ಮನೆ ಬಾಗಿಲು ಮುರಿದು ಕಳ್ಳತನ
ಕೋಲಾರ: ನಗರದ ಗಲ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಶಾಂತಿ ನಗರದಲ್ಲಿ ಮನೆ ಬಾಗಿಲು ಮುರಿದು ಚಿನ್ನಾಭರಣಗಳನ್ನು ಕಳವು ಮಾಡಲಾಗಿದೆ. ಮನೆ ಮಾಲೀಕ ನವೀದ್ ಪಾಷ ಕುಟುಂಬದೊಂದಿಗೆ ಊರಿಗೆ ಹೋಗಿದ್ದಾಗ ಈ ಘಟನೆ ನಡೆದಿದೆ. ಕಳ್ಳರು ಮನೆ ಬಾಗಿಲು ಮುರಿದು ಒಳನುಗ್ಗಿ ಆಲ್ಮಾರದಲ್ಲಿ ಸುಮಾರು 50 ರಿಂದ 60 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ನವೀದ್ ಪಾಷ ಅವರು ಭಾನುವಾರ ಬೆಳಿಗ್ಗೆ ಊರಿನಿಂದ ಬಂದಾಗ ಮನೆಯಲ್ಲಿ ಕಳವು ಆಗಿರುವುದು ಗೊತ್ತಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
ಸರ ದೋಚಿ ಪರಾರಿ
ಕೋಲಾರ: ನಗರದ ಟಮಕ ಬಳಿಯ ಮೆಸ್ ಬಾನ್ ಹೋಟೆಲ್ ಬಳಿ ಬೈಕಿನಲ್ಲಿ ಬರುತ್ತಿದ್ದ ಜಾಲಪ್ಪ ಆಸ್ಪತ್ರೆಯ ನರ್ಸ್ ಕಮಲಮ್ಮ ಎಂಬುವರ ಕೊರಳಿನಲ್ಲಿದ್ದ ಚಿನ್ನದ ಸರವನ್ನು ದುಷ್ಕರ್ಮಿಗಳು ದೋಚಿ ಪರಾರಿ ಆಗಿದ್ದಾರೆ. ಕಮಲಮ್ಮ ಅವರು ಸೋಮಶೇಖರ್ ಎಂಬುವರ ಬೈಕ್ನಲ್ಲಿ ಮನೆಗೆ ಹೋಗುತ್ತಿದ್ದಾಗ ಇವರನ್ನು ಹಿಂಬಾಲಿಸಿ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ವಿಳಾಸ ಕೇಳುವ ನೆಪದಲ್ಲಿ ಕಮಲಮ್ಮನವರ ಕೊರಳಿನಲ್ಲಿದ್ದ ಸುಮಾರು 80 ಗ್ರಾಂ ಚಿನ್ನದ ಸರವನ್ನು ದೋಚಿದ್ದಾರೆ. ಈ ಸಂಬಂಧ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ಅಪಘಾತ: ಪೇದೆ ಬಲಿ
ಚಿಂತಾಮಣಿ: ಎಪಿಆರ್ಟಿಸಿ ಬಸ್ಸೊಂದು ಅತಿ ವೇಗ ಮತ್ತು ಅಜಾಗೃತೆಯಿಂದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ವ್ಯಕ್ತಿಯೊಬ್ಬರು ಮೃತಪಟ್ಟು, ಮೂರು ಮಂದಿ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮುನಗನಹಳ್ಳಿ ಗೇಟ್ ಬಳಿ ನಡೆದಿದೆ.
ಬೆಂಗಳೂರುನಲ್ಲಿ ಕೆಎಸ್ಆರ್ಪಿ ಮುಖ್ಯಪೇದೆಯಾಗಿ ಕಾರ್ಯನಿರ್ವಹಿಸುತ್ತಿರುವ ವೆಂಕಟಾಚಲಪತಿ(52) ಮೃತ ಪಟ್ಟಿರುವ ವ್ಯಕ್ತಿಯಾಗಿದ್ದು, ಇವರ ಜೊತೆ ಕಾರಿನಲ್ಲಿ ಪ್ರಮಾಣಿಸುತ್ತಿದ್ದ ರಮೇಶ್, ಶೇಖರ್, ದೇವರಾಜ್ಗೆ ಗಂಭೀರ ಗಾಯಗಳಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದು ಬಂದಿದೆ. ಸ್ಥಳಕ್ಕೆ ವೃತ್ತ ನಿರೀಕ್ಷಕ ವೆಂಕಟೇಶಮೂರ್ತಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪೊಲೀಸರು ಕೇಸು ದಾಖಲಿಸಿಕೊಂಡು ಬಸ್ಸನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.
ಬೈಕ್-ಜೀಪ್ ಡಿಕ್ಕಿ; ವ್ಯಕ್ತಿ ಸಾವು
ಬಂಗಾರಪೇಟೆ: ಬೈಕ್ ಮತ್ತು ಪೊಲೀಸ್ ಜೀಪ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟು ಮತ್ತೊಬ್ಬ ತೀವ್ರ ಗಾಯಗೊಂಡಿರುವ ಘಟನೆ ನಡೆದಿದೆ. ಮೃತವ್ಯಕ್ತಿಯನ್ನು ಕಾರಿಮಾನಹಳ್ಳಿ ಗ್ರಾಮದ ಮಂಜುನಾಥ್ ಎಂದು ಗುರುತಿಸಲಾಗಿದೆ, ಗಾಯಾಳು ಇದೇ ಗ್ರಾಮದ ಕವಿಕುಮಾರ್ ಆಗಿದ್ದು, ಪಟ್ಟಣದ ಪೊಲೀಸ್ ಠಾಣೆ ಮುಂಬಾಗ ರಬಸವಾಗಿ ಬರುತ್ತಿದ್ದಾಗ ಪೊಲೀಸ್ ಜೀಪ್ಗೆ ಡಿಕ್ಕಿ ಹೊಡೆದಾಗ ಘಟನೆ ಸಂಭವಿಸಿದೆ. ರವಿಕುಮಾರ್ ತಲೆಗೆ ಗಂಭೀರ ಗಾಯವಾಗಿದ್ದು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾರಿಗೆ ಬಸ್ ಬೈಕ್ ಡಿಕ್ಕಿ ವ್ಯಕ್ತಿಗೆ ಗಾಯ
ಪಟ್ಟಣದ ಸರ್ಕಾರಿ ಬಾಲಕರ ಜೂನಿಯರ್ ಕಾಲೇಜು ಎದುರು ಕೆಂಪು ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ವಾಹನ ಸವಾರ ಐನೋರಹೊಸಹಳ್ಳಿ ಗ್ರಾಮದ ರಫಿಕ್ ತೀವ್ರ ಗಾಯಗೊಂಡು ಕೋಲಾರದ ಜಾಲಪ್ಪ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಎರಡು ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.
ವಿದ್ಯಾರ್ಥಿ ನಾಪತ್ತೆ
ಚಿಂತಾಮಣಿ: ಶಾಲೆಗೆ ಹೋದ ವಿದ್ಯಾರ್ಥಿ ನಾಪತ್ತೆಯಾಗಿರುವುದಾಗಿ ಬಟ್ಲಹಳ್ಳಿ ಠಾಣೆ ಪೊಲೀಸರಿಗೆ ಪೋಷಕರು ದೂರು ನೀಡಿದ್ದಾರೆ. ತಾಲೂಕಿನ ಇರಗಂಪಲ್ಲಿ ಗ್ರಾಮದ ರಾಮೇಶ್ವರ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ವಿದ್ಯಾರ್ಥಿ ವಿ. ಶ್ರೀಕಾಂತ್ ಜ.13 ರಂದು ಶಾಲೆಗೆ ಹೋದವನು ಹಿಂತಿರುಗಿಲ್ಲ. ತಂದೆ ವೆಂಕಟೇಶಪ್ಪ ಬಟ್ಲಹಳ್ಳಿ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ. ಸುಳಿವು ಸಿಕ್ಕಲ್ಲಿ ಬಟ್ಲಹಳ್ಳಿ ಠಾಣೆ ಪೊಲೀಸರಿಗೆ 08154 - 247265 ಮಾಹಿತಿ ನೀಡಲು ಕೋರಿದ್ದಾರೆ.
ಇಂದು ವಿದ್ಯುತ್ ವ್ಯತ್ಯಯ
ಚಿಂತಾಮಣಿ: ನಗರದ ವಿವಿಧ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರ ತನಕ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ನಗರದ ಅಗ್ರಹಾರ, ಭೋವಿ ಕಾಲೋನಿ, ಕೆಎಸ್ಆರ್ಟಿಸಿ ರಸ್ತೆ, ನೆಕ್ಕುಂದಿ ಪೇಟೆ, ದೊಡ್ಡಪೇಟೆ, ಆಜಾದ್ ಚೌಕ ಸುತ್ತಮುತ್ತ ಫೆ.10 ರ ಬೆಳಗ್ಗೆ 10 ರಿಂದ ಸಂಜೆ 5 ರ ತನಕ ವಿದ್ಯುತ್ ಸ್ಥಗಿತಗೊಳಿಸಲಾಗುವುದೆಂದು ಬೆಸ್ಕಾಂ ಅಭಯಂತರ ಸೀನಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.