ಸರ್ಕಾರಿ ಪಿಯು ಕಾಲೇಜಿನ ಕೊಠಡಿಗೆ ಬೆಂಕಿ
ಕೋಲಾರ: ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರ ಕೊಠಡಿಯಲ್ಲಿದ್ದ ಕಬ್ಬಿಣದ ಬೀರುವಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಪ್ರಮುಖ ಕಡತಗಳನ್ನು ಸುಟ್ಟು ಹಾಕಿರುವ ಘಟನೆ ನಡೆದಿದೆ.
ಶನಿವಾರ ಮಧ್ಯರಾತ್ರಿ ಇಲ್ಲವೇ ಭಾನುವಾರ ಬೆಳಗಿನ ಜಾವ ಕಿಡಿಗೇಡಿಗಳು ಡಿಡಿಪಿಐ ಕಚೇರಿಗೆ ಹೊಂದಿಕೊಂಡಿರುವ ಕಾಲೇಜಿನ ತರಗತಿ ಕೊಠಡಿಯ ಕಿಟಕಿಯಿಂದ ನುಸುಳಿ ಬಂದು ಉಪ ಪ್ರಾಂಶುಪಾಲ ಗೋವಿಂದಪ್ಪನವರ ಕೊಠಡಿಯ ಬಾಗಿಲು ಮುರಿದು ಒಳನುಗ್ಗಿ ಈ ಕೃತ್ಯವೆಸಗಿದ್ದಾರೆ.
ಬೀರುವಿನಲ್ಲಿದ್ದ ಕಡತಗಳನ್ನು ನಾಶಪಡಿಸಿ ಅದರ ಮೂಲಕ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಯಾರೋ ಬೇಕಾಗಿಯೇ ಕಿಡಿಗೇಡಿಗಳ ಮೂಲಕ ಬೆಂಕಿ ಹಾಕಿಸಿರಬಹುದೆಂಬ ಅನುಮಾನ ಉಂಟಾಗಿರುವುದರಿಂದ ಕೋಲಾರ ನಗರ ಠಾಣೆ ಪೊಲೀಸರು ಉಪ ಪ್ರಾಂಶುಪಾಲ ಗೋವಿಂದಪ್ಪನವರಿಂದ ಮಾಹಿತಿ ಸಂಗ್ರಹಣೆ ಮಾಡಿ, ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಭಾನುವಾರ ಬೆಳಿಗ್ಗೆ ಕಾಲೇಜಿನ ಮೈದಾನದಲ್ಲಿ ಫುಟ್ಬಾಲ್ ಆಡುತ್ತಿದ್ದ ಆಟಗಾರರು ಕಾಲೇಜಿನ ಮೇಲ್ಛಾವಣಿಯಿಂದ ದಟ್ಟವಾದ ಹೊಗೆ ಬರುತ್ತಿರುವುದನ್ನು ಗಮನಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆಟಗಾರರಿಂದ ಮಾಹಿತಿ: ಅದೇ ವೇಳೆಗೆ ಕಾಲೇಜಿಗೆ ಕಾರ್ಯನಿಮಿತ್ತ ಬಂದ ಅಟೆಂಡರ್ ಶ್ರೀನಿವಾಸ್ ಉಪ ಪ್ರಾಂಶುಪಾಲರ ಕೊಠಡಿಗೆ ಬೆಂಕಿ ಬಿದ್ದಿರುವ ವಿಷಯ ತಿಳಿದು ಗಾಬರಿಯಿಂದ ಉಪ ಪ್ರಾಂಶುಪಾಲ, ಲ್ಯಾಬ್ ಆಸಿಸ್ಟಂಟ್ ಗುಣಭೂಷಣ್ ಅವರಿಗೆ ದೂರವಾಣಿ ಮೂಲಕ ವಿಷಯ ಮುಟ್ಟಿಸಿದ್ದಾರೆ.
ಗುಣಭೂಷಣ್ ಅವರು ಲ್ಯಾಬ್ಗೆ ಬೆಂಕಿ ಬಿದ್ದಿರಬಹುದೆಂದು ಸ್ಥಳಕ್ಕೆ ಓಡಿ ಬಂದಿದ್ದಾರೆ. ಪೊಲೀಸರ ಮೂಲಕ ಮಾಹಿತಿ ತಿಳಿದ ಆಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾಲೇಜಿನ ಗೇಟಿನ ಬೀಗ ತೆಗೆಸಿ ಜಲ ಪಿರಂಗಿಯೊಂದಿಗೆ ಉಪ ಪ್ರಾಂಶುಪಾಲರ ಕೊಠಡಿಗೆ ಹೋಗಿ ಬೆಂಕಿ ನಂದಿಸುವ ವೇಳೆಗೆ ಸಾಕಷ್ಟು ಕಡತಗಳು, ಸುಮಾರು 5 ಸಾವಿರ ರು.ನಗದು, ದಿನ ಪತ್ರಿಕೆಗಳು, ಸೇರಿದಂತೆ ಪ್ರಮುಖ ದಾಖಲೆಗಳು ಸುಟ್ಟು ಕರಕಲಾಗಿತ್ತು.
ನಗರಠಾಣೆ ಪಿಎಸ್ಐ ಸುಧಾಕರರೆಡ್ಡಿ, ಕ್ರೈಮ್ ಪಿಎಸ್ಐ ಚಂದ್ರಪ್ಪ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಿಡಿಗೇಡಿಗಳು ಬಿಟ್ಟು ಹೋಗಿರುವ ಕುರುಹುಗಳನ್ನು ಪತ್ತೆ ಮಾಡಲು ಬೆರಳಚ್ಚು ತಜ್ಞರನ್ನು ಕರೆಸಿ ತನಿಖೆ ನಡೆಸಲಾಯಿತು.
ಕಳ್ಳರಾಗಿದ್ದರೆ ಕಡತಗಳನ್ನು ಮತ್ತು ನೋಟುಗಳನ್ನು ಸುಡುತ್ತಿರಲಿಲ್ಲ, ಕೈಗೆಸಿಕ್ಕ ಬೆಲೆ ಬಾಳುವ ಕಂಪ್ಯೂಟರ್, ಲ್ಯಾಬ್ನಲ್ಲಿದ್ದ ವಸ್ತುಗಳು ಸೇರಿದಂತೆ ಮತ್ತಿತರ ಸಾಮಗ್ರಿಗಳನ್ನು ಕದಿಯುತ್ತಿದ್ದರು. ಕಡತಗಳನ್ನು ಸುಟ್ಟು ಹಾಕಿರುವುದು ಗಮನಿಸಿದರೆ ಯಾರೋ ಬೇಕಾಗಿಯೇ ದುರುದ್ದೇಶದಿಂದ ಈ ಕೃತ್ಯವೆಸಗಿರಬಹುದೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಕಿಡಿಗೇಡಿಗಳು ಡಿಡಿಪಿಐ ಕಾಂಪೌಂಡಿಗೆ ಹೊಂದಿಕೊಂಡಿರುವ ಕಾಲೇಜಿನ ತರಗತಿ ಕೊಠಡಿಗೆ ನುಗ್ಗಿ ನಂತರ ಉಪ ಪ್ರಾಂಶುಪಾಲರ ಕೊಠಡಿಗೆ ಪ್ರವೇಶಿಸಿ ತಮಗೆ ಬೇಕಾದ ಕಡತಗಳನ್ನು ಇಲ್ಲವೇ ವಸ್ತುಗಳಿಗಾಗಿ ಹುಡುಕಾಡಿ ತಪ್ಪು ಮುಚ್ಚಿಹಾಕಲು ಬೆಂಕಿ ಹಚ್ಚಿರಬಹುದೆಂದು ಶಂಕಿಸಲಾಗಿದೆ.
ಕಿಡಿಗೇಡಿಗಳು ಗ್ರಂಥಾಲಯದ ಕೊಠಡಿಗೂ ನುಗ್ಗಿ ಕಪಾಟುಗಳನ್ನು ಶೋಧಿಸಿದ್ದಾರೆ. ಅಲ್ಲಿ ಏನೇನು ಕಳ್ಳತನವಾಗಿರಬಹುದೆಂದು ಮಾಹಿತಿ ಸಂಗ್ರಹಣೆ ಮಾಡಲಾಗುತ್ತಿದೆ.
