ಹೆಚ್ಚು ರಕ್ತ ಸಂಗ್ರಹಿಸಿದ ಚಿಕ್ಕಬಳ್ಳಾಪುರ ಜಿಲ್ಲೆ
ಬಾಗೇಪಲ್ಲಿ: ರಾಜ್ಯದಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆ ರಕ್ತ ಸಂಗ್ರಹಣೆಯಲ್ಲಿ ಮೊದಲ ಸ್ಥಾನದಲ್ಲಿದ್ದು ಈ ಸ್ಥಾನವನ್ನು ಉಳಿಸಿಕೊಳ್ಳಲು ಅಧಿಕಾರಿಗಳು, ಜನರು ಹಾಗೂ ಸಂಘ ಸಂಸ್ಥೆಗಳ ಸಹಕಾರ ಅಗತ್ಯ ಎಂದು ಜಿಲ್ಲಾ ರೆಡ್ ಕ್ರಾಸ್ ಪ್ರಧಾನ ಕಾರ್ಯದರ್ಶಿ ನಾರಾಯಣಚಾರ್ ಅಭಿಪ್ರಾಯಪಟ್ಟರು. ಪಟ್ಟಣದ ತಾಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ರೆಡ್ ಕ್ರಾಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯನ್ನು ಆರ್ಥಿಕವಾಗಿ ಬಲಪಡಿಸಲು ದಾನಿಗಳು ಮುಂದೆ ಬರಬೇಕೆಂದರು.
ರೆಡ್‌ಕ್ರಾಸ್ ಕಾರ್ಯದರ್ಶಿ ಎ.ಜಿ. ಸುಧಾಕರ್ ಮಾತನಾಡಿ, ಇಡೀ ಜಿಲ್ಲೆಯಲ್ಲಿಯೇ ಹೆಚ್ಚಿನ ರಕ್ತದಾನ ಕಾರ್ಯಕ್ರಮಗಳನ್ನು ತಾಲೂಕಿನಲ್ಲಿ ನಡೆಸಲಾಗಿದೆ. ಕಳೆದ ವರ್ಷ 638 ಯೂನಿಟ್ ರಕ್ತ ಸಂಗ್ರಹಣೆ ಮಾಡಲಾಗಿದೆ. ಜತೆಗೆ ನೇತ್ರ ಪರೀಕ್ಷಾ ಶಿಬಿರದಲ್ಲಿ 945 ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ 448 ರೋಗಿಗಳು ಪ್ರಯೋಜನ ಪಡೆದಿದ್ದಾರೆ ಹಾಗೂ ಏಡ್ಸ್, ವಿಕಲಚೇತನರ ಆರೋಗ್ಯ ಶಿಬಿರಗಳನ್ನು ಹೆಚ್ಚಾಗಿ ಹಮ್ಮಿಕೊಳ್ಳಲಾಗಿತ್ತು. ರೆಡ್ ಕ್ರಾಸ್ ಸಂಸ್ಥೆಯಿಂದ ಈವರೆಗೂ 250 ಮಹಿಳೆಯರ ಪ್ರಾಣ ರಕ್ಷಿಸಲಾಗಿದೆ. ಉಳಿದಂತೆ ಜಿಲ್ಲೆಯ ಇತರೆ ತಾಲೂಕುಗಳು ಮಹಾಪೋಷಕ ಸದಸ್ಯತ್ವನ್ನು ಮಾಡಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಹಾಗೂ ರೆಡ್ ಕ್ರಾಸ್ ಅಧ್ಯಕ್ಷ ಎಂ. ನಾಗರಾಜ್, ತಾಪಂ ಕಾರ್ಯನಿರ್ವಹಣಾಧಿಕಾರಿ ಸಿ. ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ವೆಂಕಟೇಶ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಎಲ್. ನಾಗರಾಜರಾವ್, ಆಹಾರ ವಿಭಾಗದ ಶಿರಸ್ತೆದಾರ್ ಜಿ.ಟಿ. ಮುನಿಕೃಷ್ಣಪ್ಪ, ನಿರೀಕ್ಷಕ ಎಂ.ನರಸಿಂಹಮೂರ್ತಿ, ತಾಪಂ ವ್ಯವಸ್ಥಾಪಕಿ ಲಕ್ಷ್ಮೀದೇವಮ್ಮ ಇದ್ದರು.