ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಎಸ್ಎಸ್ಎಲ್ಸಿ ಅಗ್ರಶ್ರೇಣಿ ಹೆಚ್ಚಳಕ್ಕೆ ಪ್ರಯತ್ನ

Srinivasa Murthy VN
Updated On : 9 Feb 2014, 11:54 am

ಕೋಲಾರ: ಎಸ್ಎಸ್ಎಲ್ಸಿ ಫಲಿತಾಂಶ ಉತ್ತಮ ಪಡಿಸುವ ಜತೆಗೆ ಅಗ್ರಶ್ರೇಣಿ ಪಡೆದವರ ಸಂಖ್ಯೆ ಹೆಚ್ಚಳದ ಮೂಲಕ ಜಿಲ್ಲೆ ಗುಣಾತ್ಮಕ ಸಾಧನೆಗೆ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿ ಮತ್ತು ಕಲಿಕಾ ಸಾಮರ್ಥ್ಯ ವೃದ್ಧಿಸಿ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ವಿ. ಪದ್ಮನಾಭ್ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದರು.
ಕಳೆದ ಮೂರು ದಿನಗಳಿಂದ ಎಸ್ಎಸ್ಎಲ್ಸಿ ಪ್ರಥಮ ಪೂರ್ವ ಸಿದ್ಧತಾ ಪರೀಕ್ಷೆ ಫಲಿತಾಂಶವನ್ನು ಪವರ್ ಪಾಯಿಂಟ್ ಪ್ರಸೆಂಟೇಷನ್ ಮೂಲಕ ತಾಲೂಕುವಾರು ವಿಶ್ಲೇಷಣೆ ನಡೆಸಿ ಅವರು ಈ ಸೂಚನೆ ನೀಡಿದರು. ಇಲಾಖೆಯ ಶಿಕ್ಷಣಾಧಿಕಾರಿ ಜಯರಾಮರೆಡ್ಡಿ, ಎ.ಎನ್.ನಾಗೇಂದ್ರಪ್ರಸಾದ್ ಮತ್ತಿತರ ಅಧಿಕಾರಿಗಳ ತಂಡ ಎಸ್ಎಸ್ಎಲ್ಸಿ ಪ್ರಥಮ ಪೂರ್ವ ಸಿದ್ಧತಾ ಪರೀಕ್ಷೆ ತಾಲ್ಲೂಕುವಾರು ಫಲಿತಾಂಶ ವಿಶ್ಲೇಷಣೆ ನಡೆಸಿ ಜಿಲ್ಲೆ ಸ್ಥಾನ ಉಳಿಸಿಕೊಳ್ಳುವುದರ ಜತೆಗೆ ಗುಣಾತ್ಮಕ ಫಲಿತಾಂಶ ಪಡೆದುಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಕಳೆದ ಅರ್ಧವಾರ್ಷಿಕ ಪರೀಕ್ಷಾ ಫಲಿತಾಂಶದ ನಂತರ ಇದೀಗ ಪ್ರಥಮ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಒಟ್ಟಾರೆಯಾಗಿ ಸರ್ಕಾರಿ ಪ್ರೌಢಶಾಲೆಗಳು ಶೇ.5ರಷ್ಟು, ಅನುದಾನಿತ ಶೇ.2 ಹಾಗೂ ಅನುದಾನ ರಹಿತ ಶಾಲೆಗಳು ಶೇ.1 ರಷ್ಟು ಫಲಿತಾಂಶ ಏರಿಕೆಯಾಗಿದೆ.
ಒಟ್ಟಾರೆ ಜಿಲ್ಲೆಯಲ್ಲಿ 2,077 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, ಇದರಲ್ಲಿ 13,823 ಮಂದಿ ತೇರ್ಗಡೆಯಾಗುವ ಮೂಲಕ ಶೇ.67.89 ಫಲಿತಾಂಶ ಬಂದಿದೆ.