ಉಪ ಪ್ರಾಂಶುಪಾಲರು ಹೇಳಿದ್ದು: ಘಟನೆ ಬಗ್ಗೆ ಲ್ಯಾಬ್ ಅಸಿಸ್ಟಂಟ್ ಹಾಗೂ ಅಟೆಂಡರ್ ಮೂಲಕ ವಿಷಯ ತಿಳಿದೊಡನೆ ಕಾಲೇಜಿಗೆ ಬಂದು ನನ್ನ ಕೊಠಡಿಯಲ್ಲಿ ಸಂಭವಿಸಿರುವ ಬೆಂಕಿ ಅನಾಹುತವನ್ನು ಗಮನಿಸಿದ್ದೇನೆ. ಈ ಘಟನೆಯ ಹಿಂದೆ ಯಾರು ಇರಬಹುದೆಂಬುದು ನನಗೆ ತಿಳಿದಿಲ್ಲ, ಕಂಪ್ಯೂಟರ್ ರೂಮ್, ಲ್ಯಾಬ್, ಕಾಲೇಜಿನ ಪ್ರಾಂಶುಪಾಲರ ಕೊಠಡಿ ಇವೆಲ್ಲಾ ಬಿಟ್ಟು ತನ್ನ ಕೊಠಡಿಯ ಮೇಲೆ ಕಿಡಿಗೇಡಿಗಳು ಕಣ್ಣು ಹಾಕಿ ಕಡತಗಳನ್ನು ಸುಟ್ಟು ಹಾಕಿರುವುದು ನೋವುಂಟು ಮಾಡಿದೆ ಎಂದು ಉಪ ಪ್ರಾಂಶುಪಾಲ ಗೋವಿಂದಪ್ಪ ತಿಳಿಸಿದರು.
ನಾನು ನಿವೃತ್ತಿ ಹೊಂದಲು ಇನ್ನು ಮೂರು ತಿಂಗಳು ಮಾತ್ರ ಬಾಕಿ ಇದೆ. ಇಲ್ಲಿ ನನಗೆ ಯಾರೂ ಶತ್ರುಗಳಿಲ್ಲ, ಸೇವೆಯ ಕಡೆ ಗಳಿಗೆಯಲ್ಲಿ ಈ ರೀತಿಯ ಘಟನೆ ನಡೆದಿರುವುದು ಬೇಸರವಾಗಿದೆ, ನನ್ನ ಹೆಸರಿಗೆ ಮಸಿ ಬಳೆಯಲು ಯತ್ನಿಸಿರುವ ದುಷ್ಕರ್ಮಿಗಳನ್ನು ಪೊಲೀಸರು ಶೀಘ್ರವೇ ಪತ್ತೆ ಮಾಡಲಿದ್ದಾರೆಂಬ ವಿಶ್ವಾಸವಿದೆ ಎಂದರು.
ಕಾಲೇಜಿನಲ್ಲಿ ನಡೆದಿರುವ ದುರ್ಘಟನೆ ಪತ್ತೆ ಮಾಡಿ ಕಿಡಿಗೇಡಿಗಳಿಗೆ ಶಿಕ್ಷೆ ಆಗುವಂತೆ ಮಾಡುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಕಡತಗಳು ಸುಟ್ಟು ಹಾಕಿರುವುದರಿಂದ ಅನುಮಾನಗಳ ಹುತ್ತ ಜಾಲಾಡಲು ಪೊಲೀಸರು ಮುಂದಾಗಿದ್ದಾರೆ. ಸೋಮವಾರದಿಂದಲೇ ಕಾರ್ಯಾಚರಣೆ ಚುರುಕುಗೊಳಿಸಲು ಬಯಸಿರುವ ಪೊಲೀಸರು ಕಾಲೇಜಿನ ವಾತಾವರಣ ತಿಳಿಯಲು ತಮ್ಮ ಬಾತ್ಮೀಧಾರರಿಗೆ ಸೂಚನೆ ನೀಡಿದ್ದು ಅದಷ್ಟು ಬೇಗನೆ ಪ್ರಕರಣ ಬಯಲು ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.