ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಭರವಸೆಯಲ್ಲೇ ಕಾಲ ಕಳೆದ ಮೊಯ್ಲಿ

Srinivasa Murthy VN
Updated On : 11 Feb 2014, 12:10 pm

ಬಾಗೇಪಲ್ಲಿ: ಕೇಂದ್ರ ಸಚಿವ ಎಂ. ವೀರಪ್ಪ ಮೊಯಿಲಿ ಸುಳ್ಳು ಭರವಸೆ ಹೇಳಿಕೊಂಡೇ 5 ವರ್ಷ ಕಾಲಹರಣ ಮಾಡಿದರು. ಅವರ ಸಾಧನೆ ಶೂನ್ಯ ಎಂದು ಮಾಜಿ ಸಚಿವ ಬಚ್ಚೇಗೌಡ ಟೀಕಿಸಿದರು.
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಪರವಾಗಿ ಪ್ರಬಲ ಆಕಾಂಕ್ಷಿಯಾಗಿ ಕಣಕ್ಕೆ ಇಳಿಯುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಬಾಗೇಪಲ್ಲಿಗೆ ಭೇಟಿ ನೀಡಿ ಪಕ್ಷದ ಮುಖಂಡರ ಮತ್ತು ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಿದರು.
ನಂತರ ಅವರು ತಾಲೂಕಿನ ಸೋಮನಾಥಪುರ ಗ್ರಾಪಂ ವ್ಯಾಪ್ತಿಯ ದೇವಾಜಲಪಲ್ಲಿ ಗ್ರಾಮದ ಆದಿಬೈರವೇಶ್ವರ ದೇವಾಲಯ, ನಗರ್ಲು ಆಂಜನೇಯ ಸ್ವಾಮಿ ಸೇರಿದಂತೆ  ಗಡಿದಿಂ ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕೇಂದ್ರ ಸಚಿವ ಎಂ. ವೀರಪ್ಪ ಮೊಯಿಲಿರವರು ತಮ್ಮ ಸ್ವಕ್ಷೇತ್ರದ ಜನರು ತಿರಸ್ಕರಿಸಿದ ನಂತರ ಅವರಿಗೆ ಈ ಕ್ಷೇತ್ರದ ಜನತೆ ಪುನರ್ಜನ್ಮ ನೀಡಿದರು. ಆದರೆ ಅವರು ಚುನಾವಣೆಯ ಸಮಯದಲ್ಲಿ ನಿರುದ್ಯೋಗ, ಕೈಗಾರಿಕೆ, ಕುಡಿಯುವ ನೀರು, ಸೈನ್ಸ್ ಪಾರ್ಕ್ ಸೇರಿದಂತೆ ಅನೇಕ ಭರವಸೆಗಳನ್ನು ನೀಡಿದ್ದರು. ಆದರೆ ಅವರು ನೀಡಿರುವ ಯಾವುದೇ ಭರವಸೆ ಈಡೇರಿಸುವಂತಹ ಸಣ್ಣ ಪ್ರಯತ್ನವನ್ನೂ ಮಾಡಿಲ್ಲವೆಂದು ಆರೋಪಿಸಿದರು.
ಕಳೆದ 5 ವರ್ಷ ಕೇಂದ್ರ ಸರ್ಕಾರದಲ್ಲಿ ವಿವಿಧ ರೀತಿಯ ಉನ್ನತ ಸ್ಥಾನಗಳಲ್ಲಿ ಇದ್ದಂತಹ ಇವರು ಕನಿಷ್ಠ ತಮಗೆ ಪುನರ್ ಜನ್ಮ ನೀಡಿರುವ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆಯಾದರು ಏನು ಎಂದು ಪ್ರಶ್ನಿಸಿದರು.
ಕ್ಷೇತ್ರದಲ್ಲಿ ಶಾಶ್ವತ ಕೆಲಸಗಳ ಮೂಲ ಅಭಿವೃದ್ಧಿಗೆ ಶ್ರಮಿಸುವಲ್ಲಿ ಮೊಯಿಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಪ್ರತಿ ಸಮಾರಂಭದಲ್ಲಿಯೂ ಎತ್ತಿನ ಹೊಳೆ ಯೋಜನೆಯನ್ನು ಪ್ರಸ್ತಾಪಿಸುತ್ತಾರೆ. ಆದರೆ ಈವರೆಗೂ ಯೋಜನೆಯನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಲಿಲ್ಲ. ಎತ್ತಿನ ಹೊಳೆ ಯೋಜನೆಯ ಉದ್ಘಾಟನೆಯನ್ನು ಮೂಲ ಸ್ಥಾನದಲ್ಲಿ ಮಾಡುವುದನ್ನು ಬಿಟ್ಟು ಕ್ಷೇತ್ರದ ಮುದ್ದೇನಹಳ್ಳಿ ಬಳಿ ಮಾಡಲು ಹೊರಟಿರುವುದು ರಾಜಕೀಯ ದುರುದ್ದೇಶವಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.
ಸುಳ್ಳು ಹೇಳುವ ಮೂಲಕ ಕ್ಷೇತ್ರದ ಜನತೆಯನ್ನು ಮತ್ತೊಮ್ಮೆ ವಂಚಿಸಲು ಹೊರಟ್ಟಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಈ ಕ್ಷೇತ್ರದ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅಲೆ ಇದೆ. ಅವರು ಈ ದೇಶದ ಪ್ರಧಾನಿಯಾಗಬೇಕೆಂಬುದು ಈ ರಾಷ್ಟ್ರದ ಬಹುತೇಕ ಜನರ ಬಯಕೆಯಾಗಿದೆ. ಮೋದಿಯವರು ಪ್ರಧಾನಿಯಾದರೆ ಈ ದೇಶವನ್ನು ಮುನ್ನಡೆಸುತ್ತಾರೆ ಎಂಬ ನಂಭಿಕೆಯಿಂದ ದೇಶದ ಜನರು ಮೋದಿರವರಿಗೆ ಒಲವು ತೋರಿಸುತ್ತಿದ್ದಾರೆ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಜಿ.ಎಸ್. ಚೌಡರೆಡ್ಡಿ, ತಾ.ಅಧ್ಯಕ್ಷ ಗೂಳೂರು ಲಕ್ಷ್ಮೀನಾರಾಯಣ, ಮಲ್ಲಿಖಾರ್ಜುನರೆಡ್ಡಿ, ಕೃಷ್ಣಯ್ಯ, ವೆಂಕಟರಾಮಪ್ಪ, ಮಂಜುಳಮ್ಮ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement