ಜೀವನದಲ್ಲಿ ಗುರಿ ಮುಖ್ಯ: ಶಾಸಕ ಎಂ. ರಾಜಣ್ಣ
ಶಿಡ್ಲಘಟ್ಟ: ಸಾಧನೆ ಮಾಡಲು ನಿರ್ಧಿಷ್ಟ ಗುರಿ ಹೊಂದಿರಬೇಕು ಎಂದು ಶಾಸಕ ಎಂ. ರಾಜಣ್ಣ ಹೇಳಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಪ್ರತಿಭೆಯಿರುತ್ತದೆ ಅದನ್ನು ಒಳ್ಳೆಯ ರೀತಿಯಲ್ಲಿ ಬಳಕೆ ಮಾಡಿಕೊಂಡಾಗ ಮಾತ್ರ ಜೀವನದಲ್ಲಿ ಉನ್ನತ ಸ್ಥಾನ ಅಲಂಕರಿಸಲು ಸಾಧ್ಯವಾಗುತ್ತದೆ ಎಂದರು.
ವಿದ್ಯಾರ್ಥಿಗಳಲ್ಲಿ ಉತ್ತಮ ಗ್ರಹಿಕೆಯ ಶಕ್ತಿಯಿರುತ್ತದೆ. ಅದನ್ನು ಬಳಕೆ ಮಾಡಿಕೊಳ್ಳುವುದರೊಂದಿಗೆ ಸಮಾಜದ ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸಬೇಕು ಹಾಗೂ ಸರ್ಕಾರದ ಸೌಲಭ್ಯಗಳನ್ನು ಬಳಕೆ ಮಾಡಿಕೊಂಡು ಉತ್ತಮ ವಿದ್ಯಾರ್ಥಿಗಳಾಗಿ ಎಂದು ಕರೆ ನೀಡಿದರು. ಇದೇ ಸಂಧರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ವಿತರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಎನ್. ಆನಂದ್, ಪುರಸಭೆ ಸದಸ್ಯ ಅಫ್ಸರ್ ಪಾಷ, ಚಿಕ್ಕಮುನಿಯಪ್ಪ, ಪ್ರೇಮಮಂಜುನಾಥ್, ಎನ್. ಬದ್ರಿನಾಥ್, ಸುಬ್ಬಾರೆಡ್ಡಿ, ಮುನಿರಾಜು, ಲಕ್ಷ್ಮಣ ಇದ್ದರು.
ಟೇಕಲ್ ಗ್ರಾಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ
ಟೇಕಲ್: ಟೇಕಲ್ ಗ್ರಾಪಂ ಅಧ್ಯಕ್ಷ ಗಾದಿಗೆ ಅವಿಶ್ವಾಸ ನಿರ್ಣಯ ಕೈಗೊಂಡಿದು,್ದ ಸೋಮವಾರ ಬೆಳಿಗ್ಗೆ ಕೋಲಾರ ಜಿಲ್ಲಾ ಉಪವಿಭಾಗಾಧಿಕಾರಿಗಳಾದ ಮಂಜುನಾಥ್ರವರಿಗೆ ಒಟ್ಟು 10 ಸದಸ್ಯರು ಅವಿಶ್ವಾಸ ನಿರ್ಣಯದ ಪತ್ರಕ್ಕೆ ಸಹಿ ಮಾಡಿ ನೀಡಲಾಯಿತು. ಟೇಕಲ್ ಗ್ರಾಪಂನಲ್ಲಿ ಒಟ್ಟು 15 ಸದಸ್ಯರಿದ್ದು ಇದೀಗ ಮಂಜುಳಾಶಿವಣ್ಣ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಹಿಂದೆ ಒಳ ಒಪ್ಪಂದದಲ್ಲಿ ಮಂಜುಳಾಶಿವಣ್ಣನವರು ಬೇರೆಯವರಿಗೆ ಸ್ಥಾನ ನೀಡಬೇಕಾಗಿದ್ದಾಗಿ ಅವರು ತಡಮಾಡಿದ ಹಿನ್ನಲೆಯಲ್ಲಿ ಅವಿಶ್ವಾಸ ನಿರ್ಣಯ ಕೈಗೊಂಡಿದ್ದು, ಗ್ರಾಪಂ ಕಾರ್ಯಾಲಯಕ್ಕೆ ಕಳೆದ 1 ವರ್ಷದಿಂದ ಪಿಡಿಒ, ಕಾರ್ಯದರ್ಶಿ ಇಲ್ಲದೆ ಪರಿತಪಿಸುವ ಸ್ಥಿತಿಯಲ್ಲಿದ್ದು ಆಡಳಿತ ವ್ಯವಸ್ಥೆ ಕುಂಟಿತಗೊಂಡಿದೆ ಎಂದು ಅವಿಶ್ವಾಸ ನಿರ್ಣಯ ಪತ್ರಕ್ಕೆ ಸಹಿ ಹಾಕಿರುವ ಸದಸ್ಯರು ಆರೋಪಿಸಿದ್ದಾರೆ.