಂಘದ ಗೌರವಾಧ್ಯಕ್ಷರನ್ನಾಗಿ ಕೆಂಬೋಡಿಯ ಮುನಿವೆಂಕಟಪ್ಪರ ಹೆಸರನ್ನು ಘೋಷಿಸಿದ ನೂತನ ಅಧ್ಯಕ್ಷರು, ಎಲ್ಲರ ಸಹಮತ ಪಡೆದು ಕಾರ್ಯಕ್ರಮ ರೂಪಿಸುವುದಾಗಿ ತಿಳಿಸಿದರು. ಜಿಲ್ಲೆಯ ಇಬ್ಬರು ವಿಧಾನಪರಿಷತ್ ಸದಸ್ಯರಾದ ವೈ.ಎ. ನಾರಾಯಣ ಸ್ವಾಮಿ ಹಾಗೂ ಚೌಡರೆಡ್ಡಿ ಅವರು ಶಿಕ್ಷಕರ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿದ್ದು, ಸಮಸ್ಯೆಗಳ ಪರಿಹಾರಕ್ಕೆ ಅವರ ಸಹಕಾರ ಪಡೆದುಕೊಳ್ಳಲಾಗುವುದೆಂದರು.
  ಜಿಲ್ಲಾ ನೌಕರರ ಸಂಘದ ಶಿಕ್ಷಕರ ಪ್ರತಿನಿಧಿ ಮುರಳಿ ಮೋಹನ್, ಪ್ರತಿನಿಧಿ ಚೌಡಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ ಜೆ.ಜಿ. ನಾಗರಾಜ್, ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ್, ಪಿಯು ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಟಿ.ಕೆ. ನಟರಾಜ್, ಕಾರ್ಯದರ್ಶಿ ನಾಗಾನಂದ್, ಶಿಕ್ಷಕರ ಸಂಘದ ಕೋಲಾರ ತಾಲೂಕು ಅಧ್ಯಕ್ಷ ಡಿ.ಎನ್. ಮುಕುಂದ ಇದ್ದರು. ಸಹ ಶಿಕ್ಷಕರ ಸಂಘದ ನೂತನ ಕಾರ್ಯದರ್ಶಿ ಕೆ.ಎಂ. ಮೋಹನಾಚಾರಿ, ಉಪಾಧ್ಯಕ್ಷ ಜಿ.ಎನ್. ದೇವಿರೆಡ್ಡಿ, ಸಹ ಕಾರ್ಯದರ್ಶಿ ಎಂ.ಆರ್. ಜಯಂತಿ, ಖಚಾಂಚಿ ಎನ್. ರವೀಂದ್ರನಾಥ್, ಸಂಘಟನಾ ಕಾರ್ಯದರ್ಶಿ ಜಿ. ಮಾಲತೇಶ್ ಅಧಿಕಾರ ಸ್ವೀಕರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement