ಅಂಗನವಾಡಿ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ
ಗೌರಿಬಿದನೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಂಗನವಾಡಿ ಕೇಂದ್ರಗಳನ್ನು ಖಾಸಗೀಕರಣ ಮಾಡುತ್ತಿರುವುದನ್ನು ವಿರೋಧಿಸಿ ಸಿಐಟಿಯು, ಕರ್ನಾಟಕ ಪ್ರಾಂತ್ಯ ರೈತ ಸಂಘ, ಜನವಾದಿ ಮಹಿಳಾ ಸಂಘಟನೆ ಮತ್ತು ಕೃಷಿ ಕೂಲಿಕಾರರ ಸಂಘ ಪ್ರತಿಭಟನೆ ನಡೆಸಿದವು.
ತಾಲೂಕು ಕಚೇರಿ ಆವರಣದಲ್ಲಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಸಿದ್ದಗಂಗಪ್ಪ, ಅಂಗನವಾಡಿ ಕೇಂದ್ರಗಳ ಮುಖ್ಯ ಉದ್ದೇಶ ಮಕ್ಕಳ ಅಪೌಷ್ಟಿಕತೆ ಹೋಗಲಾಡಿಸುವುದು. ಆದರೆ ಸರ್ಕಾರ ತಪ್ಪು ಧೋರಣೆ ಮುಚ್ಚಿಕೊಳ್ಳಲು ಅಂಗನವಾಡಿ ಕೇಂದ್ರಗಳನ್ನು ಖಾಸಗೀಕರಣ ಮಾಡುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಸಿಪಿಎಂ ಮುಖಂಡ ಸಿ.ಸಿ. ಅಶ್ವತ್ಥಪ್ಪ ಮಾತನಾಡಿ, ಕೇಂದ್ರ ಸಚಿವ ವೀರಪ್ಪ ಮೊಯ್ಲಿಯವರು ಕಳಪೆ ಸಾಮಾಗ್ರಿಗಳ ಪೂರೈಸುತ್ತಿರುವ ವೇದಾಂತ ಪೌಂಡೇಷನ್ ವಿರುದ್ಧ ಕಿಡಿಕಾರಿದರು. ಕರ್ನಾಟಕ ಪ್ರಾಂತ್ಯ ರೈತ ಸಂಘದ ತಾಲೂಕು ಅಧ್ಯಕ್ಷ ರವಿಚಂದ್ರರೆಡ್ಡಿ ಮಾತನಾಡಿದರು. ಲಕ್ಷ್ಮೀದೇವಿ, ಸುಮಿತ್ರಬಾಯಿ, ಸುಶೀಲಮ್ಮ ಇದ್ದರು.
ವರದಕ್ಷಿಣೆ ಕಿರುಕುಳ; ಪ್ರಕರಣ ದಾಖಲು
ಕೆಜಿಎಫ್: ವರದಕ್ಷಿಣೆ ತರುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದ ಪತಿಯ ವಿರುದ್ಧ ಠಾಣೆಯಲ್ಲಿ ದೂರು ನೀಡಿರುವ ಘಟನೆ ರಾಬರ್ಟ್ಸನ್ಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಂಬೇಡ್ಕರ್ನಗರದ ನಿವಾಸಿ ಸವಿತಾಳನ್ನು 2012ರಲ್ಲಿ ವಿನೋದ್ಕುಮಾರ್ ಎಂಬುವರಿಗೆ ಗೌತಂನಗರದ ಚರ್ಚ್ನಲ್ಲಿ ಮದುವೆ ಮಾಡಿಕೊಡಲಾಗಿತ್ತು. ಮದುವೆಯ ಸಮಯದಲ್ಲಿ ವರದಕ್ಷಿಣೆಯಾಗಿ 35 ಸವರನ್ ಚಿನ್ನ, ಒಂದು ಲಕ್ಷ ನಗದು ಹಾಗೂ ಗೃಹಪಯೋಗ ವಸ್ತುಗಳನ್ನು ನೀಡಿದ್ದರು.
ಪತಿ ವಿನೋದ್ಕುಮಾರ್ ಹಾಗೂ ಆತನ ಕುಟುಂಬಸ್ಥರ ವಿರುದ್ಧ ರಾಬರ್ಟ್ಸನ್ಪೇಟೆ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.