ಲೋಡ್ ಶೆಡ್ಡಿಂಗ್: ಸಾರ್ವಜನಿಕರ ಆಕ್ರೋಶ
ಚಿಕ್ಕಬಳ್ಳಾಪುರ: ಅನಧಿಕೃತ ಲೋಡ್ ಶೆಡ್ಡಿಂಗ್ ಮೂಲಕ ಜನ ಸಾಮಾನ್ಯರು ಸಮಸ್ಯೆ ಎದುರಿಸಲು ಕಾರಣವಾಗುತ್ತಿರುವ ಬೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ನೂತನ ಇಂಧನ ಸಚಿವ ಡಿ.ಕೆ. ಶಿವಕುಮಾರ್ ರೈತರಿಗೆ ಪ್ರತಿದಿನ 7 ಗಂಟೆ ತ್ರಿಫೇಸ್ ವಿದ್ಯುತ್ ಸರಬರಾಜು ಮಾಡುತ್ತೇವೆ ಎಂದು ಭರವಸೆ ನೀಡಿರುವುದರ ನಡುವೆ ನಗರ ಮತ್ತು ಗ್ರಾಮೀಣ ಭಾಗದೆಲ್ಲೆರಡು ಕಡೆಯೂ ಅಸಮರ್ಪಕ ವಿದ್ಯುತ್ ಸರಬರಾಜಿನಿಂದ ಜನರು ತೊಂದರೆಗೀಡಾತ್ತಿದ್ದಾರೆ. ಕೂಡಲೇ ವಿದ್ಯುತ್ ಸಮಸ್ಯೆ ಬಗೆಹರಿಸದಿದ್ದರೆ ಬೆಸ್ಕಾಂ ಕಚೇರಿ ಮುಂದೆ ಹೋರಾಟ ನಡೆಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಲಾಗಿದೆ.
ನಗರದ ಬಿ.ಬಿ. ರಸ್ತೆಯ ಬೆಸ್ಕಾಂ ಇಇ ಕಚೇರಿಗೆ ಜೆಡಿಎಸ್ ನೇತೃತ್ವದಲ್ಲಿ ತೆರಳಿದ ರೈತ ಮುಖಂಡರು ಅಧಿಕಾರಿಗಳ ಮುಂದೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ವಿ. ನಾಗರಾಜ್ ಮಾತನಾಡಿ, ಕಳೆದ ಒಂದು ವಾರದಿಂದಲೂ ಜಿಲ್ಲಾದ್ಯಂತ ವಿದ್ಯುತ್ ಸಮಸ್ಯೆ ಬಿಗಡಾಯಿಸಿದೆ. ಅನಧಿಕೃತ ಲೋಡ್ ಶೆಡ್ಡಿಂಗ್ ಹೆಚ್ಚಾಗಿದೆ. ನೀರಾವರಿ ಸೌಲಭ್ಯಗಳ ಕೊರತೆ ಎದುರಿಸುತ್ತಿರುವ ಜಿಲ್ಲೆಯಲ್ಲಿ ರೈತರು ಕೊಳವೆ ಬಾವಿಗಳನ್ನು ನಂಬಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದಾರೆ. ಆದರೆ, ವಿದ್ಯುತ್ ಅಸಮರ್ಪಕವಾಗಿ ಸರಬರಾಜಾಗುತ್ತಿರುವುದರಿಂದ ರೈತರು ಬೆಳೆದಂತಹ ದ್ರಾಕ್ಷಿ, ಆಲೂಗಡ್ಡೆ, ರೇಷ್ಮೆ, ತರಕಾರಿ ಬೆಳೆಗಳು ಒಣಗಿ ಹೋಗಿ ನಾಶವಾಗುತ್ತಿದ್ದು ರೈತರು ಆರ್ಥಿಕ ನಷ್ಟಕ್ಕೆ ಗುರಿಯಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿ ಸೇರಿದಂತೆ ವಿವಿಧ ಕೋರ್ಸುಗಳ ಪರೀಕ್ಷೆ ಗಳು ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಕಾಡುತ್ತಿರುವ ವಿದ್ಯುತ್ ಸಮಸ್ಯೆಯಿಂದ ವಿದ್ಯಾರ್ಥಿಗಳು ಆತಂಕದಲ್ಲಿದ್ದು ಅವರ ಭವಿಷ್ಯದೊಂದಿಗೆ ಬೆಸ್ಕಾಂ ಅಧಿಕಾರಿಗಳು ಚೆಲ್ಲಾಟವಾಡುತ್ತಿರುವುದು ಖಂಡನೀಯ ಎಂವರು.
ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ ಮಾತನಾಡಿ, ವಿದ್ಯುತ್ ಸರಬರಾಜಿನ ವಿಷಯಕ್ಕೆ ಸಂಬಂಧಪಟ್ಟಂತೆ ಇಂಧನ ಸಚಿವರು ಹೇಳಿರುವುದಕ್ಕೂ ನಡೆಯುತ್ತಿರುವುದಕ್ಕೂ ಅಜಗಜಾಂತರ ವ್ಯತ್ಯಾಸ ಕಂಡು ಬರುತ್ತಿದ್ದು ಸಿಂಗಲ್ ಫೇಸ್ ಕರೆಂಟೇ ಸರಿಯಾಗಿ ಇರುತ್ತಿಲ್ಲ. ಇಂಧನ ಸಚಿವರು ಭರವಸೆಯನ್ನು ನಂಬಿಕೊಂಡು ರೈತರು ಹೆಚ್ಚಿಗೆ ಬೆಳೆಗಳನ್ನಿಟ್ಟಿದ್ದು ಇದೀಗ ಭರವಸೆ ಹುಸಿಯಾಗಿದೆ ಎಂದರು. ಜಿಪಂ ಸದಸ್ಯ ಮುನೇಗೌಡ, ನಗರಸಭಾ ಸದಸ್ಯ ಕಿಸಾನ್ ಕೃಷ್ಣಪ್ಪ, ಶ್ರೀನಿವಾಸ್, ಮುನಿರಾಜು, ಯಲುವಹಳ್ಳಿ ಸೊಣ್ಣೇಗೌಡ, ಅಬ್ದುಲ್ ರವೂಫ್ ಇದ್ದರು.