ಶೇ.66.45 ಬಾಲಕರು, ಹಾಗೂ 69.34 ಬಾಲಕಿಯರು ತೇರ್ಗಡೆಯಾಗಿದ್ದು, ಒಟ್ಟಾರೆಯಾಗಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ತಾಲೂಕುವಾರು ಅಂಕಿ ಅಂಶಗಳಲ್ಲಿ ಶ್ರೀನಿವಾಸಪುರ ತಾಲೂಕಿನಲ್ಲಿ ಶೇ.79.55 ಫಲಿತಾಂಶ ಬರುವ ಮೂಲಕ ಪ್ರಥಮ ಸ್ಥಾನ ಗಳಿಸಿದ್ದರೆ, ಉಳಿದಂತೆ ಮುಳಬಾಗಿಲು-ಶೇ.72.51 ಕೆಜಿಎಫ್ ವಲಯ-ಶೇ.69.13 ಕೋಲಾರ ತಾಲೂಕು-ಶೇ.66.66, ಬಂಗಾರಪೇಟೆ 61.12 ಹಾಗೂ  ಮಾಲೂರು-ಶೇ59.09 ರಷ್ಟು ಫಲಿತಾಂಶ ಪಡೆದುಕೊಂಡಿದೆ.
ತಾಲೂರು ಫಲಿತಾಂಶ ವಿಶ್ಲೇಷಣೆ ಸಂದರ್ಭದಲ್ಲಿ ಪವರ್ ಪಾಯಿಂಟ್ ಪ್ರಸೆಂಟೇಷನ್ ನೀಡಿದ ಪರೀಕ್ಷಾ ನೋಡೆಲ್ ಅಧಿಕಾರಿ ಎ.ಎನ್. ನಾಗೇಂದ್ರ ಪ್ರಸಾದ್ ಅನನ್ಯ ಸ್ಪೂರ್ತಿ ಮಾರ್ಗದರ್ಶಿಯಲ್ಲಿನ ಅಂಶಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮುಖ್ಯ ಶಿಕ್ಷಕರು ಹೆಚ್ಚಿನ ಜವಾಬ್ದಾರಿ ವಹಿಸಬೇಕೆಂದು ಸೂಚಿಸಿದರು.
ವಿಶೇಷ ತರಗತಿಗಳನ್ನು ಕ್ರಮಬದ್ದವಾಗಿ ನಿರ್ವಹಿಸುವಂತೆ ಮುಖ್ಯ ಶಿಕ್ಷಕರು ನಿಗಾ ವಹಿಸಬೇಕೆಂದು ಸೂಚಿಸಿದ ಡಿಡಿಪಿಐ ಅವರು, ಗುಂಪು ಅಧ್ಯಯನದ ಮೂಲಕ ಕಲಿಕೆ ದೃಢೀಕರಣ ಮಾಡುವಂತೆ ಸಲಹೆ ನೀಡಿದರು.
ಅರ್ಧವಾರ್ಷಿಕ ಪರೀಕ್ಷೆಯಲ್ಲಿ ವಿಜ್ಞಾನ ವಿಷಯದಲ್ಲಿ ಮಕ್ಕಳ ಹಿನ್ನಡೆಯನ್ನು ಗಮನಿಸಿ ಇಲಾಖೆ ಭೌತಶಾಸ್ತ್ರದ 105, ರಸಾಯನಿಕ ಶಾಸ್ತ್ರ-67ಹಾಗೂ ಜೀವಶಾಸ್ತ್ರದ 77 ಅನ್ವಯಿಕ ಪ್ರಶ್ನೆಗಳನ್ನು ಸಿದ್ಧಗೊಳಿಸಿ ಶಾಲೆಗಳಿಗೆ ಒದಗಿಸಲಾಗಿದೆ. ಇದಕ್ಕೂ ಮೊದಲೇ ಆರು ಸೆಟ್ ಪ್ರಶ್ನೆ ಪತ್ರಿಕೆಗಳನ್ನು ಒದಗಿಸಲಾಗಿದೆ, ಶಿಕ್ಷಕರು ತೆರೆದ ಪುಸ್ತಕ ಪರೀಕ್ಷೆ ಬರೆಸಿ ಮಕ್ಕಳಲ್ಲಿ ಕಲಿಕೆ ದೃಢೀಕರಣ ಮಾಡಬೇಕೆಂದು ತಿಳಿಸಿದರು. ಪ್ರತಿ ಪರೀಕ್ಷೆ ನಂತರ ಮಕ್ಕಳು ಉತ್ತರ ಬರೆಯದ ಪ್ರಶ್ನೆಗಳನ್ನು ಪಟ್ಟಿ ಮಾಡಿ ಅವುಗಳಿಗೆ ಪುನಃ ಉತ್ತರ ಬರೆಸಿ ಕಲಿಕಾ ಸಾಮರ್ಥ್ಯವನ್ನು ದೃಢಪಡಿಸಿಕೊಳ್ಳಬೇಕೆಂದರು. ವಿಜ್ಞಾನ ವಿಷಯದಲ್ಲಿನ ಹಿನ್ನಡೆ ಹೋಗಲಾಡಿಸಲು ಇಲಾಖೆ ನೀಡಿರುವ ಅನ್ವಯಿಕ ಪ್ರಶ್ನೆಗಳಿಗೆ ತರಗತಿಯಲ್ಲಿ ಉತ್ತರ ಬರೆಸಬೇಕೆಂದು ತಿಳಿಸಿ, ವಿಜ್ಞಾನ ಚಿತ್ರಗಳನ್ನು ಬರೆಸುವಾಗ ಶಾಲೆಯ ಚಿತ್ರಕಲಾ ಶಿಕ್ಷಕರ ಸಹಕಾರ ಪಡೆದುಕೊಳ್ಳುವಂತೆ ಸೂಚಿಸಿದರು.
ರಸಪ್ರಶ್ನೆ, ಸೆಮಿನಾರ್ ಮತ್ತಿತರ ಪಠ್ಯೇತರ ಚಟುವಟಿಕೆಗಳ ಮೂಲಕ ಕಲಿಕೆ ದೃಢೀಕರಣ, ಶಿಕ್ಷಕರು ಮಾಡಿರುವ ಮೌಲ್ಯ ಮಾಪನವನ್ನು ಮುಖ್ಯ ಶಿಕ್ಷಕರು ಕಡ್ಡಾಯವಾಗಿ ಪರಿಶೀಲಿಸುವುದು ಅತಿ ಮುಖ್ಯವೆಂದರು. ಪ್ರತಿ ಪೂರ್ವ ಸಿದ್ಧತಾ ಪರೀಕ್ಷಾ ನಂತರ ಪೋಷಕರು, ತಾಯಂದಿರ ಸಭೆ ಕರೆದು ಅವರ ಮಕ್ಕಳ ಪ್ರಗತಿಯ ಮಾಹಿತಿ ನೀಡಿ ಮನೆಗಳಲ್ಲಿ ಮಕ್ಕಳ ಓದಿನ ಬಗ್ಗೆ ಗಮನಹರಿಸುವಂತೆ ಕೋರಲು ಸೂಚಿಸಿದರು.
ಬರವಣಿಗೆ ಉತ್ತಮ ಪಡಿಸುವುದರ ಜತೆಗೆ ಎಸ್ಎಲ್ಎಲ್ಸಿ ಪರೀಕ್ಷೆಯ ಮಹತ್ವ, ಉತ್ತಮ ಅಂಕ ಗಳಿಸಿದಲ್ಲಿ ಸರ್ಕಾರದಿಂದ ಸಿಗುವ ಸೌಲಭ್ಯಗಳ ಮಾಹಿತಿ ನೀಡಿ ಮಕ್ಕಳನ್ನು ಪ್ರೋತ್ಸಾಹಿಸುವಂತೆ ತಿಳಿಸಿದರು. ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ ಚಿಲಕಾಂತಮಠ್, ವಿಷಯ ಪರೀಕ್ಷಕ ವೆಂಕಟಸ್ವಾಮಿ, ಬಾಬು ಜನಾರ್ದನ ನಾಯ್ಡು, ಸಿ.ಆರ್.ಅಶೋಕ್, ಎನ್. ರಾಜಣ್ಣ, ಮಲ್ಲಿಕಾರ್ಜುನಾಚಾರಿ, ಶಿವಲಿಂಗಯ್ಯ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಗೋಪಾಲರೆಡ್ಡಿ ಮತ್ತಿತರರು ಫಲಿತಾಂಶ ವಿಶ್ಲೇಷಣೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement