ಚುಟುಕು ಸಾಹಿತ್ಯ ಪರಿಷತ್ನಿಂದ 'ನಾ ಕಂಡ ಕವಿ'
ಮಾಲೂರು: ಕಾವ್ಯದಲ್ಲಿ ಗ್ರಾಮೀಣ ಸೂಗಡು ತುಂಬಿ ಸಮಾಜ ಮುಖಿಯಾಗಿ ಸಾಗುತ್ತಿರುವ ದೊಡ್ಡಕಲ್ಲಳ್ಳಿ ನಾರಾಯಣಪ್ಪ ಉದಯೋನ್ಮೂಕ ಕವಿಗಳಿಗೆ ಮಾದರಿಯಾಗಿದ್ದಾರೆ ಎಂದು ಸಾಹಿತಿ ಜ.ಮು. ಚಂದ್ರ ಹೇಳಿದರು.
ಇಲ್ಲಿನ ಚುಟುಕು ಸಾಹಿತ್ಯ ಪರಿಷತ್ ಪಟ್ಟಣದ ಕೃಷಿಕ ಸಮಾಜದಲ್ಲಿ ಆಯೋಜಿಸಿದ್ದ ನಾ ಕಂಡ ಕವಿ ಕಾರ್ಯಕ್ರಮದಲ್ಲಿ ಮಾತನಾಡಿ, ತಮ್ಮ ಸಾಹಿತ್ಯ ಮೂಲಕ ಗ್ರಾಮೀಣ ಸಂಸ್ಕೃತಿಯನ್ನು ಬೆಳೆಸುವ ಅವರ ಸಾಹಿತ್ಯ ಕೃಷಿ ಇತರಿಗೆ ಮಾದರಿಯಾಗಿದೆ ಎಂದರು.
ಸಾಹಿತಿ ಡಾ.ನಾ. ಮುನಿರಾಜು ಮಾತನಾಡಿದರು. ಕವಿ ಡಿ.ಟಿ. ಪ್ರಸನ್ನ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂಧರ್ಭದಲ್ಲಿ ದೊಡ್ಡಕಲ್ಲಳ್ಳಿ ನಾರಾಯಣಪ್ಪ ಹಾಗೂ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಮಾಧ್ಯಮದ ಬಿ.ಎ. ಯಲ್ಲಿ ಪ್ರಥಮ ರ್ಯಾಂಕ್ ಗಳಿಸಿದ ಸಿ.ಎಂ.ತಿಮ್ಮರಾಯಪ್ಪರನ್ನು ಸನ್ಮಾನಿಸಲಾಯಿತು. ಸಾಹಿತಿ ಮಾಸ್ತಿ ಕೃಷ್ಣಪ್ಪ ಪ್ರಾಸ್ತಾವಿಕ ಮಾತನ್ನಾಡಿದರು. ಸಾಹಿತಿ ವೇಣುಗೋಪಾಲ್ ವಹ್ನಿ ಇದ್ದರು.
ನಿವೃತ್ತ ಬೆಸ್ಕಾಂ ನೌಕರನಿಗೆ ರೈತರಿಂದ ಆತ್ಮೀಯ ಸನ್ಮಾನ
ಚಿಕ್ಕಬಳ್ಳಾಪುರ: ಬೆಸ್ಕಾಂ ಕಚೇರಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿ, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ನಿವೃತ್ತ ಬೆಸ್ಕಾಂ ನೌಕರ ಬಷಿರ್ರನ್ನು ರೈತರು ಆತ್ಮೀಯವಾಗಿ ಸನ್ಮಾನಿಸಿದರು.
ತಾಲೂಕಿನ ನಂದಿಕ್ರಾಸ್ ಸುತ್ತಮುತಲಿನ ಗ್ರಾಮಗಳಾದ ಯಲುವಹಳ್ಳಿ, ದೇವಿಶೆಟ್ಟಿಹಳ್ಳಿ, ಬಿಡಾಗಾನಹಳ್ಳಿ ಮತ್ತು ಇತರೆ ಗ್ರಾಮಗಳ ರೈತರು ನೇತೃತ್ವದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬಷಿರ್ ಅವರ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು. ಮುಖಂಡ ದೇವಿಶೆಟ್ಟಿಹಳ್ಳಿ ಆನಂದ್ ಮಾತನಾಡಿ, ಬಷಿರ್ ಅವರು ಕಳೆದ 14 ವರ್ಷಗಳಿಂದ ಪ್ರಾಮಾಣಿಕ ಸೇವೆ ಸಲ್ಲಿಸಿ ರೈತ ಸ್ನೇಹಿಯಾಗಿದ್ದರು. ರಾತ್ರಿ ವೇಳೆಯಲ್ಲೂ ರೈತರ ದೂರವಾಣಿ ಕರೆಗೆ ಸ್ಪಂದಿಸಿ ನಡೆದು ಬಂದು ಸಮಸ್ಯೆಗೆ ಸ್ಪಂದಿಸುತ್ತಿದ್ದರು. ಇವರ ಸೇವೆ ಇತರರಿಗೆ ಮಾದರಿಯಾಗಬೇಕೆಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಬೆಸ್ಕಾಂ ನಿವೃತ್ತ ನೌಕರ ಬಷಿರ್, ನನ್ನ ಸುಧೀರ್ಘ ಸೇವೆಯಲ್ಲಿ ಇಲ್ಲಿನ 14 ವರ್ಷಗಳ ಸೇವೆ ಮರೆಯಲಾಗದು. ಇಲ್ಲಿನ ರೈತರು ನನ್ನನ್ನು ಅವರ ಮನೆಯ ಮಗನಂತೆ ಕಾಣುತ್ತಿದ್ದರು ಎಂದು ತಿಳಿಸಿದರು. ವೆಂಕಟರಾಜು, ರಾಮಲಿಂಗರಾಜು, ಆಂಜಿನಪ್ಪ, ನಾರಾಯಣಸ್ವಾಮಿ, ರಾಜಣ್ಣ, ರಾಮಾಣ್ಣ ಇದ್ದರು.