ಪ್ರವಾಸ ಮಂದಿರ ಕಟ್ಟಡ ತೆರವು ಆರಂಭ
-ಎನ್. ವೆಂಕಟೇಶ್
ಚಿಕ್ಕಬಳ್ಳಾಪುರ: ಅದು ಬ್ರಿಟಿಷರ ಕಾಲದ ಕಟ್ಟಡ. ಸ್ವಾತಂತ್ರ್ಯ ಪೂರ್ವದಿಂದ ಈವರೆಗೂ ಅದೆಷ್ಟೋ ಮಂದಿಗೆ ಆಶ್ರಯ ನೀಡಿದ ತಾಣ. ಇದೀಗ ಆ ಕಟ್ಟಡ ಕೇವಲ ನೆನೆಪಿನಲ್ಲಿ ಮಾತ್ರ. ಪ್ರವಾಸಿಗರಿಗೆ ನೆಲೆಯಾಗಿದ್ದ ಸ್ಥಳ ಪ್ರಯಾಣಿಕರ ಅನುಕೂಲಕ್ಕಾಗಿ ವಾಹನ ನಿಲ್ದಾಣವಾಗಿ ಪರಿವರ್ತನೆಯಾಗುತ್ತಿದೆ.
ನಗರದ ಹೃದಯ ಭಾಗದಲ್ಲಿ ಬಿ.ಬಿ. ರಸ್ತೆಗೆ ಹೊಂದಿಕೊಂಡಿರುವ ಹಳೆಯ ಹೆಂಚಿನ ಪ್ರವಾಸಿ ಮಂದಿರ. ಈ ಕಟ್ಟಡದ ಮುಂಭಾಗದಲ್ಲಿ ಲೋಕೋಪಯೋಗಿ ಇಲಾಖೆ 1920 ರಲ್ಲಿ ನಿರ್ಮಿಸಿರುವ ಶಿಲಾನ್ಯಾಸ ಫಲಕ ಹಾಕಿದ್ದು, ಹಳೆಯ ತಂತ್ರಜ್ಞಾನದಲ್ಲಿ ಕಟ್ಟಡ ನಿರ್ಮಾಣವಾಗಿದ್ದರೂ ಇಂದಿಗೂ ಗಟ್ಟಿಯಾಗಿದೆ. ಕಟ್ಟಡದ ಸುತ್ತಮುತ್ತ ನೀಲಗಿರಿ, ಮಾವು, ಬೇವು, ಹುಣಸೇ ಸೇರಿದಂತೆ ನಾನಾ ಜಾತಿಯ ಸುಮಾರು 60 ಕ್ಕೂ ಹೆಚ್ಚು ಮರಗಳಿದ್ದು ಆಕರ್ಷಕ ತಾಣವಾಗಿತ್ತು. ಹಿಂದೆ ಚಿಕ್ಕಬಳ್ಳಾಪುರದ ವಿವಿಧ ಪ್ರವಾಸಿ ತಾಣಗಳಿಗೆ ಆಗಮಿಸುತ್ತಿದ್ದ ಬ್ರಿಟಿಷ್ ಅಧಿಕಾರಿಗಳು ಇಲ್ಲಿ ತಂಗುತ್ತಿದ್ದರು ಎನ್ನಲಾಗಿದೆ. ಇಂತಹ ಇತಿಹಾಸವನ್ನು ಹೊಂದಿರುವ ಸ್ಥಳ ಇದೀಗ ಬದಲಾಗುತ್ತಿದೆ.
ಜಿಲ್ಲಾ ಕೇಂದ್ರವಾದ ನಂತರ ಚಿಕ್ಕಬಳ್ಳಾಪುರಕ್ಕೆ ವಿವಿಧೆಡೆಯಿಂದ ಆಗಮಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕೆಂಬ ಸಾರ್ವಜನಿಕರ ಒತ್ತಾಯದಂತೆ ಪ್ರವಾಸಿ ಮಂದಿರದ ಸ್ಥಳ ಬಸ್ ನಿಲ್ದಾಣವಾಗುತ್ತಿದೆ. ಈಗಾಗಲೇ ಲೋಕೋಪಯೋಗಿ ಇಲಾಖೆ ಮತ್ತು ಕಂದಾಯ ಇಲಾಖೆಗೆ ಸೇರಿರುವ ಒಟ್ಟು 2 ಎಕರೆ 15 ಗುಂಟೆ ಜಾಗವನ್ನು ನಿಲ್ದಾಣ ನಿರ್ಮಾಣಕ್ಕಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸ್ವಾಧೀನಕ್ಕೆ ತೆಗೆದುಕೊಂಡಿದ್ದು 7 ಕೋಟಿ ರು. ವೆಚ್ಚದಲ್ಲಿ 18 ಫ್ಲಾಟ್ ಫಾರಂ, ಸಂಚಾರ ನಿಯಂತ್ರಕರ ಕೊಠಡಿ, ಶೌಚಾಲಯ, ವಿಶ್ರಾಂತಿ ಗೃಹ, ಉಪಾಹಾರ ಗೃಹ, ಮುಂಗಡ ಟಿಕೆಟ್ ಕಾಯ್ದಿರಿಸುವ ಕೊಠಡಿ ಮತ್ತು ವಾಣಿಜ್ಯ ಮಳಿಗೆಗಳು ಸೇರಿದಂತೆ ಅದ್ಧೂರಿ ಬಸ್ ನಿಲ್ದಾಣ ನಿರ್ಮಾಣವಾಗುತ್ತಿದೆ. ಈಗಾಗಲೇ ಪ್ರವಾಸಿ ಮಂದಿರದ ಆವರಣದಲ್ಲಿ ಅನೇಕ ವರ್ಷಗಳಿಂದಿರುವ ಮರಗಳನ್ನು ಸಾಮೂಹಿಕವಾಗಿ ಕಡಿಯಲು ಟೆಂಡರ್ ಕರೆದಿದ್ದು ಮರಗಳನ್ನು ಮಾರಾಟ ಮಾಡಲಾಗುತ್ತಿದೆ.
ಕಟ್ಟಡ ತೆರವು ಶುರು: ಕಳೆದ 15 ದಿನಗಳಿಂದ ಕಟ್ಟಡ ತೆರವು ಕಾರ್ಯಾಚರಣೆಚುರುಕಿನಿಂದ ಸಾಗಿದ್ದು, ಪ್ರವಾಸಿ ಮಂದಿರದಲ್ಲಿ ಉಳಿದುಕೊಳ್ಳುವುದಕ್ಕೆ ಬೇರೆ ಯಾರಿಗೂ ಅವಕಾಶ ನೀಡುತ್ತಿಲ್ಲ. ಮೊದಲ ಹಂತವಾಗಿ ಕಟ್ಟಡದಲ್ಲಿದ್ದ ಪೀಠೋಪಕರಣಗಳು ಮತ್ತು ವಸ್ತುಗಳನ್ನು ಬೇರೆಡೆ ಸಾಗಾಣಿಕೆ ಮಾಡಲಾಗಿದೆ.
ಪ್ರಸ್ತುತ ಗುತ್ತಿಗೆದಾರರು ನಿಯೋಜಿಸಲ್ಪಟ್ಟ ವ್ಯವಸ್ಥಾಪಕ ಸಿಬ್ಬಂದಿ ಉಸ್ತುವಾರಿಯಲ್ಲಿ ಸುಮಾರು 15 ಕ್ಕೂ ಹೆಚ್ಚು ಮಂದಿ ಕೂಲಿ ಕಾರ್ಮಿಕರು ಕಟ್ಟಡದ ಛಾವಣಿಯಲ್ಲಿರುವ ಹೆಂಚುಗಳನ್ನು ತೆಗೆಯುತ್ತಿದ್ದು ಇದಾದ ಮೇಲೆ ಕಟ್ಟಡದಲ್ಲಿರುವ ಮರದ ಬಾಗಿಲು, ಕಿಟಕಿಗಳನ್ನು ಕಿತ್ತು ಕಟ್ಟಡ ತೆರವುಗೊಳಿಸುವ ಕಾರ್ಯಾಚರಣೆ ಕೈಗೊಳ್ಳಲು ಕ್ಷಣಗಣನೆ ಪ್ರಾರಂಭವಾಗಿದೆ.
ಪ್ರವಾಸಿ ಮಂದಿರ ಪತ್ರಿಕಾಗೋಷ್ಠಿಗಳಿಗೆ ಖ್ಯಾತಿ ಪಡೆದುಕೊಂಡಿದ್ದು, ಇದು ಪ್ರಮುಖ ವಿಷಯಗಳು ಹೊರ ಬರುವ ಪ್ರಮುಖ ಕೇಂದ್ರ ಎನಿಸಿಕೊಂಡಿತ್ತು. ಇಂತಹ ಸ್ಥಳದಲ್ಲಿ ಮುಂದಿನ ಎರಡ್ಮೂರು ವರ್ಷಗಳಲ್ಲಿ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ ನಿರ್ಮಾಣವಾಗಿ ಕೆಂಪು ಬಸ್ಸುಗಳು ನಿಲ್ಲಲಿದ್ದು ಪ್ರಯಾಣಿಕರ ಗಜಿಗಜಿ ಕಾಣಲಿದೆ.